Asianet Suvarna News Asianet Suvarna News

ಬಿಎಸ್‌ವೈ ಪ್ರವಾಸಕ್ಕೆ ಬಿಜೆಪಿ ಅಡ್ಡಿ ಇಲ್ಲ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ!

* ಬಿಎಸ್‌ವೈ ಪ್ರವಾಸಕ್ಕೆ ಬಿಜೆಪಿ ಅಡ್ಡಿ ಇಲ್ಲ ಗ್ರೀನ್‌ ಸಿಗ್ನಲ್‌

* ಸರ್ಕಾರದಲ್ಲಿ 2 ಅಧಿಕಾರ ಕೇಂದ್ರಗಳಿಲ್ಲ

* ಮೋದಿ, ಬೊಮ್ಮಾಯಿ ಸಾಧನೆ ಆಧರಿಸಿ ಮುಂದಿನ ಚುನಾವಣೆ

* ಯಡಿಯೂರಪ್ಪ ಯಾತ್ರೆಯಿಂದ ಪಕ್ಷಕ್ಕೆ ಲಾಭ

* ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟನೆ

No Hurdles For BS Yediyurappa State Tour BJP Karnataka in charge Arun Singh Clarifies pod
Author
Bangalore, First Published Aug 30, 2021, 12:54 PM IST
  • Facebook
  • Twitter
  • Whatsapp

ವಿಜಯ್‌ ಮಲಗಿಹಾಳ

ಬೆಂಗಳೂರು(ಆ.30): ಬರುವ ಗಣೇಶ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆರಂಭಿಸಲು ಉದ್ದೇಶಿಸಿರುವ ರಾಜ್ಯ ಪ್ರವಾಸಕ್ಕೆ ಪಕ್ಷದಿಂದ ಯಾವುದೇ ರೀತಿಯ ಆಕ್ಷೇಪ ಅಥವಾ ವಿರೋಧ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಅವರು ಪಕ್ಷದ ಹಿರಿಯ ನಾಯಕರಾಗಿಯೇ ಪ್ರವಾಸ ಕೈಗೊಳ್ಳುವುದರಿಂದ ಅದರಿಂದ ಪಕ್ಷಕ್ಕೆ ಲಾಭವೇ ಆಗುತ್ತದೆ. ಸಂಘಟನೆಯೂ ಬಲಗೊಳ್ಳುತ್ತದೆ ಎಂದಿರುವ ಅವರು, ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸಚಿವರನ್ನಾಗಿ ಮಾಡುವ ಯಾವುದೇ ಉದ್ದೇಶವೂ ಇಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಆ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ವೇಳೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಇದೀಗ ಹೆಚ್ಚೂ ಕಡಮೆ ಒಂದು ತಿಂಗಳ ಬಳಿಕ ಸೋಮವಾರ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ನಾಲ್ಕು ದಿನಗಳ ಕಾಲ ರಾಜ್ಯದಲ್ಲಿದ್ದು, ಪಕ್ಷದ ವಿವಿಧ ಸಭೆಗಳಲ್ಲೂ ಪಾಲ್ಗೊಳ್ಳಲಿದ್ದಾರೆ. ವಿಧಾನಸಭೆಯ 2023ರ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಶೀಘ್ರದಲ್ಲೇ ಪಕ್ಷದ ಪ್ರಮುಖ ಮುಖಂಡರನ್ನು ಒಳಗೊಂಡ ಚಿಂತನ ಬೈಠಕ್‌ ನಡೆಸಲು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ದೆಹಲಿಯಿಂದ ದೂರವಾಣಿ ಮೂಲಕ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಅವರ ಸಂದರ್ಶನದ ಆಯ್ದ ಭಾಗ ಹೀಗಿದೆ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಹೇಗೆ ನಡೆಯುತ್ತಿದೆ? ಈಗ ಪಕ್ಷದ ವರಿಷ್ಠರಿಗೆ ಸಮಾಧಾನ ತಂದಿದೆಯೇ?

