ಪಕ್ಷಕ್ಕೆ ಮುಜುಗರ ತರುವ ಬಿಜೆಪಿಗರ ಬಾಯಿಗೆ ಬೀಗ..!
ಮುಖಂಡರನ್ನು ಸಭೆಗೆ ಕರೆಸಿಕೊಂಡು ಬಹಿರಂಗ ಹೇಳಿಕೆ ನೀಡದಂತೆ ನೇರ ಎಚ್ಚರಿಕೆ, ಯತ್ನಾಳ, ಮುನಿರಾಜು, ಸಿಂಹ, ಚರಂತಿಮಠ, ತಮ್ಮೇಶ್‌ಗೌಡ ಜತೆ ವರಿಷ್ಠರ ಚರ್ಚೆ, ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದ ಮುಖಂಡರು, ಸಭೆಗೆ ರೇಣುಕಾಚಾರ‍್ಯ ಗೈರು
ಬೆಂಗಳೂರು(ಜು.01): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪತ್ರಿಕಾ ಹೇಳಿಕೆ ಮೂಲಕ ನೀಡಿದ್ದ ಎಚ್ಚರಿಕೆಗೆ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆ ನೀಡಿದ್ದ ಮುಖಂಡರನ್ನು ಖುದ್ದಾಗಿ ಕರೆದು ಬಾಯಿಗೆ ಬೀಗ ಹಾಕುವ ಪ್ರಯತ್ನವನ್ನು ಪಕ್ಷದ ಹಿರಿಯ ನಾಯಕರು ಮಾಡಿದ್ದಾರೆ.
ಶುಕ್ರವಾರ ತುರ್ತಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಎಸ್.ಮುನಿರಾಜು, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಪರಾಜಿತ ಅಭ್ಯರ್ಥಿ ತಮ್ಮೇಶ್‌ಗೌಡ ಮೊದಲಾದವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡ ಹಿರಿಯ ನಾಯಕರು ಮುಖಾಮುಖಿ ಅವರೊಂದಿಗೆ ಚರ್ಚಿಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಇನ್ನು ಮುಂದೆ ಈ ರೀತಿ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನೂ ನೀಡಿ ಕಳುಹಿಸಿದ್ದಾರೆ.
ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ: ಸ್ಪಷ್ಟನೆ ನೀಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮೊದಲಾದ ನಾಯಕರು ಅಸಮಾಧಾನಿತ ಮುಖಂಡರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿ ಅವರ ಅಹವಾಲು ಆಲಿಸಿದರು. ಆದರೆ, ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶಿಸ್ತು ಸಮಿತಿಯ ನೋಟಿಸ್ ಪಡೆದುಕೊಂಡಿರುವ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಸಮಾಲೋಚನಾ ಸಭೆಗೆ ಗೈರುಹಾಜರಾಗಿದ್ದರು. ಹೀಗಾಗಿ, ಅವರೊಂದಿಗೆ ಯಡಿಯೂರಪ್ಪ ಅವರು ದೂರವಾಣಿ ಮೂಲಕ ಮಾತನಾಡಿ ಸಮಾಧಾನಪಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಸಭೆಗೆ ಆಗಮಿಸಿದ್ದ ಮುಖಂಡರು ತಮ್ಮ ಅಭಿಪ್ರಾಯವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ತಾವು ಯಾಕೆ ಆ ರೀತಿ ಬಹಿರಂಗವಾಗಿ ಮಾತನಾಡಿದ್ದೇವೆ ಎಂಬುದನ್ನು ವಿವರಿಸಿದ್ದಾರೆ. ಜತೆಗೆ ಇನ್ನು ಮುಂದೆ ಇಂಥ ಹೇಳಿಕೆಗಳನ್ನು ಬಹಿರಂಗವಾಗಿ ನೀಡುವುದಿಲ್ಲ. ಏನೇ ಇದ್ದರೂ ಪಕ್ಷದ ಆಂತರಿಕ ವೇದಿಕೆಗಳಲ್ಲಿ ಪ್ರಸ್ತಾಪಿಸುವ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆಗಳನ್ನು ಯಾರೂ ಕೊಡಬಾರದು. ಯಾರು ಆ ರೀತಿ ಮಾತನಾಡಿದ್ದಾರೋ ಅವರ ಜತೆಗೆ ಚರ್ಚಿಸಿ ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದೇವೆ. ಇಲ್ಲವಾದರೆ ಸೂಕ್ತ ಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿದ್ದೇವೆ ಅಂತ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.