*  ಮೋದಿ ಅಭಿವೃದ್ಧಿ ಕಾರ್ಯಗಳನ್ನು ಜಗತ್ತೇ ಮೆಚ್ಚಿದೆ: ಸಿ.ಸಿ.ಪಾಟೀಲ *  ವಿಪಕ್ಷ ನಾಯಕನಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಟಾಂಗ್‌*  ಶಿಕ್ಷಣ ಸಚಿವರ ಮನೆ ಬಳಿ ಗಲಾಟೆ ಮಾಡಿದ್ದು ಯಾರು? 

ಗದಗ(ಜೂ.05): ಪ್ರಧಾನಿ ನರೇಂದ್ರ ಮೋದಿ 8 ವರ್ಷದ ಅಧಿಕಾರವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜಗತ್ತೇ ಮೆಚ್ಚಿದೆ, ಅವರೊಬ್ಬ ವಿಶ್ವ ನಾಯಕರು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಅವರು ಶನಿವಾರ ನಗರದ ಶ್ರೀನಿವಾಸ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರಧಾನಿ ಮೋದಿ ಅವರ 8 ವರ್ಷಗಳ ಸಾಧನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2014ರಲ್ಲಿ ಹೇಳಿದ ಮಾತಿನಂತೆ ನಡೆದುಕೊಂಡಿರುವ ಮೋದಿ ಅವರು, ಸಂಸತ್‌ ಭವನದ ಮೆಟ್ಟಿಲಿಗೆ ನಮಸ್ಕರಿಸಿ ಒಳಗೆ ಪ್ರವೇಶಿಸುವುದರಿಂದ ಪ್ರಾರಂಭಿಸಿ, ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪ್ರಮುಖ ನಾಯಕರು ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸುವ ಮಟ್ಟಕ್ಕೆ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.

MLC Election: ಶಿಕ್ಷಕರಿಂದ ನಯಾಪೈಸೆ ಪಡೆಯದೇ ಸೇವೆ ಸಲ್ಲಿಸಿದ್ದೇನೆ: ಹೊರಟ್ಟಿ

ಆರ್ಥಿಕವಾಗಿ ಅತ್ಯಂತ ಪ್ರಬಲವಾಗಿರುವ ಎರಡು ರಾಷ್ಟ್ರಗಳು ಯುದ್ಧದ ವೇಳೆಯಲ್ಲಿ ಕದನ ವಿರಾಮ ಘೋಷಣೆ ಮಾಡಿ ನಮ್ಮ ಭಾರತೀಯ ಪ್ರಜೆಗಳನ್ನು ಮರಳಿ ದೇಶಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ ಎಂದರು.

ರಾಮ ಮಂದಿರ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆದರೆ ಮಂದಿರ ಕಟ್ಟುವುದಿಲ್ಲ ಎನ್ನುವ ವಿರೋಧ ಪಕ್ಷದ ಟೀಕೆಗೂ ಅದರ ಭೂಮಿಪೂಜೆ ನಡೆಸುವ ಮೂಲಕ ಉತ್ತರ ನೀಡಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ದೇಶದ ಜನರ ಜೀವ ಉಳಿಸಿದ್ದಾರೆ. ಜಮ್ಮ ಕಾಶ್ಮೀರದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಸಂವಿಧಾನದ ಆರ್ಟಿಕಲ್‌ 370 ರದ್ದು, ಸಿಎಎ ಜಾರಿ, ತ್ರಿವಳಿ ತಲಾಖ ಸೇರಿದಂತೆ ಹತ್ತಾರು ಮಹತ್ವದ ನಿರ್ಧಾರ ತೆಗೆದುಕೊಂಡು ದೇಶ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದಾರೆ ಎಂದರು.

