Asianet Suvarna News Asianet Suvarna News

ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಒಂದೂವರೆ ತಿಂಗಳು ಸರ್ವೇ: ಸಿಎಂ, ಡಿಕೆಶಿಗೆ ಉಸ್ತುವಾರಿ ಸುರ್ಜೇವಾಲಾ ಸೂಚನೆ

ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿಯನ್ನು ಜ.15ರೊಳಗೆ ಹೈಕಮಾಂಡ್‌ಗೆ ಸಲ್ಲಿಸುವಂತೆ ರಾಜ್ಯ ನಾಯಕತ್ವಕ್ಕೆ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೂಚಿಸಿದ್ದಾರೆ ಎನ್ನಲಾಗಿದೆ. 

One and a half month survey for Lok Sabha candidate selection Says Randeep Singh Surjewala gvd
Author
First Published Nov 29, 2023, 6:43 AM IST

ಬೆಂಗಳೂರು (ನ.29): ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲ 28 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿಯನ್ನು ಜ.15ರೊಳಗೆ ಹೈಕಮಾಂಡ್‌ಗೆ ಸಲ್ಲಿಸುವಂತೆ ರಾಜ್ಯ ನಾಯಕತ್ವಕ್ಕೆ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೂಚಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆ ಕುರಿತು ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಅವರು, ಅಭ್ಯರ್ಥಿಗಳ ಸಂಭಾವ್ಯರ ಪಟ್ಟಿ ಸಿದ್ಧಪಡಿಸುವ ಮುನ್ನ ಡಿಸೆಂಬರ್‌ನಿಂದ ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಸಮಗ್ರ ಸರ್ವೇ ಕಾರ್ಯ ನಡೆಸಬೇಕು. ಇದೇ ವೇಳೆ ಸ್ಥಳೀಯ ನಾಯಕರಿಂದ ಅಭಿಪ್ರಾಯ ಪಡೆಯಬೇಕು. ಈ ಎರಡನ್ನೂ ಒಗ್ಗೂಡಿಸಿ ಪ್ರತಿ ಕ್ಷೇತ್ರಗಳಿಗೂ ಮೂರ್ನಾಲ್ಕು ಮಂದಿಯ ಸಂಭವನೀಯರ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು ಎಂದು ಮೂಲಗಳು ಹೇಳಿವೆ.

25 ನಿಗಮಾಧ್ಯಕ್ಷರು ಫೈನಲ್‌: ನಿಗಮ-ಮಂಡಳಿ ಹುದ್ದೆ ನೇಮಕಾತಿ ಸಂಬಂಧ ಮೊದಲ ಹಂತದ ಪಟ್ಟಿ ಬಹುತೇಕ ಆಖೈರುಗೊಂಡಿದ್ದು, ಈ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಸಲು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಂಭಾವ್ಯರ ಪಟ್ಟಿಯಲ್ಲಿರುವ ಶಾಸಕರು ಹಾಗೂ ನಾಯಕರ ಅಭಿಪ್ರಾಯಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಂಗ್ರಹಿಸಿದ್ದು, ಈ ಅಭಿಪ್ರಾಯಗಳನ್ನು ಆಧಾರವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೊಂದಿಗೆ ಸುರ್ಜೇವಾಲಾ ಅವರು ಅಂತಿಮ ಸಭೆ ನಡೆಸುವ ಸಾಧ್ಯತೆಯಿದೆ. 

ಸಚಿವರ ವಿರುದ್ಧ ಮತ್ತೆ ಶಾಸಕ ಲೆಟರ್‌ಬಾಂಬ್‌: ಸಿಎಂಗೆ ಕೈ ಶಾಸಕ ಬಿ.ಆರ್‌.ಪಾಟೀಲ್‌ ಪತ್ರ

ಬಳಿಕವಷ್ಟೇ ನೇಮಕಾತಿ ಪಟ್ಟಿ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಮೊದಲ ಹಂತದ ಪಟ್ಟಿಯಲ್ಲಿರುವ 25 ಮಂದಿಯೂ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರೇ ಆಗಿದ್ದಾರೆ. ಇವರ ಜತೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 15 ಮಂದಿ ಕಾರ್ಯಕರ್ತರ ಪಟ್ಟಿಯನ್ನೂ ಅಂತಿಮಗೊಳಿಸಲು ಇದೇ ವೇಳೆ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ. 25 ಮಂದಿ ಸಂಭಾವ್ಯರ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಆದರೆ ಈ ಪೈಕಿ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ನಿಗಮ-ಮಂಡಳಿ ನೇಮಕವನ್ನು ಒಪ್ಪದೆ ಇರಬಹುದು. 

ಕರ್ನಾಟಕದಲ್ಲಿ 5 ವರ್ಷವೂ ಗ್ಯಾರಂಟಿ ಯೋಜನೆ ಇರುತ್ತವೆ: ಸಿದ್ದರಾಮಯ್ಯ

ಪಟ್ಟಿ ಬಿಡುಗಡೆ ಬಳಿಕ ಆಕ್ಷೇಪ ವ್ಯಕ್ತಪಡಿಸಿದರೆ ಅಥವಾ ನೇಮಕವನ್ನು ಅಲ್ಲಗಳೆದರೆ ಪಕ್ಷಕ್ಕೆ ಮುಜುಗರವಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಇವರೆಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿದ್ದು, ಅದನ್ನು ಮುಂದಿಟ್ಟುಕೊಂಡು ಮಂಗಳವಾರದ ಸಭೆ ನಡೆಯಲಿದೆ. ಹೀಗಾಗಿ ಅಂತಿಮ ಹಂತದಲ್ಲಿ ಕೆಲ ಬದಲಾವಣೆಗಳೂ ಆಗಬಹುದು ಎಂದು ಹೇಳಲಾಗಿದೆ. ಇದೆಲ್ಲಾ ಮಾತುಕತೆ ಬಳಿಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ ಒಪ್ಪಿಗೆಗೆ ಕಳುಹಿಸಲಿದ್ದಾರೆ. ನಂತರವಷ್ಟೇ ನೇಮಕಾತಿ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios