*   ಕಾಂಗ್ರೆಸ್‌ ಪಾಳಯದಲ್ಲಿಯೂ ಹಲವು ಹೆಸರು*   ಕೊಪ್ಪಳ ಜಿಲ್ಲಾ ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸಿವಿಸಿ ಹೆಸರು ಅಂತಿಮ?*   ರಾಯಚೂರು ಕೋರ್‌ ಕಮಿಟಿಯಲ್ಲಿ ಪರ್ಯಾಯ ಹೆಸರುಗಳು 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.09): ರಾಯಚೂರು(Raichur)-ಕೊಪ್ಪಳ(Koppal) ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ(Vidhan Parishat) ಇನ್ನೇನು ಚುನಾವಣೆ(Election) ಘೋಷಣೆಯಾಗಲಿದ್ದು, ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಾರ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ತೊಡಗಿವೆ.

ಈಗಾಗಲೇ ಬಿಜೆಪಿಯ ಜಿಲ್ಲಾ ಕೋರ್‌ಕಮಿಟಿ ಸಭೆಯಲ್ಲಿ ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ಸಿ.ವಿ. ಚಂದ್ರಶೇಖರ ಅವರ ಹೆಸರನ್ನು ಅಂತಿಮ ಮಾಡಲಾಗಿದೆ ಎನ್ನುವ ಸುದ್ದಿ ಬಿಜೆಪಿ(BJP) ವಲಯದಲ್ಲಿ ಕೇಳಿ ಬರುತ್ತಿದೆ.

ಕೊಪ್ಪಳ ಜಿಲ್ಲೆಯಿಂದ ಇವರ ಹೆಸರು ಮುಂಚೂಣಿಯಲ್ಲಿದ್ದರೂ ರಾಯಚೂರು ಜಿಲ್ಲೆಯಿಂದ ಕೆಲವರು ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಸಿ.ವಿ. ಚಂದ್ರಶೇಖರ ಅವರು ಪಕ್ಷದ ಸೂಚನೆಯಂತೆ ವಿಧಾನಪರಿಷತ್‌ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಾರಾ ಅಥವಾ ಹಿಂದೇಟು ಹಾಕುವರೇ? ಎನ್ನುವುದನ್ನು ಕಾದು ನೋಡಬೇಕಾಗಿದೆ.

'ಬಿಜೆಪಿ ಪಕ್ಷದ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್‌ ಸೇರ್ಪಡೆ'

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಇವರ ಹೆಸರು ಫೈನಲ್‌ ಆಗಿದ್ದು ಅಲ್ಲದೆ ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಇವರದೇ ಹೆಸರಿತ್ತು. ಆದರೆ, ಸಂಸದ ಸಂಗಣ್ಣ ಕರಡಿ ಅವರು ತಮ್ಮ ಪುತ್ರನಿಗಾಗಿ ಪಟ್ಟು ಹಿಡಿದು ಟಿಕೆಟ್‌ ಪಡೆಯುವಲ್ಲಿ ಕೊನೆ ಗಳಿಗೆಯಲ್ಲಿ ಯಶಸ್ವಿಯಾಗಿದ್ದರಿಂದ ಸಿ.ವಿ. ಚಂದ್ರಶೇಖರ್‌ ಅವರಿಗೆ ಕೈತಪ್ಪಿತ್ತು. ಈಗ ಬಿಜೆಪಿ ಜಿಲ್ಲಾ ಕೋರ್‌ ಕಮೀಟಿ ಸಿವಿಸಿ ಹೆಸರು ಅಂತಿಮಗೊಳಿಸಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಪಕ್ಷದಿಂದ ಯಾರು?

ಕೊಪ್ಪಳ- ರಾಯಚೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ ಸದಸ್ಯರಾಗಿ ಸದ್ಯ ಕಾಂಗ್ರೆಸ್‌(Congress) ಪಕ್ಷದ ಬಸವರಾಜ ಪಾಟೀಲ್‌ ಇಟಗಿ ಇದ್ದಾರೆ. ಇವರು ಮತ್ತೆ ಸ್ಪರ್ಧೆ ಮಾಡುವುದಕ್ಕೆ ಹಿಂದೇಟು ಹಾಕಿರುವುದರಿಂದ ಹೊಸಮುಖಗಳ ಹುಡುಕಾಟದಲ್ಲಿ ಕಾಂಗ್ರೆಸ್‌ ತೊಡಗಿದೆ. ಪಕ್ಷ ಈ ಬಾರಿ ಕೊಪ್ಪಳ ಜಿಲ್ಲೆಗೆ ಆದ್ಯತೆ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆಯಾದರೂ ರಾಯಚೂರು ಜಿಲ್ಲೆಯಲ್ಲಿಯೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ.

ಎನ್‌.ಎಸ್‌. ಬೋಸುರಾಜ ಅವರ ಪುತ್ರ ರವಿ ಬೋಸುರಾಜ, ಆರ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ, ಶಾಸಕ ಅಮರೇಗೌಡ ಭಯ್ಯಾಪುರ ಅವರ ಅಣ್ಣನ ಮಗ ಶರಣಗೌಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರೂ ರಾಯಚೂರು ಜಿಲ್ಲೆಯವರು. ಇವರ ಹೆಸರು ಮುಂಚೂಣಿಯಲ್ಲಿದೆ. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಶಾರದಾ ಇಂಟರ್‌ನ್ಯಾಷನಲ್‌ ಸಂಸ್ಥಾಪಕ ಅಧ್ಯಕ್ಷರಾದ ವಿ.ಆರ್‌. ಪಾಟೀಲ್‌ ಅವರ ಹೆಸರು ಸಹ ತೇಲಾಡುತ್ತಿದೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರ ಸಮ್ಮುಖದಲ್ಲಿಯೂ ಈ ಹೆಸರು ಪ್ರಸ್ತಾಪವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ವಿ.ಆರ್‌. ಪಾಟೀಲ್‌ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಗೆದ್ದ ಅನುಭವ ಇರುವ ಹಾಗೂ ರಾಯಚೂರು, ಕೊಪ್ಪಳ ಎರಡೂ ಜಿಲ್ಲೆಯ ಮೇಲೆ ಪ್ರಭಾವ ಹೊಂದಿರುವ ಸಚಿವ ಹಾಲಪ್ಪ ಆಚಾರ್‌ ಅವರಿಗೆ ಹೊಣೆ ನೀಡುವ ಸಾಧ್ಯತೆ ಇದೆ.