- ಬೊಮ್ಮಾಯಿ ನೇತೃತ್ವದ ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರಂಭಿಸಿದ ಒಳ್ಳೆಯ ಕೆಲಸಗಳನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ. ಯುವಕರು, ಮಹಿಳೆಯರು ಮತ್ತು ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳ ಅನುಷ್ಠಾನದಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಎಲ್ಲ ಸಚಿವರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಉತ್ತಮ ಆಡಳಿತ ನೀಡುವ ಪ್ರಯತ್ನದಲ್ಲಿದ್ದಾರೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ವಿಶ್ವಾಸದಿಂದ ಎದುರಿಸುವುದು ನಿಶ್ಚಿತ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಎಂದರೆ ಯಡಿಯೂರಪ್ಪ ಸೇರಿದಂತೆ ಇತರ ನಾಯಕರು ನೇಪಥ್ಯಕ್ಕೆ ಸರಿದಂತಲ್ಲವೇ?

- ಹಾಗಲ್ಲ. ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿ. ಸಾಕಷ್ಟುಅನುಭವ ಹೊಂದಿದ್ದಾರೆ. ಅನುಭವದ ಜೊತೆಗೆ ಸರಳ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಅವರಿಗೆ ತಳಮಟ್ಟದ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ಆಗಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.

ಹಾಗಾದರೆ ಮುಂಬರುವ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾತ್ರ ಪಕ್ಷದಲ್ಲಿ ಏನಾಗಿರುತ್ತದೆ? ಅವರ ಜವಾಬ್ದಾರಿ ಏನು?

-ಯಡಿಯೂರಪ್ಪ ಅವರು ನಮ್ಮ ಪಕ್ಷದ ಉನ್ನತ ನಾಯಕರು. ಅವರು ಹಲವು ಬಾರಿ ಕರ್ನಾಟಕದ ಮೂಲೆ ಮೂಲೆ ಪ್ರವಾಸ ಕೈಗೊಂಡು ಪಕ್ಷದ ನೆಲೆಗಟ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಕ್ಷ ಯಡಿಯೂರಪ್ಪ ಅವರ ಅನುಭವ ಮತ್ತು ಮಾರ್ಗದರ್ಶನದ ಲಾಭವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲಿದೆ.

ಗಣೇಶ ಹಬ್ಬದ ಬಳಿಕ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪಕ್ಷದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದ್ದು, ಪ್ರವಾಸ ತಡೆಯುವ ಪ್ರಯತ್ನ ನಡೆದಿದೆಯಂತೆ?

- ಆಕ್ಷೇಪ ಯಾಕೆ? ಅವರು ಪಕ್ಷದ ಹಿರಿಯ ನಾಯಕರಾಗಿಯೇ ಪ್ರವಾಸ ಕೈಗೊಳ್ಳುವುದರಿಂದ ಪಕ್ಷಕ್ಕೆ ಲಾಭವೇ ಆಗುತ್ತದೆ. ಸಂಘಟನೆ ಬಲಗೊಳ್ಳುತ್ತದೆ. ಅದಕ್ಕೆ ನಮ್ಮ ಆಕ್ಷೇಪ ಅಥವಾ ವಿರೋಧವೇನೂ ಇಲ್ಲ. ನಾವು ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ.

ಯಡಿಯೂರಪ್ಪ ಅವರು ಈಗ ಪ್ರವಾಸ ಆರಂಭಿಸಿದರೆ ಮತ್ತೊಂದು ಅಧಿಕಾರ ಕೇಂದ್ರವಾಗಿ ರೂಪುಗೊಂಡು ಅದರಿಂದ ಈಗಿನ ಬೊಮ್ಮಾಯಿ ಸರ್ಕಾರಕ್ಕೆ ತೊಂದರೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ?

