ಪ್ರಚಾರಕ್ಕೆ ನನ್ನನ್ನೂ ಯಾರೂ ಕರೆದಿಲ್ಲ: ಸಿಎಂ, ಡಿಸಿಎಂ ವಿರುದ್ಧ ಮುನಿಯಪ್ಪ ಮುನಿಸು
30 ವರ್ಷ ಪಕ್ಷ ಕಟ್ಟಿರುವ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಏ.08): 30 ವರ್ಷ ಪಕ್ಷ ಕಟ್ಟಿರುವ ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಗೆಲ್ಲಿಸಲು ಶ್ರಮಿಸಿದವರ ಜತೆ ಸೇರಿಕೊಂಡು ಕಾಂಗ್ರೆಸ್ ಗೆಲ್ಲಿಸಲು ಹೊರಟಿದ್ದಾರೆ. ಕೋಲಾರದ ಚುನಾವಣಾ ಪ್ರಚಾರಕ್ಕೆ ನನ್ನನ್ನು ಯಾರೂ ಕರೆದಿಲ್ಲ ಎಂದು ಬೇಸರ ಹೊರಹಾಕಿದರು.
ರಾಜ್ಯಭಾರ ಮಾಡುತ್ತಿರುವವರು ಏನು ಬೇಕಾದರೂ ಮಾಡಬಹುದು. ಕೋಲಾರದಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸಿದವರ ಜೊತೆ ಸೇರಿ ಇವರು ಕಾಂಗ್ರೆಸ್ ಗೆಲ್ಲಿಸಲಿ ಎಂದು ಸವಾಲಿನ ಧಾಟಿಯಲ್ಲಿ ಹರಿಹಾಯ್ದರು. ಶುಕ್ರವಾರದ ಕೋಲಾರ ಚುನಾವಣಾ ಪ್ರಚಾರಕ್ಕೆ ನನ್ನನ್ನು ಯಾರೂ ಕರೆದಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೂ ನನ್ನ ಬಳಿ ಹೇಳಿಲ್ಲ. ನಾನು 30 ವರ್ಷ ಪಕ್ಷ ಕಟ್ಟಿದ್ದೇನೆ. ನನ್ನನ್ನು ಯಾಕೆ ಕರೆದಿಲ್ಲ ಎಂಬುದನ್ನು ನೀವೇ ಅವರನ್ನು ಕೇಳಿ. ನನ್ನನ್ನು ನಡೆಸಿಕೊಂಡ ರೀತಿಗೆ ನೋವಾಗಿದೆ ಎಂದು ಹೇಳಿದರು.
ನನಗೆ ಹೈಕಮಾಂಡ್ ಚಿಕ್ಕಬಳ್ಳಾಪುರ ಉಸ್ತುವಾರಿ ನೀಡಿದ್ದು, ನಾನು ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಕೋಲಾರದಲ್ಲಿ ಅವರೇ ಕಾಂಗ್ರೆಸ್ಸನ್ನು ಗೆಲ್ಲಿಸಿಕೊಂಡು ಬರಲಿ. ನಾನು ಶನಿವಾರ ಚಿಕ್ಕಬಳ್ಳಾಪುರದಲ್ಲೇ ಇದ್ದೆ. ಇಂದೂ ಸಹ ಅಲ್ಲಿಗೇ ಹೋಗುತ್ತಿದ್ದೇನೆ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೆ ಮುನಿಯಪ್ಪ ಸಿದ್ಧ: ರಣದೀಪ್ ಸುರ್ಜೇವಾಲಾ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಗೆಲ್ಲಿಸಲು ಶ್ರಮಿಸಿದವರ ಜತೆ ಸೇರಿಕೊಂಡು ಕಾಂಗ್ರೆಸ್ ಗೆಲ್ಲಿಸಲು ಹೊರಟಿದ್ದಾರೆ. ರಾಜ್ಯಭಾರ ಮಾಡುತ್ತಿರುವವರು ಏನು ಬೇಕಾದರೂ ಮಾಡಬಹುದು. ಕೋಲಾರ ಚುನಾವಣಾ ಪ್ರಚಾರಕ್ಕೆ ನನ್ನನ್ನು ಯಾರೂ ಕರೆದಿಲ್ಲ. ನನ್ನನ್ನು ಯಾಕೆ ಕರೆದಿಲ್ಲ ಎಂಬುದನ್ನು ನೀವೇ ಅವರನ್ನು ಕೇಳಿ.
- ಕೆ.ಎಚ್.ಮುನಿಯಪ್ಪ ಆಹಾರ ಸಚಿವ