ಬಿಜೆಪಿಗೆ ವಿವಿಧ ರಾಜ್ಯಗಳಲ್ಲಿ ತಮ್ಮ ನಾಯಕರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ ಅದೆ ಕಾರಣಕ್ಕೆ ಮುಖ್ಯಮಂತ್ರಿಗಳ ಬದಲಾವಣೆ
ಹುಬ್ಬಳ್ಳಿ (ಸೆ.13): ಬಿಜೆಪಿಗೆ ವಿವಿಧ ರಾಜ್ಯಗಳಲ್ಲಿ ತಮ್ಮ ನಾಯಕರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು, ಅದೆ ಕಾರಣಕ್ಕೆ ಮುಖ್ಯಮಂತ್ರಿಗಳ ಬದಲಾವಣೆಗೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಹಾಗೂ ಹು-ಧಾ ಪಾಲಿಕೆ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನಾ ನಿರ್ವಹಣೆಯಲ್ಲಿ ವಿಫಲ, ಆಡಳಿತ ಸರಿಯಾಗಿಲ್ಲ, ಭ್ರಷ್ಟಾಚಾರ ಹೆಚ್ಚಿದೆ ಎಂಬೆಲ್ಲ ಕಾರಣಕ್ಕಾಗಿ ನಾಲ್ಕು ತಿಂಗಳಲ್ಲಿ ಬಿಜೆಪಿ ಮೂರು ಮುಖ್ಯಮಂತ್ರಿಗಳನ್ನು ಬದಲಿಸಿದೆ. ಕೇಂದ್ರದ ಆರೋಗ್ಯ ಸಚಿವರ ಬದಲಾವಣೆಗೂ ಇದೇ ಕಾರಣ. ಈ ಬೆಳವಣಿಗೆ ಒಟ್ಟಾರೆ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದರು.
ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್: ಡಿಕೆಶಿ ಸುಳಿವು
ಎಐಎಂಐಎಂ ಬಿಜೆಪಿಯ ಬಿ ಟೀಂ ಆಗಿದೆ. ಬಿಜೆಪಿ ಅಧಿಕಾರ ದುರ್ಬಳಕೆ ಹಾಗೂ ನಮ್ಮ ಟಿಕೆಟ್ ಹಂಚಿಕೆಯಲ್ಲಿ ಆದ ಕೆಲ ಗೊಂದಲದ ಕಾರಣ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಂತೆ ವಿಧಾನಸಭೆ ಚುನಾವಣೆಯಲ್ಲಿ ಈ ಪಕ್ಷ ಯಾವುದೇ ಪ್ರಭಾವ ಬೀರದು. ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಎಐಸಿಸಿಯಿಂದ ಹೊಸ ಅಭಿಯಾನ ನಡೆಸಲಾಗುತ್ತಿದೆ. ಅದರ ಭಾಗವಾಗಿ ಮುಂದಿನ ಅಕ್ಟೋಬರ್ 2ರಿಂದ ರಾಜ್ಯಾದ್ಯಂತ ಸುಮಾರು 6 ಸಾವಿರ ಪಂಚಾಯಿತಿ, 4 ಸಾವಿರ ವಾರ್ಡ್‌ಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರಿನಲ್ಲಿ ಕಾರ್ಯಕರ್ತರು ಸಭೆ ನಡೆಸಬೇಕು. ನಾನು ಒಂದು ತಿಂಗಳು ಪ್ರತಿದಿನ ಒಂದೊಂದು ಜಿಲ್ಲೆಗೆ ಭೇಟಿ ನೀಡಲಿದ್ದೇನೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ ವೀಕ್ಷಕರನ್ನು ನೇಮಕ ಮಾಡಲಾಗುವುದು ಎಂದರು.
