ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರ ಅವಧಿ ಜ.27ಕ್ಕೆ ಮುಗಿಯಲಿದ್ದು, ಬಳಿಕ ಖಾಲಿ ಇರುವ ನಾಲ್ಕು ಪರಿಷತ್ ಸದಸ್ಯ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಜ.26): ಪರಿಷತ್ ಖಾಲಿ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜ.27ಕ್ಕೆ ತಿಪ್ಪೇಸ್ವಾಮಿ ಅವಧಿ ಮುಗಿಯಲಿದೆ. ಬಳಿಕ ನಾಲ್ಕು ಸ್ಥಾನಗಳ ಬಗ್ಗೆಯೂ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಯು.ಬಿ. ವೆಂಕಟೇಶ್, ಪ್ರಕಾಶ್ ರಾಥೋಡ್ ಹಾಗೂ ಸಿ.ಪಿ. ಯೋಗೇಶ್ವರ್ ಅವರಿಂದ ಮೂರು ಸ್ಥಾನಗಳು ತೆರವಾಗಿವೆ. ಇದೀಗ ತಿಪ್ಪೇಸ್ವಾಮಿ ಅವರ ಸ್ಥಾನ ಖಾಲಿಯಾದ ಬಳಿಕ ವಿವಿಧ ಕ್ಷೇತ್ರಗಳಿಂದ ನಾಮನಿರ್ದೇಶನ ಮಾಡಲು ನಾಲ್ಕು ಸ್ಥಾನಗಳು ಖಾಲಿ ಇರಲಿವೆ. ಈ ಸ್ಥಾನಗಳಿಗೆ ಯಾರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಸಿಎಂ ಭೇಟಿಯಾದ ಸ್ಯಾಫ್ರಾನ್ ಸಮೂಹ ಅಧ್ಯಕ್ಷ: ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡಿರುವ ಜಾಗತಿಕ ಸ್ಯಾಫ್ರಾನ್ ಸಮೂಹದ ಅಧ್ಯಕ್ಷ ರಾಸ್ ಮ್ಯಾಕಲ್ನೆಸ್ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜತೆ ಸೌಜನ್ಯದ ಭೇಟಿ ಮಾಡಿದರು. ಈ ವೇಳೆ ರಾಜ್ಯದ ಕೈಗಾರಿಕಾಸ್ನೇಹಿ ನೀತಿ, ಹೂಡಿಕೆ ಪರವಾದ ಪರಿಸರ, ವಿಷನ್ ಗ್ರೂಪ್ ಚಟುವಟಿಕೆಗಳು ಇತ್ಯಾದಿಗಳನ್ನು ಕುರಿತು ವಿಚಾರ ವಿನಿಮಯ ನಡೆಸಲಾಯಿತು.
ಕಂಪನಿಯು ಬೆಂಗಳೂರಿನಲ್ಲಿ ಹೊಂದಿರುವ ಸ್ಯಾಫ್ರಾನ್ ಡೇಟಾ ಸಿಸ್ಟಮ್ಸ್ ಮತ್ತು ಸ್ಯಾಫ್ರಾನ್ ಹೆಲಿಕಾಪ್ಟರ್ ಎಂಜಿನ್ಸ್ ಕಚೇರಿಗಳು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ರಾಸ್ ಅವರು ಮುಖ್ಯಮಂತ್ರಿಗೆ ವಿಸ್ತೃತ ಮಾಹಿತಿ ನೀಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು. ಬಜೆಟ್ ಸಿದ್ಧತೆ ಹಿನ್ನೆಲೆಯಲ್ಲಿ ದಾವೋಸ್ ಶೃಂಗ ಸಭೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ನಾನು ಕಳೆದ ವರ್ಷವೂ ಭಾಗವಹಿಸಿರಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅನ್ನೋ ನಂಬಿಕೆ ಇತ್ತು: ಸಚಿವ ದಿನೇಶ್ ಗುಂಡೂರಾವ್
ಸಿಎಂಗೆ ಮನವಿ: ತಾಲೂಕಿನ ಅತಿದೊಡ್ಡ ಹೋಬಳಿ ಕೇಂದ್ರವಾದ ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯನವರಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ನಾಗರಾಜ ಮನವಿ ಮಾಡಿದ್ದಾರೆ. ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಲವಾರು ರೈತ ಮುಖಂಡರೊಂದಿಗೆ ಭೇಟಿಯಾದ ನಾಗರಾಜು ಮನವಿ ನೀಡಿ, ಸುಮಾರು 20 ವರ್ಷಗಳಿಂದ ಎಲ್ಲಾ ಪ್ರಗತಿಪರ ಸಂಘಟನೆಗಳು ಪರಶುರಾಮಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಇದರಿಂದ ಸಾವಿರಾರು ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪರಶುರಾಮಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ಭರವಸೆ ನೀಡುತ್ತಾ ಬಂದಿದೆ. ಈ ಬಾರಿಯಾದರೂ ಈ ಭಾಗದ ಹೋರಾಟಗಾರರ ಹೋರಾಟಕ್ಕೆ ಫಲಸಿಗುವುದೇ ಎಂಬ ನಿರೀಕ್ಷೆ ನಮ್ಮದಾಗಿದ್ದು, ತಾವು ಈ ಕಾರ್ಯವನ್ನು ಮಾಡಿದರೆ ಜನರ ವಿಶ್ವಾಸವನ್ನು ಗಳಿಸಿದಂತಾಗುತ್ತದೆ ಎಂದರು.