ಕೋವಿಡ್‌ ನಂತರ ದೇಶದ ಜಿಡಿಪಿ ಬೆಳವಣಿಗೆ, ಆಯುಷ್ಮಾನ್‌ ಯೋಜನೆ ಮೂಲಕ ಪ್ರತಿಯೊಬ್ಬರಿಗೂ 5 ಲಕ್ಷದ ವರೆಗೂ ಆರೋಗ್ಯ ವಿಮೆ, ಬಡವರಿಗೆ ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್‌, ರೈತರಿಗೆ ಕಿಸಾನ್‌ ಸಮ್ಮಾನ ಯೋಜನೆಯಡಿ . 1.82 ಲಕ್ಷ ಕೋಟಿ ಅನುದಾನ, . 38 ಸಾವಿರ ಕೋಟಿ ಬೆಳೆ ವಿಮೆ, ಯೂರಿಯಾ ಮಾಫಿಯಾ ತಪ್ಪಿಸಲು ಯೂರಿಯಾಕ್ಕೆ ಬೇವು ಲೇಪನ, ಪ್ರತಿ ಗಂಟೆಗೆ 37 ಕಿಮೀ ಹೊಸ ರಸ್ತೆಗಳ ನಿರ್ಮಾಣ, 800 ವೈದ್ಯಕೀಯ ಕಾಲೇಜುಗಳ ಪ್ರಾರಂಭ... ಹೀಗೆ ಪ್ರಧಾನಿ ಮೋದಿ ಅವರ ಸಾಧನೆಗಳನ್ನು ಕೊಂಡಾಡಿದರು.

ಸುದ್ದಿಗೋಷ್ಠಿಯಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ, ಶಿರಹಟ್ಟಿಶಾಸಕ ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ರವಿ ದಂಡಿನ, ಶ್ರೀಪತಿ ಉಡುಪಿ, ಭೀಮಸಿಂಗ್‌ ರಾಠೋಡ, ಮಾಜಿ ಅಧ್ಯಕ್ಷ ಎಂ.ಎಸ್‌. ಕರಿಗೌಡ್ರ, ಶಿವು ಹಿರೇಮನಿಪಾಟೀಲ, ಮಾಧವ ಗಣಾಚಾರಿ, ಮಂಜುನಾಥ ಮೆಣಸಗಿ ಹಾಜರಿದ್ದರು.

ಸಿದ್ದರಾಮಯ್ಯ ಪದೇ ಪದೇ ಆರ್‌ಎಸ್‌ಎಸ್‌ ಟೀಕೆ ಮಾಡುವುದರಿಂದ ದೊಡ್ಡವರಾಗುವುದಿಲ್ಲ, ಬದಲಾಗಿ ಮುಂದಿನ ಚುನಾವಣೆಯಲ್ಲಿ ಅವರಿಗೆ ಬರುತ್ತಿದ್ದ ಅಲ್ಪ ಹಿಂದೂ ಮತಗಳು ಕೂಡಾ ಅವರಿಂದ ದೂರವಾಗಲಿವೆ. ಆರ್‌ಎಸ್‌ಎಸ್‌ ನಮ್ಮ ಪಕ್ಷದ ಮಾತೃಸಂಸ್ಥೆ, ಆ ಸಂಸ್ಥೆಯ ಬಗ್ಗೆ ಯಾರಾದರೂ ಮಾತನಾಡಿದರೆ ಸಹಜವಾಗಿ ದೇಶಪ್ರೇಮಿಗಳಿಗೆ ನೋವಾಗುತ್ತದೆ ಅಂತ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ. 

ಅಂದಿನ ಕಾಲದಲ್ಲಿಯೇ ನೆಹರು ಅವರು ಆರ್‌ಎಸ್‌ಎಸ್‌ ನಿರ್ನಾಮದ ಬಗ್ಗೆ ಮಾತನಾಡಿದ್ದರು. ಅದು ಸಾಧ್ಯವಾಗಿದೆಯೇ? ಇಲ್ಲವಲ್ಲ. ಇನ್ನು ಸಿದ್ದರಾಮಯ್ಯ ಆರ್‌ಎಸ್‌ಎಸ್‌ ಟೀಕಿಸಿದರೆ ಏನು ಆಗಲು ಸಾಧ್ಯ? ಯಾರನ್ನೋ ಮೆಚ್ಚಿಸಲು ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ ಅಂತ ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದ್ದಾರೆ. 

