ಓಲೇಕಾರ್‌, ಎಂ.ಪಿ.ಕುಮಾರಸ್ವಾಮಿ, ಸಂತೋಷ್‌, ನಾಗಮಾರಪಳ್ಳಿ ಅತೃಪ್ತಿ, ಮಾಡಾಳು ಪುತ್ರನ ಬೆಂಬಲಿಗರ ಆಕ್ರೋಶ, ಬಂಡಾಯ ಸ್ಪರ್ಧೆ ಘೋಷಣೆ. 

ಬೆಂಗಳೂರು(ಏ.14): ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಅಭ್ಯರ್ಥಿಗಳ ಪಟ್ಟಿಪ್ರಕಟವಾಗುತ್ತಿದ್ದಂತೆ ಟಿಕೆಟ್‌ ವಂಚಿತರ ಅಸಮಾಧಾನ ಭುಗಿಲೆದ್ದಿದ್ದು, ಅಸಮಾಧಾನಿತರು ಬಂಡಾಯದ ಬಾವುಟ ಹಾರಿಸಿದ್ದಾರೆ. ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ, ಮೂಡಿಗೆರೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಅರಸೀಕೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಪ್ತ ಎನ್‌.ಆರ್‌.ಸಂತೋಷ್‌, ಬೀದರ್‌ನಲ್ಲಿ ಸೂರ್ಯಕಾಂತ್‌ ನಾಗಮಾರಪಳ್ಳಿ ಗುರುವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ್ದು, ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಇದೇ ವೇಳೆ, ಎಂ.ಪಿ. ಕುಮಾರಸ್ವಾಮಿ ಹಾಗೂ ಓಲೇಕಾರ ಅವರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.

ಸಿಎಂ ವಿರುದ್ಧ ಓಲೇಕಾರ ವಾಗ್ಧಾಳಿ:

ಹಾವೇರಿಯಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ನೆಹರು ಓಲೇಕಾರ, ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಗುರುವಾರ ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಕಣ್ಣೀರು ಹಾಕಿದರು. ತಮಗೆ ಟಿಕೆಟ್‌ ತಪ್ಪಲು ಮುಖ್ಯಮಂತ್ರಿ ಬೊಮ್ಮಾಯಿ ಕಾರಣ, ಈ ಬಾರಿ ಅವರನ್ನು ಸೋಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರು ಜೆಡಿಎಸ್‌ನಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದೇ ವೇಳೆ, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಬಿಜೆಪಿ, ಸಿಎಂ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಭುಗಿಲೆದ್ದ ಬಂಡಾಯ, ಬಲಿಷ್ಠ ನಾಯಕರ ರಾಜೀನಾಮೆ ಪರ್ವ!

ಇದೇ ವೇಳೆ, ಮೂಡಿಗೆರೆಯಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ, ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ತಮಗೆ ಟಿಕೆಟ್‌ ಕೈ ತಪ್ಪಲು ಸಿ.ಟಿ.ರವಿ ಕಾರಣ ಎಂದು ಕಿಡಿ ಕಾರಿದ್ದಾರೆ. ಅವರು ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅರಸೀಕೆರೆಯಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎನ್‌.ಆರ್‌.ಸಂತೋಷ್‌, ಗುರುವಾರ ಬೆಂಬಲಿಗರ ಸಭೆ ಕರೆದು, ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಅವರು ಕಣ್ಣೀರು ಹಾಕಿದ್ದಾರೆ.

ಇದೇ ವೇಳೆ, ಬೀದರ್‌ನಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸೂರ್ಯಕಾಂತ್‌ ನಾಗಮಾರಪಳ್ಳಿ ಬೆಂಬಲಿಗರ ಸಭೆ ನಡೆಸಿದ್ದು, ಪಕ್ಷೇತರ ಅಥವಾ ಜೆಡಿಎಸ್‌ನಿಂದ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ. ಈ ಮಧ್ಯೆ, ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳ್‌ ಮಲ್ಲಿಕಾರ್ಜುನಗೆ ಟಿಕೆಟ್‌ ಸಿಗದಿದ್ದಕ್ಕೆ ಕಿಡಿಕಾರಿರುವ ಅವರ ಬೆಂಬಲಿಗರು, ಬಿಜೆಪಿ ಧ್ವಜ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಜೆಡಿಎಸ್‌ ಗಾಳ ಹಾಕಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಮಾಯಕೊಂಡದಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಶಾಸಕ ಪ್ರೊ.ಲಿಂಗಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಲ್ಲಿ? ಯಾರು?

ಹಾವೇರಿ: ಶಾಸಕ ನೆಹರು ಓಲೇಕಾರ. ಬಿಜೆಪಿಗೆ ರಾಜೀನಾಮೆ. ಜೆಡಿಎಸ್‌ನಿಂದ ಸ್ಪರ್ಧೆ ಸಂಭವ
ಮೂಡಿಗೆರೆ: ಶಾಸಕ ಎಂ.ಪಿ.ಕುಮಾರಸ್ವಾಮಿ. ಬಿಜೆಪಿಗೆ ವಿದಾಯ. ಜೆಡಿಎಸ್‌ನಿಂದ ಕಣಕ್ಕೆ ಸಾಧ್ಯತೆ
ಅರಸೀಕೆರೆ: ಯಡಿಯೂರಪ್ಪ ಆಪ್ತ ಎನ್‌.ಆರ್‌.ಸಂತೋಷ್‌. ಬಂಡಾಯ ಸ್ಪರ್ಧೆ ಕುರಿತು ಚಿಂತನೆ
ಬೀದರ್‌: ಸೂರ್ಯಕಾಂತ ನಾಗಮಾರಪಲ್ಲಿ. ಪಕ್ಷೇತರ/ಜೆಡಿಎಸ್‌ನಿಂದ ಸ್ಪರ್ಧಿಸುವ ಮುನ್ಸೂಚನೆ
ಚನ್ನಗಿರಿ: ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ. ಬೆಂಬಲಿಗರ ಸಭೆ. ಜೆಡಿಎಸ್‌ ಗಾಳ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.