ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಲಿ: ಪ್ರಿಯಾಂಕ ಗಾಂಧಿ

ನಮ್ಮ ಕುಟುಂಬದ ಯಾರು ಕೂಡ ಅಧ್ಯಕ್ಷರಾಗಬಾರದು. ಪಕ್ಷ ಹೊಸ ದಾರಿಯನ್ನು ಕಂಡುಕೊಳ್ಳಬೇಕು. ನೆಹರು- ಗಾಂಧಿಯೇತರ ಕುಟುಂಬದ ವ್ಯಕ್ತಿ ಅಧ್ಯಕ್ಷರಾಗಿ ನನಗೆ ಉತ್ತರಪ್ರದೇಶ ಅಥವಾ ಅಂಡಮಾನ್‌- ನಿಕೋಬಾರ್‌ ದ್ವೀಪದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿದರೂ ಅವರ ಸೂಚನೆ ಪಾಲಿಸಲು ಸಿದ್ಧಳಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಇವರ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Non Gandhi Person should be Congress chief Says Priyanka Gandhi

ನವದೆಹಲಿ(ಆ.20): ಕಾಂಗ್ರೆಸ್‌ನ ಕಾಯಂ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಕಗ್ಗಂಟಾಗಿರುವಾಗಲೇ, ಜವಾಹರಲಾಲ್‌ ನೆಹರು- ಇಂದಿರಾ ಗಾಂಧಿ ಕುಟುಂಬಕ್ಕೆ ಸೇರದ ವ್ಯಕ್ತಿ ಪಕ್ಷದ ಅಧ್ಯಕ್ಷರಾಗಲಿ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿರುವುದು ಸಂಚಲನಕ್ಕೆ ಕಾರಣವಾಗಿದೆ.

ಲೋಕಸಭೆ ಚುನಾವಣೆ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ರಾಹುಲ್‌ ಗಾಂಧಿ ಇದೇ ರೀತಿಯ ಸಲಹೆ ಮಾಡಿದ್ದರು. ಇದೀಗ ರಾಹುಲ್‌ ಅವರನ್ನೇ ಮತ್ತೊಮ್ಮೆ ಅಧ್ಯಕ್ಷ ಪಟ್ಟದಲ್ಲಿ ಕೂರಿಸುವ ಪ್ರಯತ್ನಗಳು ಆರಂಭವಾಗಿರುವಾಗಲೇ, ಪ್ರಿಯಾಂಕಾ ಅವರು ನೆಹರು- ಗಾಂಧಿಯೇತರ ಕುಟುಂಬ ವ್ಯಕ್ತಿಗೆ ಪಟ್ಟಕಟ್ಟಿಎಂದಿರುವುದು ಸಹಜವಾಗಿಯೇ ಚರ್ಚೆಗೆ ಕಾರಣವಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ನಾಯಕರೊಬ್ಬರು, 15 ತಿಂಗಳ ಹಿಂದೆ ನೀಡಿದ್ದ ಸಂದರ್ಶನವನ್ನು ಹೊಸದರಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಪ್ರಿಯಾಂಕಾ ಹೇಳಿದ್ದು..:

ರಾಹುಲ್‌ ಗಾಂಧಿ ಅವರ ಹೇಳಿಕೆಗೆ ಸನ್ನ ಸಂಪೂರ್ಣ ಸಹಮತವಿದೆ. ನಮ್ಮ ಕುಟುಂಬದ ಯಾರು ಕೂಡ ಅಧ್ಯಕ್ಷರಾಗಬಾರದು. ಪಕ್ಷ ಹೊಸ ದಾರಿಯನ್ನು ಕಂಡುಕೊಳ್ಳಬೇಕು. ನೆಹರು- ಗಾಂಧಿಯೇತರ ಕುಟುಂಬದ ವ್ಯಕ್ತಿ ಅಧ್ಯಕ್ಷರಾಗಿ ನನಗೆ ಉತ್ತರಪ್ರದೇಶ ಅಥವಾ ಅಂಡಮಾನ್‌- ನಿಕೋಬಾರ್‌ ದ್ವೀಪದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿದರೂ ಅವರ ಸೂಚನೆ ಪಾಲಿಸಲು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕತ್ವ ಪ್ರಿಯಾಂಕಾಗೆ; ಶುರುವಾಗಿದೆ ವೋಟ್‌ ಬ್ಯಾಂಕ್ ಪಾಲಿಟಿಕ್ಸ್‌..!

