ಚಿಕ್ಕಮಗಳೂರು: ಲೋಕಸಭಾ ಚುನಾವಣೆ ವೇಳೆ ನುಂಗಲಾರದ ತುತ್ತು, ಬಿಜೆಪಿಯಲ್ಲಿ ನಿಲ್ಲದ ಬಣ ರಾಜಕೀಯ..!
ತಾಲೂಕು ಮಂಡಲ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮೂಡಿಗೆರೆ ಬಿಜೆಪಿಯಲ್ಲಿ ಬಣ ರಾಜಕೀಯ ಉದ್ಬವಿಸಿತ್ತು. ಇದೇ ವಿಚಾರವಾಗಿ ಕಳೆದ ತಿಂಗಳು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದ ಮೂಡಿಗೆರೆ ಬಿಜೆಪಿ ಮುಖಂಡರ ಮುನಿಸು ಇನ್ನೂ ಶಮನಗೊಂಡಿಲ್ಲ. ಪಕ್ಷದಿಂದ ಉಚ್ಚಾಟನೆಯಾಗಿದ್ದ ಪಟ್ಟದೂರು ಪುಟ್ಟಣ್ಣ, ಕನ್ನೆಹಳ್ಳಿ ಭರತ್ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಮೂಡಿಗೆರೆಯಲ್ಲಿ ಇಂದು ನಡೆದ ಸ್ವಾಭಿಮಾನಿ ಪರಿವಾರ ಕಾರ್ಯಕರ್ತರ ಸಮಾವೇಶದ ಶಕ್ತಿ ಪ್ರದರ್ಶನಕ್ಕೆ ಪಕ್ಷದ ಮುಖಂಡರು ಸುಸ್ತಾಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮಾ.15): ಚಿಕ್ಕಮಗಳೂರು ಮೂಡಿಗೆರೆ ಬಿಜೆಪಿ ಕದನ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ, ಸ್ವಾಭಿಮಾನಿ ಬಣದ ಬೃಹತ್ ಮೆರವಣಿಗೆಗೆ ಬಿಜೆಪಿ ತಲ್ಲಣಗೊಂಡಿದ್ದು ಮಂಡಲ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣವನ್ನೇ ರದ್ದುಗೊಳಿಸಿದ್ದಾರೆ. ಇದು ನೇರಾ ನೇರ ಲೋಕಸಭಾ ಚುನಾವಣೆ ವೇಳೆ ನುಂಗಲಾರದ ತುತ್ತಾಗುತ್ತಿದೆ.
ಮಂಡಲ ಅಧ್ಯಕ್ಷರ ಆಯ್ಕೆಯ ಗೊಂದಲ
ತಾಲೂಕು ಮಂಡಲ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮೂಡಿಗೆರೆ ಬಿಜೆಪಿಯಲ್ಲಿ ಬಣ ರಾಜಕೀಯ ಉದ್ಬವಿಸಿತ್ತು. ಇದೇ ವಿಚಾರವಾಗಿ ಕಳೆದ ತಿಂಗಳು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದ ಮೂಡಿಗೆರೆ ಬಿಜೆಪಿ ಮುಖಂಡರ ಮುನಿಸು ಇನ್ನೂ ಶಮನಗೊಂಡಿಲ್ಲ. ಪಕ್ಷದಿಂದ ಉಚ್ಚಾಟನೆಯಾಗಿದ್ದ ಪಟ್ಟದೂರು ಪುಟ್ಟಣ್ಣ, ಕನ್ನೆಹಳ್ಳಿ ಭರತ್ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಮೂಡಿಗೆರೆಯಲ್ಲಿ ಇಂದು ನಡೆದ ಸ್ವಾಭಿಮಾನಿ ಪರಿವಾರ ಕಾರ್ಯಕರ್ತರ ಸಮಾವೇಶದ ಶಕ್ತಿ ಪ್ರದರ್ಶನಕ್ಕೆ ಪಕ್ಷದ ಮುಖಂಡರು ಸುಸ್ತಾಗಿದ್ದಾರೆ. ಇತ್ತ ಇಂದು ನಡೆಯಬೇಕಿದ್ದ ಮಂಡಲ ಅಧ್ಯಕ್ಷ ಗಜೇಂದ್ರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವೇ ರದ್ದಾಗಿದೆ. ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷ ರತನ್ ವಿರುದ್ಧ ಆಕ್ರೋಶಗೊಂಡಿರುವ ಭರತ್ ಹಾಗೂ ಪುಟ್ಟಣ್ಣ ಅಮಾನತು ಆದೇಶ ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಪಸಭಾಪತಿ ಪ್ರಾಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಸಮಾಧಾನಿತರನ್ನು ಸಮಾಧಾನ ಪಡಿಸುವಲ್ಲಿ ವಿಫಲರಾಗಿದ್ದಾರೆ.
ಕೋಟಾ ಶ್ರೀನಿವಾಸ ಆಯ್ಕೆಯಿಂದ ನಾಲ್ಕು ಕ್ಷೇತ್ರ ಮೇಲೆ ಪ್ರಭಾವ; ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ?
ಮನವೊಲಿಕೆಗೆ ಕಸರತ್ತು ಆರಂಭ :
ಸದ್ಯ ಮೂಡಿಗೆರೆ ಬಿಜೆಪಿ ಆಂತರಿಕ ಬೇಗುದಿ ಲೋಕಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರಿದ್ದು ಆರಂಭದಲ್ಲೇ ವಿಘ್ನ ಎಂಬಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮೊದಲ ಭೇಟಿಯನ್ನೇ ಮೂಡಿಗೆರೆ ಘಟನೆ ಬಲಿ ಪಡೆದಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ನಿಗದಿಯಾಗಿದ್ದ ಪ್ರವಾಸದಿಂದ ದೂರ ಉಳಿಯುವ ಪರಿಸ್ಥಿತಿ ಪೂಜಾರಿ ಯವರಿಗೆ ಆಗಿದ್ದು ಸ್ವಾಭಿಮಾನಿ ಬಿಜೆಪಿ ಸಮಾವೇಶಕ್ಕೂ ಆಹ್ವಾನ ಇತ್ತು ಎಂದು ಹೇಳಲಾಗುತ್ತಿದೆ. ಪಕ್ಷದಿಂದ ಅಮಾನತ್ತಾಗಿರುವ ಮುಖಂಡರ ಮನವೊಲಿಕೆಗೆ ಕಸರತ್ತು ಇದುವರೆದಿದ್ದು ಶೀಘ್ರವೇ ಶಮನಗೊಳ್ಳುವ ಸ ರಾಜ್ಯ ನಾಯಕರು ಹೊಂದಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೂಡಿಗೆರೆ ಬಿಜೆಪಿಯಲ್ಲಿನ ಬೆಳವಣಿಗೆಗಳು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.