ಮಂಡ್ಯ, (ಜ.24): ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆಗಳು ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಧಿಕಾರಿಗಳೇ ಮುಖ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಮದ್ದೂರಿನಲ್ಲಿ ಇಂದು (ಭಾನುವಾರ) ಪ್ರತಿಕ್ರಿಯಿಸಿದ ಎಚ್‌ಡಿಕೆ,  ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಣದಲ್ಲಿಡುವಲ್ಲಿ ಹಾಗೂ ಗಣಿ ಸಂಪತ್ತನ್ನು ರಕ್ಷಣೆ ಮಾಡುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ನಿಷ್ಕ್ರೀಯವಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಅಕ್ರಮ ಗಣಿಗಾರಿಕೆಗಳಿರುವ ಬಗ್ಗೆ ಪಕ್ಷದ ವಿಧಾನಪರಿಷತ್ ಸದಸ್ಯರು ಸದನದಲ್ಲಿ ದನಿ ಎತ್ತಿದ್ದಾರೆ. ಅದು ಜಗಜ್ಜಾಹೀರು ಕೂಡ. ಆದರೆ, ಅದನ್ನು ನಿಯಂತ್ರಿಸಲು ಜಿಲ್ಲಾಡಳಿತ, ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆ ಎನ್ನುವುದಕ್ಕೆ ಉತ್ತರವೇ ಸಿಗುತ್ತಿಲ್ಲ ಎಂದು ಹೇಳಿದರು.

ಗಣಿಗಾರಿಕೆಯಿಂದ KRSಗೂ ಕಾದಿದೆ ಮಹಾ ಆಪತ್ತು : ಸಿಎಂ ಖಡಕ್ ಸೂಚನೆ 

ನಾರಾಯಣಗೌಡರಿಗೆ ಈಗ ಅಕ್ರಮ ಗಣಿಗಾರಿಕೆ ಬಗ್ಗೆ ಜ್ಞಾನೋದಯವಾಗಿದೆ. ಒಂದು ವರ್ಷದಿಂದ ಸಚಿವರಾಗಿ ಏನು ಮಾಡುತ್ತಿದ್ದರು. ಅಕ್ರಮ ಗಣಿ ಬಗ್ಗೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಮೈಸೂರು ಸಕ್ಕರೆ ಕಂಪನಿ ಆರಂಭದ ಬಗ್ಗೆ ಭಿನ್ನ ಕೂಗು ಕೇಳಿಬರುತ್ತಿರುವುದರ ಬಗ್ಗೆ ಕೇಳಿದಾಗ, ಎಂಪಿ ಅವರು ಮೈಷುಗರ್ ಕಾರ್ಖಾನೆಗೆ ಅನುಕೂಲ ಮಾಡಿಕೊಡುತ್ತಾರೆ ಎಂದು ಸುಮಲತಾ ಹೆಸರೇಳದೆ ವ್ಯಂಗ್ಯವಾಡಿದರು.

ಸರ್ಕಾರ ಹಣ ಕೊಟ್ಟ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಲ್ಲಿ ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಜನಪ್ರತಿನಿಧಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವುದಾಗಿ ಹೇಳಿದರು.