ಬೆಂಗಳೂರು [ಡಿ.20]:  ಈ ಮಾಸಾಂತ್ಯದ ವೇಳೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರು ನೇಮಕವಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದೇ ವೇಳೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಅವರು ಮುಂದುವರೆಯುವ ಲಕ್ಷಣಗಳಿವೆ.

ಉಪ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕು ಎಂದು ರಾಜ್ಯ ನಾಯಕರ ಅಭಿಪ್ರಾಯ ಪಡೆಯಲು ಎಐಸಿಸಿ ನಿಯೋಜಿಸಿದ ವೀಕ್ಷಕರಾದ ಮಧುಸೂದನ್‌ ಮಿಸ್ತ್ರಿ ಹಾಗೂ ಭಕ್ತಚರಣ ದಾಸ ಅವರು ಗುರುವಾರ ಈ ಪ್ರಕ್ರಿಯೆ ನಡೆಸಿದ ನಂತರ ಇಂತಹದೊಂದು ಸೂಚನೆ ದೊರಕಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆಶಿ, ಪರಮೇಶ್ವರ್‌, ಎಂ.ಬಿ.ಪಾಟೀಲ್‌, ಮುನಿಯಪ್ಪ ಅವರ ಹೆಸರು ಕೇಳಿ ಬಂದಿದೆ.

ಮಿಸ್ತ್ರಿ ಹಾಗೂ ದಾಸ್‌ ಅವರು ಸಿದ್ದರಾಮಯ್ಯ ಅವರೂ ಸೇರಿದಂತೆ ಇಡೀ ದಿನ ಸುಮಾರು ಐವತ್ತು ಮಂದಿ ಕಾಂಗ್ರೆಸ್‌ ನಾಯಕರಿಂದ ಈ ಕುರಿತು ಅಭಿಪ್ರಾಯ ಸಂಗ್ರಹ ಮಾಡಿದರು. ಪ್ರತಿಯೊಬ್ಬ ನಾಯಕರೊಂದಿಗೂ ಪ್ರತ್ಯೇಕವಾಗಿ ವೀಕ್ಷಕರು ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಬಹುತೇಕ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥರೊಬ್ಬರ ನೇಮಕಕ್ಕೆ ಇದು ಸಕಾಲ. ಹೀಗಾಗಿ ದಿನೇಶ್‌ ಗುಂಡೂರಾವ್‌ ಅವರ ರಾಜೀನಾಮೆ ಅಂಗೀಕರಿಸುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾಗೆ ಮಹತ್ವದ ಹುದ್ದೆ ನೀಡಿದ BSY ಸರ್ಕಾರ...

ಆದರೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಇಂತಹ ಏಕಮುಖ ಅಭಿಪ್ರಾಯ ವ್ಯಕ್ತವಾಗಿಲ್ಲ. ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದರೆ ಪಕ್ಷಕ್ಕೆ ಭಾರಿ ನಷ್ಟವಾಗಲಿದೆ. ಯಾವುದೇ ಕಾರಣಕ್ಕೂ ಅವರನ್ನು ಬದಲಾಯಿಸಬಾರದು ಎಂದು ಕೆಲ ನಾಯಕರು ವಾದಿಸಿದರೆ, ಸಿದ್ದರಾಮಯ್ಯ ಅವರು ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ತಮ್ಮ ಆಪ್ತ ಬಳಗದ ಕೋಟೆ ಕಟ್ಟಿಕೊಂಡು ಹಿರಿಯರ ನಾಯಕರ ಉಪೇಕ್ಷೆ ಮಾಡಿದ್ದಾರೆ. ಇದರಿಂದಾಗಿಯೆ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಲಗಾಮ್‌ ಬೀಳಬೇಕು ಎಂದು ವಾದ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

4 ಸ್ಥಾನ ಸೃಷ್ಟಿ, ಜಾತಿವಾರು ಆದ್ಯತೆ:

ಈ ಪೈಕಿ ಕೆಲವರು ಕಾಂಗ್ರೆಸ್‌ ಶಾಸಕಾಂಗ ಪಕ್ಷ ಹಾಗೂ ಪ್ರತಿಪಕ್ಷ ನಾಯಕ ಎಂದು ಹುದ್ದೆಗಳನ್ನು ವಿಭಜಿಸಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಮುಂದುವರೆಸಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತೊಬ್ಬ ನಾಯಕರನ್ನು ತರಬೇಕು ಎಂಬ ವಾದ ಮಂಡಿಸಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕನ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂಬ ಸ್ಥಾನವನ್ನು ಸೃಷ್ಟಿಸಿ ನಾಲ್ಕು ಪ್ರಮುಖ ವರ್ಗಗಳಾದ ಹಿಂದುಳಿದ, ಲಿಂಗಾಯತ, ಒಕ್ಕಲಿಗ ಹಾಗೂ ಪರಿಶಿಷ್ಟರಿಗೆ ತಲಾ ಒಂದೊಂದು ಸ್ಥಾನ ನೀಡಿ ಸಾಮೂಹಿಕ ನಾಯಕತ್ವಕ್ಕೆ ಒತ್ತು ನೀಡಿ ಎಂಬಂತಹ ಸಲಹೆಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೀಗೆ ಶಾಸಕಾಂಗ ಪಕ್ಷ ನಾಯಕನ ಸ್ಥಾನದ ಬಗ್ಗೆ ಗೊಂದಲವಿರುವ ಹೈಕಮಾಂಡ್‌ ಈ ವಿಚಾರದಲ್ಲಿ ತಕ್ಷಣಕ್ಕೆ ಯಾವುದೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರು ಬರುವುದು ಖಚಿತ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಹಿರಿಯ ನಾಯಕರು ನೀಡಿರುವ ಅಭಿಪ್ರಾಯಗಳ ಆಧಾರದ ಮೇಲೆ ವೀಕ್ಷಕರು ಶೀಘ್ರವೇ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಈ ವರದಿ ಆಧರಿಸಿ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಭರ್ಜರಿ ಪೈಪೋಟಿ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಖಚಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಜಾತಿವಾರು ಆದ್ಯತೆಯ ಮೇಲೆ ಹಲವು ನಾಯಕರ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವ ಸಮುದಾಯವನ್ನು ಕಾಂಗ್ರೆಸ್‌ ಪಕ್ಷ ತನ್ನ ಪರ ಮಾಡಿಕೊಳ್ಳಬೇಕೋ ಅಂತಹ ಸಮುದಾಯದ ನಾಯಕರಿಗೆ ಈ ಹುದ್ದೆ ನೀಡಬೇಕು ಎಂಬ ನಿಲುವನ್ನು ಹೈಕಮಾಂಡ್‌ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಯಾವ ಸಮುದಾಯ ಕಾಂಗ್ರೆಸ್‌ ಪರ ನಿಲುವು ತಾಳಬಹುದು ಎಂಬ ಬಗೆಗೂ ವೀಕ್ಷಕರು ನಾಯಕರಿಂದ ಅಭಿಪ್ರಾಯ ಪಡೆದರು ಎನ್ನಲಾಗಿದೆ.

ಈ ವೇಳೆ ಮುಂದಿನ ಚುನಾವಣೆ ವೇಳೆಗೆ ಯಡಿಯೂರಪ್ಪ ಅವರ ಪ್ರಭಾವ ಕಡಿಮೆಯಾಗುವುದರಿಂದ ಉತ್ತರ ಕರ್ನಾಟಕದ ಲಿಂಗಾಯತರನ್ನು ಈ ಹುದ್ದೆಗೆ ತರುವುದು ಸೂಕ್ತ ಎಂದು ಕೆಲ ನಾಯಕರು ಸೂಚಿಸಿದ್ದರೆ, ಜೆಡಿಎಸ್‌ ದುರ್ಬಲಗೊಂಡಿರುವುದರಿಂದ ಒಕ್ಕಲಿಗ ಸಮುದಾಯವನ್ನು ಕಾಂಗ್ರೆಸ್‌ ಸುಲಭವಾಗಿ ತನ್ನತ್ತ ಸೆಳೆಯಬಹುದು. ಹೀಗಾಗಿ ಒಕ್ಕಲಿಗರಿಗೆ ಈ ಸ್ಥಾನ ನೀಡುವುದು ಉತ್ತಮ ಎಂದು ಮತ್ತೆ ಕೆಲವರು ಅಭಿಪ್ರಾಯ ಮಂಡಿಸಿದರು ಎನ್ನಲಾಗಿದೆ.

ಬಹುದೊಡ್ಡ ಸಮುದಾಯವಾದ ಪರಿಶಿಷ್ಟರಿಗೆ ಈ ಹುದ್ದೆ ನೀಡುವುದು ಸೂಕ್ತ ಎಂದು ಕೆಲವರು ವಾದಿಸಿದರೆ, ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆದರೆ ಅವರಿಗೆ ಹೊಂದಿಕೊಳ್ಳುವಂತಹ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆಯೇ ಭಿನ್ನಾಭಿಪ್ರಾಯ ಮೂಡಿ ಗುಂಪುಗಳು ನಿರ್ಮಾಣವಾಗಬಹುದು ಎಂದು ಇನ್ನೂ ಕೆಲವರು ತಿಳಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದಿಂದ ಡಿ.ಕೆ. ಶಿವಕುಮಾರ್‌, ಲಿಂಗಾಯತ ಸಮುದಾಯದಿಂದ ಎಂ.ಬಿ. ಪಾಟೀಲ್‌ ಹಾಗೂ ಪರಿಶಿಷ್ಟರಿಂದ ಡಾ. ಜಿ.ಪರಮೇಶ್ವರ್‌ ಹಾಗೂ ಕೆ.ಎಚ್‌. ಮುನಿಯಪ್ಪ ಅವರ ಹೆಸರು ಕೇಳಿಬಂದಿದೆ. ಇನ್ನು ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಹೊಂದಾಣಿಕೆ ಮೂಲಕ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿರುವ ನಾಯಕರಾಗಿ ಬ್ರಾಹ್ಮಣರಾದ ರಮೇಶ್‌ಕುಮಾರ್‌ ಅವರ ಹೆಸರು ಕೂಡ ಚರ್ಚೆಯಲ್ಲಿದೆ ಎನ್ನಲಾಗಿದೆ.