-ಪಕ್ಷದಲ್ಲಿ ಮತ್ತೊಂದು ಅಧಿಕಾರ ಕೇಂದ್ರ ಎಂಬ ಮಾತೇ ಇಲ್ಲ. ಇದುವುದು ಒಂದೇ ಅಧಿಕಾರ ಕೇಂದ್ರ. ಅದು ಬಿಜೆಪಿ ಮಾತ್ರ. ಒಂದು ಮಾತು ಮಾತ್ರ ಸ್ಪಷ್ಟ- ಸರ್ಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಪಕ್ಷ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ. ಅವರಿಬ್ಬರೂ ಇತರ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರನ್ನು ರಾಜ್ಯಪಾಲರನ್ನಾಗಿ ಮಾಡಿ ಬೇರೊಂದು ರಾಜ್ಯಕ್ಕೆ ಕಳುಹಿಸುವ ಚಿಂತನೆ ಪಕ್ಷದ ಹೈಕಮಾಂಡ್‌ ಮಟ್ಟದಲ್ಲಿದೆಯೇ?

-ನನಗೆ ಆ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಸರ್ಕಾರದಲ್ಲಿ ವಿಜಯೇಂದ್ರ ಅವರಿಗೆ ಸಚಿವರಾಗಿ ಸ್ಥಾನಮಾನ ಸಿಗುವ ಸಾಧ್ಯತೆಯೇ ಇದೆಯೇ?

-(ತುಸು ಗಂಭೀರವಾಗಿ) ನಾನು ಹೇಳಿದೆನಲ್ಲ. ಅವರು ಪಕ್ಷದ ಸಂಘಟನೆ ಬಲಪಡಿಸುತ್ತಿದ್ದಾರೆ.

ನೀವು ನಾಲ್ಕು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದೀರಿ? ಎಲ್ಲೆಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದೀರಿ?

-ಮುಂದಿನ ವಿಧಾನಸಭಾ ಚುನಾವಣೆಯೇ ನನ್ನ ಪರಮ ಆದ್ಯತೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಪಕ್ಷದ ಪ್ರಮುಖ ಮುಖಂಡರನ್ನು ಒಳಗೊಂಡ ಚಿಂತನ ಬೈಠಕ್‌ ನಡೆಸಿ ಚುನಾವಣೆಯ ರೂಟ್‌ ಮ್ಯಾಪ್‌ ಸಿದ್ಧಪಡಿಸುತ್ತೇನೆ. ನಾನು ಹಂತ ಹಂತವಾಗಿ ಒಂದೊಂದು ಜಿಲ್ಲೆಗೆ ಭೇಟಿ ನೀಡಿ ಅಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವ ಉದ್ದೇಶ ಹೊಂದಿದ್ದೇನೆ. ಸಂಘಟನೆ ಹೇಗೆ ನಡೆಯುತ್ತಿದೆ ಎಂಬುದರ ಮಾಹಿತಿ ಸಂಗ್ರಹಿಸುವುದು ಹಾಗೂ ಕಾರ್ಯಕರ್ತರನ್ನು ಪ್ರೋತ್ಸಾಹಿಸುವುದು ಮುಖ್ಯ ಗುರಿ. ಈಗ ನಮ್ಮ ಆದ್ಯತೆ ಹಳೆ ಮೈಸೂರು ಭಾಗದಲ್ಲಿ ದುರ್ಬಲವಾಗಿರುವ ಪಕ್ಷದ ಸಂಘಟನೆಯನ್ನು ಬಲಪಡಿಸುವುದು. ಹೀಗಾಗಿ, ಮೈಸೂರಿನಿಂದಲೇ ನನ್ನ ಪ್ರವಾಸ ಆರಂಭಿಸುತ್ತಿದ್ದೇನೆ.

ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದವರನ್ನು ಸಮಾಧಾನ ಮಾಡುವಲ್ಲಿ ಉಸ್ತುವಾರಿಯಾಗಿ ನೀವು ಯಶಸ್ವಿಯಾದಂತಿದೆ?

