ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್ ಹುಸೇನ್
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿನ ಸ್ಥಳಾಂತರದ ಕುರಿತು ಎದ್ದಿರುವ ಗೊಂದಲಳಿಗೆ ಅರ್ಥವಿಲ್ಲ. ನಮ್ಮ ಕಾಲೇಜು ನಮ್ಮ ಯೂನಿವರ್ಸಿಟಿ ಇಲ್ಲೇ ಇರಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಪಷ್ಟಪಡಿಸಿದರು.
ರಾಮನಗರ (ಸೆ.03): ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿನ ಸ್ಥಳಾಂತರದ ಕುರಿತು ಎದ್ದಿರುವ ಗೊಂದಲಳಿಗೆ ಅರ್ಥವಿಲ್ಲ. ನಮ್ಮ ಕಾಲೇಜು ನಮ್ಮ ಯೂನಿವರ್ಸಿಟಿ ಇಲ್ಲೇ ಇರಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಪಷ್ಟಪಡಿಸಿದರು. ಮಂಚನಬೆಲೆ ಜಲಾಶಯ ಹಾಗೂ ನಾಲೆಗಳ ವೀಕ್ಷಣೆಯ ನಂತರ ರಾಜೀವ್‌ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಆಗುತ್ತದೆ ಎಂಬ ಗೊಂದಲದ ವಿಚಾರಕ್ಕೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ ವಿವಿ, ಮೆಡಿಕಲ್ ಕಾಲೇಜಿಗೂ ಕನಕಪುರ ಕಾಲೇಜಿಗೂ ಸಂಬಂಧ ಇಲ್ಲ. ನಮ್ಮ ಕಾಲೇಜು ನಮ್ಮ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲೇ ಇರಲಿದೆ ಎಂದು ತಿಳಿಸಿದರು.
ರಾಜೀವ್‌ಗಾಂಧಿ ವಿವಿ, ಮೆಡಿಕಲ್ ಕಾಲೇಜು ಸ್ಥಳಾಂತರದ ವಿಚಾರವಾಗಿ ಕ್ಷೇತ್ರದಲ್ಲಿ ಎದ್ದಿರುವ ಗೊಂದಲದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿಯೇ ಸಚಿವರಾದ ಶರಣಪ್ರಕಾಶ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ನಮ್ಮ ಸಂಸದರಾದ ಡಿ.ಕೆ.ಸುರೇಶ್ ನೇತೃತ್ವದಲ್ಲಿಯೇ ನೀವು ಬಂದು ಪೂಜೆ ನೆರವೇರಿಸುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು. ನನ್ನ ಕ್ಷೇತ್ರದ ಜನರೊಂದಿಗೆ ನಾನು ಇದ್ದೇನೆ. ಈ ವಿಚಾರಕ್ಕೆ ಸೆಪ್ಟೆಂಬರ್ 8ಕ್ಕೆ ರಾಮನಗರ ಬಂದ್‌ಗೆ ಕರೆ ನೀಡಿರುವುದರಲ್ಲಿ ಯಾವುದೇ ಅರ್ಥ ಇಲ್ಲ.
ರಾಜೀವ್‌ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ
ಇದು ಈಗ ಮಂಜೂರಾಗಿರುವ ಮೆಡಿಕಲ್ ಕಾಲೇಜ್ ಅಲ್ಲ. 20 ವರ್ಷದ ಹಿಂದೆಯೇ ಆಗಿರುವಂತದ್ದು, ಇದರಲ್ಲಿಯೂ ಕೆಲವರು ರಾಜೀಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಎನ್ನುವ ಹೊಟ್ಟೆಕಿಚ್ವಿಗೆ ಹೀಗೆಲ್ಲಾ ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಇದೆಲ್ಲದಕ್ಕೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಟೇಕಾಫ್ ಆಗುತ್ತಿದ್ದು, ಕಾಂಗ್ರೆಸ್ ಬಗ್ಗೆ ಜನರಿಗೆ ಉತ್ತಮ ವಿಶ್ವಾಸ ವ್ಯಕ್ತವಾಗುತ್ತಿದೆ. ಇದನ್ನು ಸಹಿಸಲಾರದವರು ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ವಿರೋಧಿಗಳ ಕಾಲೆಳೆದರು.
ಕೆಲಸವಿಲ್ಲದವರಿಂದ ರಾಮನಗರ ಬಂದ್: ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣ ಆಗಲಿದ್ದು, ಈ ಬಗ್ಗೆ ಯಾರಲ್ಲೂ ಅನುಮಾನ ಬೇಡ. ಕೆಲಸ ಇಲ್ಲದಿರುವ ವ್ಯಕ್ತಿಗಳು ರಾಮನಗರ ಬಂದ್‌ಗೆ ಕರೆ ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿಗಳು ಕನಕಪುರಕ್ಕೆ ಹೊಸದಾಗಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿಸಿಕೊಂಡಿದ್ದಾರೆ. ರಾಮನಗರದ ಮೆಡಿಕಲ್ ಕಾಲೇಜನ್ನು ತೆಗೆದುಕೊಂಡು ಹೋಗುತ್ತಿಲ್ಲವೆಂದು ಅವರೇ ಸ್ಪಷ್ಟಪಡಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಕೆಲಸ ಆರಂಭವಾಗಿದೆ.
ಬೊಂಬೆನಾಡಲ್ಲಿ ಹೆಚ್ಚಿದ ಕಳ್ಳರ ಹಾವಳಿ: ಖದೀಮರ ಹಾಟ್‌ಸ್ಪಾಟ್ ಆದ ಚನ್ನಪಟ್ಟಣ
ಸ್ಥಳದಲ್ಲಿ ಒಂದಿಷ್ಟು ಸಮಸ್ಯೆಗಳಿದ್ದು, ರೈತರೊಂದಿಗೆ ಚರ್ಚಿಸಿ ಬಗೆಹರಿಸಲು ನಮ್ಮ ನಾಯಕರು ಸೂಚಿಸಿದ್ದಾರೆ. ಮೆಡಿಕಲ್ ಕಾಲೇಜು ವಿವಿ ಆವರಣದಲ್ಲಿಯೇ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು. ನಾನು 24 ಗಂಟೆ ರಾಮನಗರದಲ್ಲಿ ಇದ್ದೀನಿ. ಕೆಲಸಕ್ಕೆ ಬಾರದವರು ಹೇಳಿದ್ದನ್ನು ನಾನು ಕೇಳಲ್ಲ. ನಾನು ಈ ಜಿಲ್ಲೆ ಮತ್ತು ತಾಲೂಕಿನ ಮಗ. ಕಿವಿ ಮೇಲೆ ಹೂವು ಇಟ್ಟುಕೊಂಡು ಅವರು ಹೇಳಿದ್ದನ್ನೆಲ್ಲ ಕೇಳುವವನಲ್ಲ. ಅವರು ಕರೆ ನೀಡಿರುವ ರಾಮನಗರ ಬಂದ್ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.