ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ. ಯಾರು ಏನೇ ಅಪಪ್ರಚಾರ ಮಾಡಿದರು ಜನರು ಕಿವಿಗೊಡದೆ ನನಗೆ ರಕ್ಷಣೆ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ರಾಮನಗರ (ಮಾ.26): ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಆಗುವುದಿಲ್ಲ. ಯಾರು ಏನೇ ಅಪಪ್ರಚಾರ ಮಾಡಿದರು ಜನರು ಕಿವಿಗೊಡದೆ ನನಗೆ ರಕ್ಷಣೆ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ತಾಲೂಕಿನ ಜಾಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದ ಜನರು ನನಗೆ ರಾಜ್ಯ ಕಟ್ಟುವ ಕೆಲಸ ಕೊಟ್ಟಿದ್ದಾರೆ. ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ಜನರು ನನ್ನನ್ನು ಮನೆ ಮಗನಂತೆ ನೋಡುತ್ತಿದ್ದಾರೆ. ಯಾರು ಎಷ್ಟೇ ಅಪಪ್ರಚಾರ ಮಾಡಿದರು ಜನರು ಕಿವಿಕೊಡುವುದಿಲ್ಲ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧೆ ಮಾಡಿದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಕ್ಷೇತ್ರದ ಜನರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಚಿವರು ಹಾಗೂ ಶಾಸಕರು ಉದ್ಘಾಟನೆ ಮಾಡುವ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಅವರನ್ನು ಕರೆಸುತ್ತಿದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗುತ್ತಿದ್ದಾರೆ. ಕೋವಿಡ್ ಹಾಗೂ ಪ್ರವಾಹ ಬಂದಾಗ ಕರ್ನಾಟಕಕ್ಕೆ ಬರಲು ಪ್ರಧಾನಿಯವರಿಗೆ ಸಮಯ ಇರಲಿಲ್ಲ. ಈಗ ಕರ್ನಾಟಕದ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಅವರು ಬರುತ್ತಾರೆ, ಹೋಗುತ್ತಾರೆ ಅಷ್ಟೇ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಡಿ.ಕೆ.ಶಿವಕುಮಾರ್
ಯಾರೇ ಸ್ಪರ್ಧಿಸಿದರೂ ಕಣಕ್ಕಿಳಿಯಲು ತಯಾರು: ರಾಮನಗರ ಕ್ಷೇತ್ರದಲ್ಲಿ ನಮ್ಮ ವಿರುದ್ಧ ಯಾರೇ ಅಭ್ಯರ್ಥಿಯಾದರು ಕಣಕ್ಕಿಳಿಯಲು ತಯಾರಿದ್ದೇವೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ತಾಲೂಕಿನ ಜಾಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರಕ್ಕೆ ಸಂಸದ ಡಿ.ಕೆ.ಸುರೇಶ್ ಹೆಸರು ಪ್ರಸ್ತಾಪಿಸಿ ಇಕ್ಬಾಲ್ ಹುಸೇನ್ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟವಿಚಾರ.
ರಾಮನಗರ ಜಿಲ್ಲೆ ಜನರು ದೇವೇಗೌಡರ ಮೇಲೆ ಇಟ್ಟಿರುವ ಗೌರವವನ್ನು ಯಾರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ. ಕುಮಾರಸ್ವಾಮಿ ಹಾಗೂ ನನ್ನನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರು ಸಹ ಸಜ್ಜಾಗಿದ್ದಾರೆ ಎಂದು ಹೇಳಿದರು. ಇತಿಹಾಸದಲ್ಲಿ ಯಾರು ಕೂಡ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಕುಮಾರಸ್ವಾಮಿರವರು ಆ ಕೆಲಸ ಮಾಡಿ ತೋರಿಸಿದ್ದಾರೆ. ಜನರು ನಮಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ನಿಖಿಲ್ ತಿಳಿಸಿದರು.
