ಬೆಂಗಳೂರು (ಸೆ.23): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದ ಕುರಿತ ವರದಿಗಳು ಸಂಪೂರ್ಣವಾಗಿ ನಿರಾಧಾರ ಮತ್ತು ಸತ್ಯಕ್ಕೆ ದೂರವಾದದ್ದು ಎಂದು ರಾಜ್ಯ ಬಿಜೆಪಿ ಸ್ಪಷ್ಟನೆ ನೀಡಿದೆ.

ಈ ಸಂಬಂಧ ಪ್ರಕಟಣೆ ನೀಡಿರುವ ರಾಜ್ಯ ಬಿಜೆಪಿ ವಕ್ತಾರ ಕ್ಯಾ.ಗಣೇಶ್‌ ಕಾರ್ಣಿಕ್‌, ‘ಕೆಲವು ಸುದ್ದಿವಾಹಿನಿಗಳು ಪದೇ ಪದೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ವರದಿಗಳನ್ನು ಪ್ರಸಾರ ಮಾಡುತ್ತಿವೆ. 

ಪಕ್ಷ ಈ ವರದಿಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತದೆ. ಈ ವರದಿಗಳು ಸಂಪೂರ್ಣವಾಗಿ ನಿರಾಧಾರ ಮತ್ತು ಸತ್ಯ ದೂರವಾಗಿದ್ದು, ಜನರನ್ನು ದಾರಿ ತಪ್ಪಿಸುವಂಥದ್ದಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಹಲವು ದಿನಗಳಿಂದಲೂ ಕೂಡ ಸಿಎಂ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದು, ಈ ಬಗ್ಗೆ ಇದೀಗ ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.