ಇತ್ತೀಚೆಗೆ ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಭೂಪೇಂದ್ರ ಪಟೇಲ್‌  ಹಿಂದಿನ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರ ಸಂಪುಟದ ಲ್ಲಿದ್ದ ಒಬ್ಬರೇ ಒಬ್ಬರೂ ಈಗ ಇಲ್ಲ.

ಗಾಂಧಿನಗರ (ಸೆ.17): ಇತ್ತೀಚೆಗೆ ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಭೂಪೇಂದ್ರ ಪಟೇಲ್‌ ಗುರುವಾರ ತಮ್ಮ ಸಂಪುಟ ರಚನೆ ಮಾಡಿದ್ದಾರೆ. ಹೊಸ ಸಂಪುಟದಲ್ಲಿ 24 ಸಚಿವರಿಗೆ ಸ್ಥಾನ ಕಲ್ಪಿಸಲಾಗಿದೆ. ವಿಶೇಷವೆಂದರೆ ಸಂಪುಟದಲ್ಲಿ ಸ್ಥಾನ ಪಡೆದ 24 ಸಚಿವರ ಪೈಕಿ ಈ ಹಿಂದಿನ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರ ಸಂಪುಟದ ಲ್ಲಿದ್ದ ಒಬ್ಬರೇ ಒಬ್ಬರೂ ಇಲ್ಲ. ಜೊತೆಗೆ 24ರಲ್ಲಿ 21 ಜನರು ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

ಈ ಮೂಲಕ 2022ರ ಅಂತ್ಯಕ್ಕೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಸಂಪೂರ್ಣ ಹೊಸ ಮುಖಗಳೊಂದಿಗೆ ಎದುರಿಸಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿರುವುದು ಸ್ಪಷ್ಟವಾಗಿದೆ. ಸಚಿವ ಸಂಪುಟ ರಚನೆ ವೇಳೆ ಜಾತಿವಾರು ಮತ್ತು ವಲಯವಾರು ಲೆಕ್ಕಾಚಾರಗಳು ಕೆಲಸ ಮಾಡಿರುವುದು ಎದ್ದುಕಂಡಿದೆ. ಇದರೊಂದಿಗೆ ನೂತನ ಸಿಎಂ ಮತ್ತು ನೂತನ ಸಚಿವರ ಆಯ್ಕೆಯಲ್ಲಿ ಹೈಕಮಾಂಡ್‌ ಮಾತು ಪೂರ್ಣವಾಗಿ ನಡೆದಿರುವುದೂ ಸ್ಪಷ್ಟವಾಗಿದೆ.

ಗುಜರಾತ್ ನೂತನ ಸಿಎಂಗೆ ಶುಭಕೋರಿ ಶಾ, ಸಂತೋಷ್‌ ಜತೆ ಬೊಮ್ಮಾಯಿ ಮಹತ್ವದ ಚರ್ಚೆ

ಗಾಂಧಿನಗರದ ರಾಜಭವನದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆಚಾರ‍್ಯ ದೇವವ್ರತ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. 24 ಸಚಿವರಲ್ಲಿ 10 ಮಂದಿ ಸಂಪುಟ ದರ್ಜೆ, 14 ಮಂದಿ ರಾಜ್ಯ ದರ್ಜೆ ಸಚಿವರಾಗಿದ್ದಾರೆ. ಇಬ್ಬರು ಮಹಿಳೆಯರಿಗೆ ಸ್ಥಾನ ಸಿಕ್ಕಿದೆ.

ನೂತನ ಸಚಿವ ಸಂಪುಟದಲ್ಲಿ ಪಾಟೀದಾರ್‌ ಮತ್ತು ಒಬಿಸಿ ಸಮುದಾಯಕ್ಕೆ ತಲಾ 6, ಎಸ್‌ಟಿಗೆ 4, ಎಸ್‌ಸಿಗೆ 3, ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ತಲಾ 2 ಮತ್ತು ಜೈನ ಸಮುದಾಯಕ್ಕೆ 1 ಸ್ಥಾನ ಲಭ್ಯವಾಗಿದೆ.

ಸಂಪುಟದ ಬಹುತೇಕ ಹಿರಿಯರಿಗೆ ಕೊಕ್‌ ನೀಡುವ ವಿಷಯ ರಾಜ್ಯ ಬಿಜೆಪಿಯಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿಯೇ ಬುಧವಾರ ನಡೆಯಬೇಕಿದ್ದ ಪ್ರಮಾಣ ವಚನ ಕಾರ್ಯಕ್ರಮವನ್ನು ಗುರುವಾರಕ್ಕೆ ಹಠಾತ್ತಾಗಿ ಮುಂದೂಡಲಾಗಿತ್ತು. ಆದರೂ ಕೇಂದ್ರ ನಾಯಕರ ಸೂಚನೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಹಳಬರಿಗೆ ಕೊಕ್‌ ನೀಡಿ, ಹೊಸಬರಿಗೆ ಸ್ಥಾನ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕರೊಬ್ಬರು, ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ನಾವು ಸುಮ್ಮನಿರಲೇಬೇಕು. ಬೇರೆ ವಿಧಿಯಿಲ್ಲ’ ಎಂದರು.

ಮೋದಿ ಅಚ್ಚರಿ, ಶಾಸಕರಿಗೆ ಶಾಕ್‌

ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಶಾಸಕರಾಗಿದ್ದ ಭೂಪೇಂದ್ರ ಪಟೇಲ್‌ರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ, ಇದೀಗ ಸಚಿವರ ನೇಮಕದಲ್ಲೂ ಅದೇ ರೀತಿಯ ಅಚ್ಚರಿ ನೀಡಿದ್ದಾರೆ. ಇದು ಗುಜರಾತ್‌ನ ಹಿರಿಯ ಶಾಸಕರಿಗೆ ಆಘಾತ ಉಂಟುಮಾಡಿದೆ.