ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ಗೆ ಯಾವುದೇ ಲಾಭವಿಲ್ಲ.  ಭವಿಷ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆದರೆ ಜೆಡಿಎಸ್‌ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನ ನಡೆಸಬಹುದು

 ಬೆಂಗಳೂರು (ಜು.27): ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್‌.ಯಡಿಯೂರಪ್ಪ ರಾಜೀನಾಮೆ ನೀಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ಗೆ ಯಾವುದೇ ಲಾಭವಿಲ್ಲ. ಆದರೆ, ಭವಿಷ್ಯದಲ್ಲಿ ರಾಜಕೀಯ ಬೆಳವಣಿಗೆಗಳು ನಡೆದರೆ ಜೆಡಿಎಸ್‌ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನ ನಡೆಸಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಬಿಜೆಪಿಗೆ ಸ್ಪಷ್ಟವಾದ ಬಹುಮತ ಇರುವ ಕಾರಣ ಯಡಿಯೂರಪ್ಪ ರಾಜೀನಾಮೆಯು ಜೆಡಿಎಸ್‌ಗೆ ಯಾವುದೇ ಲಾಭವಾಗಲಿ ಅಥವಾ ನಷ್ಟವಾಗಲಿ ಇಲ್ಲ. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜೆಡಿಎಸ್‌ ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಚುನಾವಣೆಯತ್ತ ಗಮನಹರಿಸಿದೆ. ನಾಯಕತ್ವದ ಬದಲಾವಣೆ ಬಗ್ಗೆ ಜೆಡಿಎಸ್‌ ವರಿಷ್ಠರು ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ರಾಜೀನಾಮೆ ಸುಳಿವು ಕೊಟ್ಟ ಬೆನ್ನಲ್ಲೇ ಬಿಎಸ್‌ವೈಗೆ ಜೆಡಿಎಸ್‌ ಸೇರುವಂತೆ ಬಂತು ಆಹ್ವಾನ

ಹೊಸದಾಗಿ ರಚನೆಯಾಗುವ ಸಚಿವ ಸಂಪುಟದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ತೊರೆದು ಬಿಜೆಪಿಗೆ ಹೋದ ವಲಸಿಗರಿಗೆ ಸಚಿವ ಸ್ಥಾನ ಸಿಗದೆ ಅಸಮಾಧಾನ ಭುಗಿಲೆದ್ದರೆ, ಆಗಿನ ಪರಿಸ್ಥಿತಿಗೆ ತಕ್ಕಂತೆ ರಾಜಕೀಯ ಲಾಭ ಪಡೆದುಕೊಳ್ಳುವ ಚಿಂತನೆ ನಡೆಸಿದೆ. ಅಲ್ಲದೇ, ಸರ್ಕಾರ ಎರಡು ವರ್ಷ ಪೂರ್ಣಗೊಳಿಸುವುದು ಅನುಮಾನ ಎಂಬ ಸನ್ನಿವೇಶಗಳು ಎದುರಾದರೆ ನಂತರ ರಾಜಕೀಯ ರಣತಂತ್ರಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ವರಿಷ್ಠರು ಮುಂದಾಗಿದ್ದಾರೆ.

ತಳಮಟ್ಟದಿಂದ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಸಭೆ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸದ್ಯಕ್ಕೆ ಯಾವುದೇ ರಾಜಕೀಯ ದಾಳವನ್ನು ಹಾಕದೆ ಬೆಳವಣಿಗೆಗಳ ಬಗ್ಗೆ ಗಮನಿಸಲಿದೆ. ಸದ್ಯಕ್ಕೆ ಯಾರನ್ನು ಸೆಳೆಯುವ ಪ್ರಯತ್ನಕ್ಕೂ ಮುಂದಾಗುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ ಎಂಬುದು ಜೆಡಿಎಸ್‌ಗೆ ಮನವರಿಕೆಯಾಗಿದೆ. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಮುಂದಿನ ನಿಲುವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಹೇಳಲಾಗಿದೆ.