*  ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಆದ್ಯತೆ ನೀಡಿದ ಜೆಡಿಎಸ್‌*  ನಾನು ಸಿಎಂ ಆಗಿದ್ದಾಗ ಪಬ್ಲಿಕ್‌ ಸ್ಕೂಲ್‌*  2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ 

ಬೆಳಗಾವಿ(ಜೂ.05): ಇಂದಿನ ರಾಜ್ಯ ರಾಜಕಾರಣ ನೋಡಬೇಕಾದರೆ ಒರಿಜಿನಲ್‌ ಬಿಜೆಪಿ ಅಥವಾ ಒರಿಜಿನಲ್‌ ಕಾಂಗ್ರೆಸ್‌ ಉಳಿದಿಲ್ಲ. ಬಿಜೆಪಿಯಲ್ಲಿ ಜನತಾ ಪರಿವಾರದಿಂದ ಬಂದವರೇ ಸಿಎಂ ಆಗಿದ್ದಾರೆ. ಕಾಂಗ್ರೆಸ್‌ನಲ್ಲೂ ಪ್ರತಿಪಕ್ಷದ ನಾಯಕರು ಆಗಿರುವವರು ಜನತಾ ಪರಿವಾರದಿಂದ ಬಂದವರಿದ್ದಾರೆ. ಆದರೆ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ರಾಜಕಾರಣದಲ್ಲಿ ನೈತಿಕತೆ ಅನ್ನೋದು ಉಳಿದಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಳಗಾವಿ ನಗರದ ಗಾಂಧಿಭವನದಲ್ಲಿ ಶನಿವಾರ ವಾಯವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಚಂದ್ರಶೇಖ ಲೋಣಿ ಪರ ಪ್ರಚಾರಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ, ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಜೆಡಿಎಸ್‌ ಹೆಚ್ಚಿನ ಅವಕಾಶ ನೀಡಿದೆ. ಕೇವಲ ಒಂದೇ ವರ್ಷದಲ್ಲಿ 60 ವರ್ಷದ ಆಡಳಿತ ಸರಿಗಟ್ಟುವಂತೆ ನನ್ನ ಸರ್ಕಾರ ಕೊಟ್ಟಿದೆ. ಅಷ್ಟೇ ಅಲ್ಲ ಒಂದು ಬಾರಿ ಜನತಾದಳ ಸರ್ಕಾರದಲ್ಲಿ ಒಂದು ಲಕ್ಷ ಶಿಕ್ಷಕರ ನೇಮಕ ಮಾಡಿ ಉದ್ಯೋಗ ಸಮಸ್ಯೆ ಪರಿಹಾರ ನೀಡಿತ್ತು. ಎರಡನೇ ಬಾರಿ 56 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಕ್ಕೆ ನನ್ನ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಶಿಕ್ಷಕರ ನೇಮಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿಲ್ಲ ಎಂದರು.

ಜಿಡಿಪಿ ಟೀಕಿಸುವ ಸಿದ್ದರಾಮಯ್ಯ ಅಂಕಿ-ಅಂಶ ನೀಡಲಿ: ಸಿ.ಸಿ. ಪಾಟೀಲ

ನನ್ನ ಅವಧಿಯಲ್ಲಿ ಶಿಕ್ಷಕರಿಗೆ ಅನುಕೂಲ:

2006-08ರಲ್ಲಿ ನಾನು ಸಿಎಂ ಆಗಿದ್ದಾಗ ಶಿಕ್ಷಣ ಕ್ರಾಂತಿ ವಾತಾವರಣ ನಿರ್ಮಾಣವಾಯಿತು. ಸ್ವಾತಂತ್ರ್ಯ ಬಂದ ನಂತರ ಸರ್ಕಾರ ಕೊಟ್ಟಶಾಲಾ-ಕಾಲೇಜುಗಳ ಸಂಖ್ಯೆ ನೋಡುವುದಾದರೆ ನನ್ನ ಅವಧಿಯಲ್ಲೇ ಹೆಚ್ಚಿನ ಸಾಧನೆ ಮಾಡಲಾಗಿದೆ. ನಾನು ಸಿಎಂ ಆಗಿದ್ದ ವೇಳೆಯೇ ಅನುದಾನ ರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಇದನ್ನೂ ಇನ್ನೂ ಅನುಷ್ಠಾನಗೊಳಿಸಿಲ್ಲ ಎಂದು ಹುಬ್ಬಳ್ಳಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಯವರು ಹೇಳಿದರು. ನನ್ನ ಅವಧಿಯಲ್ಲೇ ಹಲವಾರು ರೀತಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಇದನ್ನೂ ಯಾರಿಂದಲೂ ತಪ್ಪಿಸಲು ಸಾಧ್ಯ ಇಲ್ಲ ಎಂದುಹೇಳಿದರು.

