ದಾವಣಗೆರೆ[ಡಿ.03]:  ಉಪ ಚುನಾವಣೆ ಹೊಸ್ತಿಲಲ್ಲಿ ರಾಜ್ಯಾದ್ಯಂತ ಭಾರೀ ಸದ್ದು ಮಾಡಿರುವ ಶಾಸಕರ ಹನಿಟ್ರ್ಯಾಪ್‌ ಪ್ರಕರಣದ ವಿಚಾರದಲ್ಲಿ ಸರ್ಕಾರ ತನಿಖಾಧಿಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹನಿಟ್ರ್ಯಾಪ್‌ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ನಡೆಯುತ್ತಿಲ್ಲ. ಹನಿಟ್ರ್ಯಾಪ್‌ಗೊಳಗಾದವರ ವೀಡಿಯೋಗಳನ್ನು ಡಿಲೀಟ್‌ ಮಾಡುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳಿಗೆ ಕಾನೂನು ಪ್ರಕಾರ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

ಈ ಮೂಲಕ ಹನಿಟ್ರ್ಯಾಪ್‌ ವಿಡಿಯೋ ಪ್ರಕರಣದಲ್ಲಿ ಸರ್ಕಾರ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ. ಹನಿಟ್ರ್ಯಾಪ್‌ನಲ್ಲಿ ಸಿಲುಕಿರುವ ಶಾಸಕರ ರಕ್ಷಣೆಗೆ ಮುಂದಾಗಿದೆ ಎಂಬ ಆರೋಪವನ್ನು ಬೊಮ್ಮಾಯಿ ತಳ್ಳಿಹಾಕಿದರು.