ಅತ್ತು, ಕರೆದು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಜಗದೀಶ್ ಶೆಟ್ಟರ್ ವ್ಯಂಗ್ಯ
ಈಗ ಏಕೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಯಿತು? ಇದನ್ನು ನೋಡಿದರೆ ರಾಜ್ಯ ಬಿಜೆಪಿ ನಾಯಕರು ಅತ್ತು, ಕರೆದು ರಾಜ್ಯಾಧ್ಯಕ್ಷರ ಆಯ್ಕೆ ಮಾಡಿರುವಂತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.
ಹುಬ್ಬಳ್ಳಿ (ನ.13): ಈಗ ಏಕೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಯಿತು? ಇದನ್ನು ನೋಡಿದರೆ ರಾಜ್ಯ ಬಿಜೆಪಿ ನಾಯಕರು ಅತ್ತು, ಕರೆದು ರಾಜ್ಯಾಧ್ಯಕ್ಷರ ಆಯ್ಕೆ ಮಾಡಿರುವಂತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ. ಇದೀಗ ಆಯ್ಕೆ ಮಾಡಿದ್ದಾರೆ. ರಾಜಕೀಯ ಪಕ್ಷ ಆಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಈ ವಿಷಯದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಎಂದರು.
ಕಾಂಗ್ರೆಸ್ 136 ಸ್ಥಾನ ಬಂದು ಬಲಾಢ್ಯವಾಗಿ ಬೆಳೆದಿದೆ. ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ, ಇಂದಿಗೂ ಬಿಜೆಪಿಯವರು ಆಪರೇಷನ್ ಕಮಲದ ಭ್ರಮೆಯಲ್ಲಿದ್ದಾರೆ ಎಂದರು. ಈಗಾಗಲೇ ಬೇರೆ ಕಡೆ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. 50-60ರಿಂದ ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಮಾಡಲು ಮುಂದಾಗಿರುವುದು ಕೇವಲ ಭ್ರಮೆ ಎಂದು ಕಿಡಿಕಾರಿದರು.
KGFನಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ, ಕೋಚಿಮುಲ್ ವಿಭಜಿಸಲ್ಲ: ಸಿಎಂ ಸಿದ್ದರಾಮಯ್ಯ
ಕೈ ಮೇಲುಗೈ: ಪಂಚರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತದೆ. ಮಧ್ಯಪ್ರದೇಶ, ಛತ್ತೀಸ್‌ಗಡ, ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಜಸ್ಥಾನದಲ್ಲಿ ನೇರಾನೇರ ಸ್ಪರ್ಧೆ ಇದೆ. ಈ ಬಾರಿ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿದೆ ಎಂದರು. ಐಎನ್‌ಡಿಐಎ ಒಕ್ಕೂಟದಲ್ಲಿ ಅಪಸ್ವರ ವಿಚಾರಕ್ಕೆ ಉತ್ತರಿಸಿದ ಶೆಟ್ಟರ್, ಸೀಟು ಹಂಚಿಕೆ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ಲೋಕಸಭಾ ಚುನಾವಣೆ ವೇಳೆಗೆ ಎಲ್ಲವೂ ಸರಿ ಹೋಗುತ್ತದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರವೇ ಲೋಕಸಭಾ ಚುನಾವಣೆಯ ಚಟುವಟಿಕೆ ಬಿರುಸು ಪಡೆದುಕೊಳ್ಳಲಿದೆ. ರಾಜ್ಯದಲ್ಲಿಯೂ ಡಿಸೆಂಬರ್ ನಂತರ ಗರಿಗೆದರಿದ ಚಟುವಟಿಕೆ ನಡೆಯಲಿದೆ ಎಂದರು.
ನಾನು ಆಕಾಂಕ್ಷಿಯಲ್ಲ: ಮುಂಬರುವ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ನಾನು ಪ್ರಬಲ ಆಕಾಂಕ್ಷಿ ಅಂತ ಎಲ್ಲಿಯೂ ಹೇಳಿಲ್ಲ. ಈ ಕುರಿತು ನಿರ್ಧರಿಸಬೇಕಿರುವುದು ಕಾಂಗ್ರೆಸ್ ಹೈಕಮಾಂಡ್. ಘೋಷಣೆ ಮಾಡಿದ ಅಭ್ಯರ್ಥಿ ಪರವಾಗಿ ನಾವೆಲ್ಲ ಕೆಲಸ ಮಾಡುತ್ತೇವೆ. ಲೋಕಸಭೆಯಲ್ಲಿ ರಾಜ್ಯದಲ್ಲಿ ಕನಿಷ್ಠ 12-15 ಸ್ಥಾನಗಳು ಬರುತ್ತದೆ. ಅದು 20ಕ್ಕೂ ಏರಬಹುದು ಎಂದು ಭವಿಷ್ಯ ನುಡಿದರು. ಜಾತಿ ಜನಗಣತಿ ವರದಿ ಅಂಗೀಕಾರಕ್ಕೆ ವಿರೋಧ ವಿಚಾರಕ್ಕೆ ಉತ್ತರಿಸಿದ ಶೆಟ್ಟರ, ಕೆಲ ಲಿಂಗಾಯತ ನಾಯಕರು ವಿರೋಧ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ.
ಬರ ಅಧ್ಯಯನ ರಾಜಕೀಯ, ನಾಟಕೀಯ: ಸಚಿವ ಚಲುವರಾಯಸ್ವಾಮಿ
ಈ ವರದಿ ಬಗ್ಗೆ ವಾದ ಪ್ರತಿವಾದಗಳು ನಡೆದಿದೆ. ರಾಜ್ಯ ಸರ್ಕಾರ ಯೋಗ್ಯವಾದ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಪಾಲಿಕೆ ಆಯುಕ್ತರ ಕಾರ್ಯವೈಖರಿಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ ವಿಚಾರಕ್ಕೆ ಉತ್ತರಿಸಿ, ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಈ ಕುರಿತು ಪಾಲಿಕೆ ಸದಸ್ಯರು ಮತ್ತು ಶಾಸಕರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.