ಮಾಜಿ ಶಾಸಕರಿಗೆ ಸೋಲಿನ ಭೀತಿ: ಮಾಜಿ ಶಾಸಕರ ಮುಖದಲ್ಲಿ ಸೋಲಿನ ಭೀತಿ ಸ್ಪಷ್ಟವಾಗಿ ಕಾಣುತ್ತಿದೆ. 20 ವರ್ಷ ಶಾಸಕರಾಗಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಏಕೆ ಆತಂಕ ಪಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ವಿರುದ್ಧ ಜೆಡಿಎಸ್ ಯುವ ಘಟದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ತಾಲೂಕಿನ ಚಿಕ್ಕಮಳೂರು ಬಳಿ ಆಯೋಜಿಸಿದ್ದ ಜೆಡಿಎಸ್ ನಗರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಶಾಸಕರಿಗೆ ಕ್ಷೇತ್ರದ ನೆನಪಾಗಿ ಕ್ಷೇತ್ರದ ಬಗ್ಗೆ ಅಭಿಮಾನ ಮೂಡಿ ಅದಕ್ಕೆ ಸಂಕಲ್ಪಯಾತ್ರೆ ಆರಂಭಿಸಿದ್ದಾರೆ. ಚುನಾವಣೆ ವೇಳೆ ನಾನು ನಿಮ್ಮ ಮನೆ ಮಗ ಎಂದು ಹೇಳಿಕೊಂಡು ಯಾತ್ರೆ ಹೊರಟಿರುವವರು ಕೊರೋನಾ ವೇಳೆ ಎಲ್ಲಿಗೆ ಹೋಗಿದ್ದರು. ಆಗ ಕ್ಷೇತ್ರದ ಜನರ ಸಂಕಷ್ಟನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ ನಿಖಿಲ್, ಕೊರೋನಾ ಸಂಕಷ್ಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಿದರೆಂದು ಹೇಳಿದರು.
ರಾಹುಲ್ ಗಾಂಧಿ ಒಪ್ಪಿದರಷ್ಟೇ 2 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ?
ಕುಮಾರಸ್ವಾಮಿಯವರ ಸರ್ಕಾರವನ್ನು ತೆಗೆಯುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಕ್ರಿಕೆಟ್ ಬೆಟ್ಟಿಂಗ್, ದಂಧೆಕೋರರೊಂದಿಗೆ ಸೇರಿಕೊಂಡು ರೈತರ ಅಭ್ಯುದಯಕ್ಕೆ ದುಡಿಯುತ್ತಿದ್ದ ರೈತಪರ ಸರ್ಕಾರವನ್ನು ತೆಗೆದ ಅವರಿಗೆ ನಾಚಿಕೆಯಾಗಬೇಕು. ಹುಣಸೂರಿನ ಚುನಾವಣೆಯಲ್ಲಿ ಹಂಚದೆ ಉಳಿದು ದೂಳು ತಿನ್ನುತಿದ್ದ ಸೀರೆಗಳನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ. ನಮ್ಮ ಪಕ್ಷದಲ್ಲಿದ್ದ ಕೆಲವರಿಗೆ ಆಮಿಷ ಒಡ್ಡಿ, ಇದೀಗ ಅವರಿಂದ ನಮ್ಮ ವಿರುದ್ಧ ಮಾತನಾಡಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರಾಷ್ಟ್ರೀಯ ಪಕ್ಷಗಳಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರಕ್ಕೆ ಯುವಕರಿಗೆ ಉದ್ಯೋಗ ಸೃಷ್ಟಿಸಿಲ್ಲ. 40% ಕಮಿಷನ್ ವ್ಯವಹಾರ ನಡೆಸಿ ಬಿಜೆಪಿಗರು ಲೂಟಿ ಹೊಡೆದಿದ್ದಾರೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದು 100% ಲೂಟಿಗೆ ಇದೀಗ ಜನಸಂಕಲ್ಪ ಯಾತ್ರೆ ನಡೆಸುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.