ನಾನು ಸಿಎಂ ಆಗಿದ್ದಾಗ ಪಬ್ಲಿಕ್‌ ಸ್ಕೂಲ್‌

ಬಡ ಕುಟುಂಬದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ನಿರ್ಧಾರ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಪಬ್ಲಿಕ್‌ ಸ್ಕೂಲ್‌ ತೀರ್ಮಾನ ಮಾಡಿದ್ದೆ. ಒಂದು ಸಾವಿರ ಪಬ್ಲಿಕ್‌ ಶಾಲೆ ಆರಂಭಕ್ಕೆ ತೀರ್ಮಾನ ಮಾಡಿದ್ದೆ. ನನ್ನ ಸರ್ಕಾರ ಕಿತ್ತಾಕಿದ ಮೇಲೆ ಬಿಜೆಪಿ ಸರ್ಕಾರ ಇನ್ನೂ 250 ಪಬ್ಲಿಕ್‌ ಶಾಲೆ ಪ್ರಾರಂಭಿಸಿದ್ದು ಕಾಣಲಿಲ್ಲ. ನಮಗೆ ಪಬ್ಲಿಕ್‌ ಶಾಲೆ ಪ್ರವೇಶಕ್ಕೆ ಸಿಕ್ಕಾಪಟ್ಟೆಒತ್ತಡ ಇದೆ ಎಂದು ಸಚಿವರು ಹೇಳ್ತಿದ್ದಾರೆ. ಶೇ.80 ರಿಂದ ನೂರಕ್ಕೂ ಹೆಚ್ಚು ಹಾಜರಾತಿ ರಿಜಿಸ್ಟರ್‌ ಮಾಡುತ್ತಿದ್ದಾರೆ. ಆದರೆ, ಇಂದು ಎರಡ್ಮೂರು ಸೆಕ್ಷನ್‌ ಮಾಡಲು ಶಿಕ್ಷಕರ ಕೊರತೆ ಇದೆ ಎನ್ನುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದ ಎಲ್ಲರೂ ಗುಣಾತ್ಮಕ ಶಿಕ್ಷಣ ಕೊಡಲಾಗುತ್ತಿಲ್ಲ ಎನ್ನುತ್ತಿದ್ದಾರೆ. ಮೂರು ವರ್ಷದ ಬಿಜೆಪಿ ಸರ್ಕಾರದ್ದು ಇದೇ ಸಾಧನೆಯಾಗಿದೆ ಎಂದು ಟೀಕಿಸಿದರು.

ಆರೆಸ್ಸೆಸ್‌ ಹೆಡಗೇವಾರ್‌ ಭಾಷಣ ಶಾಲಾ ಮಕ್ಕಳಿಗೆ ಯಾಕ್‌ ಬೇಕ್ರಿ?: ಸಿದ್ದರಾಮಯ್ಯ

ಭಿಕ್ಷುಕರನ್ನಾಗಿ ನಿಲ್ಲಿಸುತ್ತೀರಿ?:

ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 10 ಕೆಜಿ ಅಕ್ಕಿ ಪ್ರತಿ ವರ್ಷ ನೀಡುತ್ತೇನೆ ಎಂದು ಹೇಳುವುದು ಏನಿದೆಯಲ್ಲ 75 ವರ್ಷಗಳ ಸ್ವಾತಂತ್ರ ಬಂದ ನಂತರವೂ ನಾಡಿನ ಜನತೆ ಸರ್ಕಾರ ಕೊಡುವ ಉಚಿತ ಕಾರ್ಯಕ್ರಮಗಳಿಗೆ ಕ್ಯೂ ನೀಡುವಂತಹ ವ್ಯವಸ್ಥೆ ಅವರನ್ನು ಭಿಕ್ಷುಕರನ್ನಾಗಿ ನಿಲ್ಲಿಸುತ್ತೀರಿ? ನನ್ನ ಕಾರ್ಯಕ್ರಮ ಇವತ್ತು ನಮ್ಮ ನಾಡಿನ ಜನತೆ ಯಾವುದೋ ಸರ್ಕಾರ ಕೊಡುವಂತ ಉಚಿತ ಕಾರ್ಯಕ್ರಮಗಳಿಗೆ ಕ್ಯೂ ನಿಂತು ಭಿಕ್ಷುಕರಾಗುವಂತಹ ಅವಕಾಶ ಕೊಡಬಾರದು. ಇನ್ನೊಬ್ಬರಿಗೆ ನೆರವು ನೀಡುವ ಆರ್ಥಿಕ ಶಕ್ತಿಯನ್ನು ಈ ನಾಡಿನ ಪ್ರತಿಯೊಬ್ಬರು ಪಡೆಯಬೇಕೆಂಬುದು ನನ್ನ ಅಭಿಪ್ರಾಯ ಎಂದು ಅವರು ಹೇಳಿದರು.

ನಾವು ಸುಡಬೇಕಾಗಿರುವುದು ಮೈಮೇಲಿನ ಬಟ್ಟೆಗಳನ್ನಲ್ಲ. ನಮ್ಮಲ್ಲಿರುವ ಸಂಘರ್ಷ ಭಾವನೆ, ಧರ್ಮದ ದಂಗಲದಂತ ಭಾವನೆಗಳನ್ನು ಸುಟ್ಟುಹಾಕಬೇಕಿದೆ. ನಾವು ಪೆಟ್ರೋಲ್‌ ಹಾಕುತ್ತೇವೆ. ನೀವು ಸುಟ್ಟು ಬಿಡಿ ಎನ್ನುವವರು ಎರಡೂ ಪಕ್ಷದಲ್ಲಿದ್ದಾರೆ ಅಂತ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.