ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಎದುರು ಸೋಲು ಅನುಭವಿಸುತ್ತೇವೆ ಎಂಬ ಭಯದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರು ಲೋಕಸಭಾ ಚುನಾವಣೆ ಕಣಕ್ಕಿಳಿಯಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. 

ಬೆಂಗಳೂರು (ಏ.01): ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಎದುರು ಸೋಲು ಅನುಭವಿಸುತ್ತೇವೆ ಎಂಬ ಭಯದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರು ಲೋಕಸಭಾ ಚುನಾವಣೆ ಕಣಕ್ಕಿಳಿಯಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಭಾನುವಾರ ಪಕ್ಷದ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ 10 ರಿಂದ 15 ಮಂದಿ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ನಿರ್ಧಾರ ಕೈಗೊಂಡಿದ್ದರು. ಆದರೆ, ಯಾವುದೇ ಒಬ್ಬ ಸಚಿವರೂ ಅಭ್ಯರ್ಥಿಯಾಗಲು ಒಪ್ಪಲಿಲ್ಲ. ಮೋದಿ ಅವರ ಜನಪ್ರಿಯತೆ ಕಾರಣಕ್ಕಾಗಿ ತಾವು ಚುನಾವಣೆಯಲ್ಲಿ ಗೆಲ್ಲದೇ ಹೋದರೆ ಹಾಗೂ ಜನರಿಂದ ತಿರಸ್ಕೃತವಾದರೆ ಎಂಬ ಭಯದಿಂದ ಯಾವುದೇ ಸಚಿವರು ಚುನಾವಣೆಯಲ್ಲಿ ನಿಲ್ಲಲು ತಯಾರಾಗಲಿಲ್ಲ ಎಂದು ಹೇಳಿದರು. ಕಾನೂನು ಘಟಕವು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕೇಸು ದಾಖಲಿಸುವುದು ಒಂದು ಸಹಜ ಪ್ರಕ್ರಿಯೆ. 

ನಮ್ಮ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಲೇಬೇಕು. ಇಲ್ಲದಿದ್ದರೆ ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ ಎಂದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಹತಾಶ ಸ್ಥಿತಿಯಲ್ಲಿದೆ. ಕೇವಲ 9 ತಿಂಗಳ ಹಿಂದೆ ಅಧಿಕಾರ ಪಡೆದ ಈ ಕಾಂಗ್ರೆಸ್ ಸರ್ಕಾರವು ಯಾವುದೋ ಒಂದು ಭ್ರಮೆಯಲ್ಲಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದ ಅಭೂತಪೂರ್ವ ಬೆಂಬಲದಿಂದ ಅಧಿಕಾರದ ಅಮಲಿನಲ್ಲಿ ಅದು ತೇಲುತ್ತಿತ್ತು. ಕಾಂಗ್ರೆಸ್ಸಿಗರಿಗೆ ಇವತ್ತು ಕ್ರಮೇಣವಾಗಿ ಜ್ಞಾನೋದಯ ಆಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಸತ್ಯಸಂಗತಿಗಳು ಮನವರಿಕೆ ಆಗುತ್ತಿವೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ತವರಲ್ಲಿ ಬಿಜೆಪಿ ಅತೃಪ್ತಿಗೆ ಮದ್ದರೆದ ಬಿ.ವೈ.ವಿಜಯೇಂದ್ರ!

ಸುಳ್ಳು ಪ್ರಚಾರದಿಂದ ಪ್ರಯೋಜನ ಸಿಗಲಾರದು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಜ್ಞಾನೋದಯ ಆಗಿದೆ. ಕೇವಲ 9 ತಿಂಗಳಲ್ಲಿ ಕೆಟ್ಟ ಸರ್ಕಾರ ಎಂಬ ಹೆಸರನ್ನು ಕಾಂಗ್ರೆಸ್ ಸರ್ಕಾರ ಪಡೆದುಕೊಂಡಿದೆ. ಜನರು ಹತಾಶರಾಗಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರದ ಜನಪ್ರಿಯತೆಯನ್ನು ನಾವು ಬಳಸಿಕೊಳ್ಳಬೇಕು ಎಂದು ಹೇಳಿದರು. ರಾಜ್ಯ ಪ್ರಕೋಷ್ಠಗಳ ಸಂಚಾಲಕ ದತ್ತಾತ್ರಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್, ರಾಷ್ಟ್ರೀಯ ಚುನಾವಣಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಅನಿಲ್‍ಕುಮಾರ್, ಲಕ್ಷ್ಮಣ್, ಚುನಾವಣಾ ವಿಭಾಗದ ರಾಜ್ಯ ಪ್ರಮುಖ ದತ್ತಗುರು ಹೆಗಡೆ, ವಿನೋದ್‍ಕುಮಾರ್, ರಾಜಶೇಖರ್, ಹರ್ಷ ಮುತಾಲಿಕ್ ಮತ್ತಿತರರು ಉಪಸ್ಥಿತರಿದ್ದರು.