-ಈಗ ಖಾತೆಗೆ ಸಂಬಂಧಿಸಿದಂತೆ ಯಾರಿಗೂ ಅಸಮಾಧಾನ ಇಲ್ಲ. ಎಲ್ಲ ಸಚಿವರೂ ಅಧಿಕಾರ ಸ್ವೀಕರಿಸಿ ತಮ್ಮ ಕೆಲಸ ಆರಂಭಿಸಿದ್ದಾರೆ. ನಮ್ಮ ಗುರಿ 2023ರ ವಿಧಾನಸಭಾ ಚುನಾವಣೆ ಆಗಿರಬೇಕು. ಅದು ನಮ್ಮ ಆದ್ಯತೆ. ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿರಿಸಿ ಚುನಾವಣೆಯತ್ತ ಗಮನಹರಿಸಿ ಕೆಲಸ ಮಾಡಿ ಎಂದು ನಾನು ಸಂಬಂಧಪಟ್ಟಸಚಿವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಹೆಚ್ಚು ಪ್ರವಾಸ ಕೈಗೊಳ್ಳಬೇಕು, ಜತೆಗೆ ಜನರು ಹಾಗೂ ಪಕ್ಷದ ಕಾರ್ಯಕರ್ತರನ್ನು ಹೆಚ್ಚು ಹೆಚ್ಚು ಭೇಟಿ ಮಾಡಿ ಅವರ ಅಹವಾಲು ಆಲಿಸಬೇಕು ಎಂಬ ಸೂಚನೆಯನ್ನೂ ನೀಡಿದ್ದೇನೆ.

ಎರಡು ವರ್ಷಗಳ ಅವಧಿ ಪೂರೈಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಕಾರ್ಯವೈಖರಿ ಬಗ್ಗೆ ಏನು ಹೇಳುತ್ತೀರಿ?

-ಕಟೀಲ್‌ ಅವರ ನೇತೃತ್ವದಲ್ಲಿ ಪಕ್ಷದ ರಾಜ್ಯ ಘಟಕ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಪಕ್ಷದ ಎಲ್ಲ ಹಂತದ ಎಲ್ಲ ಕಮಿಟಿಗಳೂ ರಚನೆಯಾಗಿವೆ. ವಿವಿಧ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸಾಧನೆ ತೋರಿದೆ. ಕಟೀಲ್‌ ಅವರ ಸಂಘಟನಾ ಕೆಲಸ ಪ್ರಶಂಸಾರ್ಹವಾದ್ದು. ಸತತ ರಾಜ್ಯ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಹುರಿದುಂಬಿಸುವ ಮೂಲಕ ಪಕ್ಷ ಸಂಘಟನೆ ಬಲಪಡಿಸುತ್ತಿದ್ದಾರೆ.

ಇಷ್ಟೆಲ್ಲದರ ನಡುವೆಯೂ ಕಟೀಲ್‌ ಅವರನ್ನು ಬದಲಾಯಿಸಿ ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಆಗಾಗ ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿವೆಯಲ್ಲ?

-ಅದೆಲ್ಲ ಸುಳ್ಳು. ಕೇವಲ ವದಂತಿ ಅಷ್ಟೇ. ಅದರಲ್ಲಿ ಹುರುಳಿಲ್ಲ. ಅಂಥ ಯಾವುದೇ ಪ್ರಸ್ತಾಪ ಅಥವಾ ಆಲೋಚನೆ ನಮ್ಮ ಮುಂದಿಲ್ಲ.

ವಿಜಯೇಂದ್ರ ಸ್ಥಾನಮಾನ ಅಥವಾ ಪಾತ್ರ ಬದಲಾಗಲಿದೆಯೇ?

ವಿಜಯೇಂದ್ರ ಪಕ್ಷದ ರಾಜ್ಯ ಉಪಾಧ್ಯಕ್ಷರು. ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ದಾರಿಯಲ್ಲಿ ಮುಂದುವರೆಯಲಿದ್ದಾರೆ. ಅವರೊಬ್ಬ ಹಾರ್ಡ್‌ ವರ್ಕರ್‌. ರಾಜಕಾರಣವೂ ಅವರಿಗೆ ಗೊತ್ತಿದೆ. ಪಕ್ಷದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.

Follow Us:
Download App:
  • android
  • ios