ಅಮೆರಿಕದ ವಿದ್ವಾಂಸರಾದ ಪ್ರದೀಪ್‌ ಛಿಬ್ಬರ್‌ ಹಾಗೂ ಹರ್ಷ್ ಶಾ ಅವರು ಬರೆದಿರುವ ‘ಭಾರತದ ಭವಿಷ್ಯದ ನಾಯಕರು’ ಎಂಬ ಪುಸ್ತಕವೊಂದರಲ್ಲಿ ಪ್ರಿಯಾಂಕಾ ಅವರ ಸಂದರ್ಶನ ಪ್ರಕಟವಾಗಿದೆ. ಅದರಲ್ಲಿ ಅವರ ಈ ಅಭಿಪ್ರಾಯಗಳಿವೆ. ರಾಹುಲ್‌ ರಾಜೀನಾಮೆ ಬಳಿಕ ಮುಂದೇನು ಮಾಡಬೇಕು ಎಂಬ ಗೊಂದಲಕ್ಕೆ ಬಿದ್ದ ಕಾಂಗ್ರೆಸ್‌ ಪಕ್ಷ, ಸೋನಿಯಾ ಗಾಂಧಿ ಅವರನ್ನು 2019ರ ಆ.10ರಂದು ಹಂಗಾಮಿ ಅಧ್ಯಕ್ಷೆಯನ್ನಾಗಿ ಮಾಡಿತ್ತು.

ವಾದ್ರಾ ಕೇಸಿಂದ ಮಕ್ಕಳಿಗೆ ಪರಿಣಾಮ:

ಕಾಂಗ್ರೆಸ್‌ ಪಕ್ಷ ಸಾಮಾಜಿಕ ಜಾಲತಾಣ ಎಂಬ ಹೊಸ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳಲು ತಡ ಮಾಡಿತು. ನಮ್ಮ ಅಭಿಪ್ರಾಯ ಹೇಳುವಷ್ಟರಲ್ಲಿ ಪಕ್ಷಕ್ಕೆ ಹಾನಿಯಯಾಗಿರುತ್ತಿತ್ತು ಎಂದೂ ಪ್ರಿಯಾಂಕಾ ತಿಳಿಸಿದ್ದಾರೆ. ಪತಿ ರಾಬರ್ಟ್‌ ವಾದ್ರಾ ವಿರುದ್ಧ ಬಿಜೆಪಿ ಆರೋಪಗಳನ್ನು ಮಾಡಿದಾಗ, ನಾನು ಎಲ್ಲವನ್ನೂ ನನ್ನ ಪುತ್ರ ಹಾಗೂ ಪುತ್ರಿಗೆ ತಿಳಿಸಿದ್ದೇನೆ. ಮಕ್ಕಳಿಂದ ನಾನು ಏನನ್ನೂ ಬಚ್ಚಿಡುವುದಿಲ್ಲ. ನನ್ನ ತಪ್ಪೇ ಆಗಿರಲಿ, ನನ್ನ ದೌರ್ಬಲ್ಯವೇ ಆಗಿರಲಿ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ಇ.ಡಿ. ಅಧಿಕಾರಿಗಳು ಪತಿಯನ್ನು ವಿಚಾರಣೆ ಮಾಡಿದ್ದು ಹಾಗೂ ಟೀವಿ ವಾಹಿನಿಯಲ್ಲಿ ನಡೆದ ಚರ್ಚೆಗಳು ನನ್ನ ಮಕ್ಕಳಿಗೆ ಪರಿಣಾಮ ಬೀರಿವೆ. ನನ್ನ ಮಗ ಬಾಲಕರ ಬೋರ್ಡಿಂಗ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಬೆಳವಣಿಗೆಗಳಿಂದ ಆತ ಅಲ್ಲಿ ಸಮಸ್ಯೆ ಎದುರಿಸಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೋರಾಡಿ, ಏನನ್ನು ನಿರ್ಮಾಣ ಮಾಡಿದರೋ ಅದೆಲ್ಲವೂ ನಾಶವಾಗುತ್ತಿರುವ ಬೆಳವಣಿಗೆ ನನ್ನನ್ನು ರಾಜಕೀಯಕ್ಕೆ ನೂಕಿತು ಎಂದು ತಿಳಿಸಿದ್ದಾರೆ.

22 ವರ್ಷದಿಂದ ಈ ಹುದ್ದೆ ಬೇರೆಯವರಿಗೆ ಸಿಕ್ಕಿಲ್ಲ

1996ರಿಂದ 1998ರವರೆಗೆ ಸೀತಾರಾಮ ಕೇಸರಿ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. 1998ರಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಪಟ್ಟಕ್ಕೇರಿದ್ದರು. ಅಂದಿನಿಂದ ಇಂದಿನವರೆಗೂ ನೆಹರು- ಗಾಂಧಿಯೇತರ ಕುಟುಂಬದ ವ್ಯಕ್ತಿಗಳಿಗೆ ಅಧ್ಯಕ್ಷ ಪಟ್ಟಸಿಕ್ಕಿಲ್ಲ. ಒಂದು ವೇಳೆ ಪ್ರಿಯಾಂಕಾ ಸಲಹೆ ಕಾರ್ಯರೂಪಕ್ಕೆ ಬಂದರೆ ನೆಹರು- ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಗೆ 22 ವರ್ಷಗಳ ಬಳಿಕ ಕಾಂಗ್ರೆಸ್‌ ಮುನ್ನಡೆಸುವ ಹೊಣೆಗಾರಿಕೆ ಸಿಗಲಿದೆ.

Latest Videos
Follow Us:
Download App:
  • android
  • ios