ಜಿಡಿಪಿ ಟೀಕಿಸುವ ಸಿದ್ದರಾಮಯ್ಯ ಅಂಕಿ-ಅಂಶ ನೀಡಲಿ

ಪ್ರಧಾನಿ ಸಾಧನೆಗಳ ಬಗ್ಗೆ, ದೇಶದ ಜಿಡಿಪಿ ಬೆಳವಣಿಗೆ ಕುರಿತು ಟೀಕೆ ಮಾಡುವ ಮಾಜಿ ಸಿಎಂ ಸಿದ್ದರಾಮಯ್ಯ ಅದಕ್ಕೆ ಪೂರಕ ಅಂಕಿ-ಅಂಶ ನೀಡಲಿ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

Gadag: ಲಿಂಗಾಯತ ಧರ್ಮ ಎಂದಿಗೂ ವೈದಿಕ ಧರ್ಮದ ಭಾಗವಲ್ಲ: ಅಶೋಕ ಬರಗುಂಡಿ

ಶನಿವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜಿಡಿಪಿ 8 ಪರ್ಸೆಂಟ್‌ ಏರಿಕೆಯಾಗಿದೆ ಎಂದು ನಾವು ಹೇಳಿದ್ದೇವೆ. ಇಲ್ಲ ಎಂದಾದಲ್ಲಿ ಸಾಬೀತು ಪಡಿಸಲಿ. ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ, ಅದು ಪಾದರಸ ಇದ್ದಂತೆ. ಯಾವುದೇ ಆಧಾರವಿಲ್ಲದೇ ಮಾತನಾಡುವುದು ಸಿದ್ದರಾಮಯ್ಯ ಅವರಂಥ ಹಿರಿಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ನಡುವಿನ ಒಳಜಗಳದಲ್ಲಿ ಅವರ ತಲೆ ಖಾಲಿಯಾಗಿದೆ. ಖಾಲಿ ಇರುವ ತಲೆ ಭೂತಗಳ ಕಾರ್ಖಾನೆಯಂತೆ ಏನೇನೋ ಮಾತನಾಡಲು ಪ್ರಾರಂಭಿಸುತ್ತದೆ ಎಂದು ವ್ಯಂಗ್ಯವಾಡಿದರು.

ಶಿಕ್ಷಣ ಸಚಿವರ ಮನೆ ಬಳಿ ಗಲಾಟೆ ಮಾಡಿದ್ದು ಯಾರು? ಎನ್‌ಎಸ್‌ಯುಐ ಅಂದರೆ ಇದು ಯಾರ ಸಂಘಟನೆ? ಎಂದ ಅವರು, ಆರ್‌ಎಸ್‌ಎಸ್‌ಗೆ ಬೈದರೆ ಅವರಿಗೆ ಹೋಗುವ 2/3 ಪರ್ಸೆಂಟ್‌ ವೋಟುಗಳು ನಮಗೆ ಬರುತ್ತವೆ, ಅವರದ್ದೇ ನಾಯಕರು ಈ ಮಾತು ಹೇಳುತ್ತಿದ್ದಾರೆ, ಅವರು ಬೈಯುವುದರಿಂದ ನಮಗೆ ಲಾಭ ಎಂದರು.

ಸಿದ್ದರಾಮಯ್ಯ ಟಾರ್ಗೆಟ್‌ ಡಿ.ಕೆ. ಶಿವಕುಮಾರ, ಡಿ.ಕೆ. ಶಿವಕುಮಾರ ಅವರ ಟಾರ್ಗೆಟ್‌ ಸಿದ್ದರಾಮಯ್ಯ, ಇದು ನಾನು ಹೇಳಿದ್ದಲ್ಲ, ಅವರ ಪಕ್ಷದ ಮುಖಂಡ ಸುರ್ಜೆವಾಲಾ ಅವರೇ ರಾಜಕೀಯ ತಿಕ್ಕಾಟ ಬಿಡಿ ಎಂದು ಹೇಳಿದ್ದಾರೆ.
ಚೆಡ್ಡಿ ಸುಟ್ಟಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು ಎಷ್ಟುಚೆಡ್ಡಿ ಸುಡುತ್ತಾರೋ ಅಷ್ಟುಚೆಡ್ಡಿ ಉತ್ಪತ್ತಿಯಾಗುತ್ತವೆ. ಚೆಡ್ಡಿ ಸುಡುವುದರಿಂದ ನಮ್ಮ ಸಂಘಟನೆಗೆ ತೊಂದರೆ ಇಲ್ಲ, ನಮ್ಮದು ದೇಶ ಭಕ್ತ ಸಂಘಟನೆ, ನಮ್ಮ ಸಂಘಟನೆ ಅವಮಾನಿಸಿದರೆ ಇನ್ನು ಹತ್ತು ಹೆಚ್ಚು ದೇಶ ಭಕ್ತರು ಹುಟ್ಟುತ್ತಾರೆ ಎಂದರು.