Karnataka Politics: ಸಿಎಂ ಬದಲಾವಣೆ ಇಲ್ಲ: ಇನ್ಮುಂದೆ ಕರ್ನಾಟಕದತ್ತ ಬಿಜೆಪಿ ಹೆಚ್ಚು ಗಮನ: ಅರುಣ್ ಸಿಂಗ್

*ಇನ್ಮುಂದೆ ಕರ್ನಾಟಕದತ್ತ ಬಿಜೆಪಿ ಹೆಚ್ಚು ಗಮನ
*ಸಂಪುಟ ವಿಸ್ತರಣೆ, ಪುನಾರಚನೆ ಸಿಎಂ ವಿವೇಚನೆ
 

No change of Chief Minister in Karnataka Basavaraj Bommai doing great Arun Singh mnj

ಬೆಂಗಳೂರು (ಮಾ. 12):  ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಂತೆ (Assembly Elections 2022) ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ (Karnataka Elections 2022) ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣವಾಗಿ ಗುಡಿಸಿ ಹೊರದಬ್ಬುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ (Arun Singh) ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನವದೆಹಲಿಯಿಂದ ದೂರವಾಣಿ ಮೂಲಕ ‘ಕನ್ನಡಪ್ರಭ’ಕ್ಕೆ (Kannada Prabha) ಕಿರು ಸಂದರ್ಶನ ನೀಡಿದ ಅರುಣ್‌ ಸಿಂಗ್‌, ಪ್ರಧಾನಿ ನರೇಂದ್ರ ಮೋದಿ ಅವರ ಮ್ಯಾಜಿಕ್‌ ಮುಂದಿನ ಕರ್ನಾಟಕ ಚುನಾವಣೆಯಲ್ಲಿ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಗಮನ ಕರ್ನಾಟಕದತ್ತ: ಪ್ರಧಾನಿ ಮೋದಿ ವರ್ಚಸ್ಸು, ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಸರ್ಕಾರಗಳ ಉತ್ತಮ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಯಾಚಿಸಿದ್ದೆವು. ಮತದಾರರು ನಮ್ಮ ಯಾಚನೆಗೆ ಮನ್ನಣೆ ನೀಡಿ ಭರ್ಜರಿ ಗೆಲುವು ನೀಡಿದ್ದಾರೆ. ಐದು ರಾಜ್ಯಗಳ ಚುನಾವಣೆ ಮುಗಿದಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕಾರಣದತ್ತ ಹೆಚ್ಚು ಗಮನಹರಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Politics: ಸಿದ್ದು ಹೇಳೋದೆಲ್ಲ ಉಲ್ಟಾ ಆಗುತ್ತೆ: ಸಿಎಂ ಬೊಮ್ಮಾಯಿ

ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ನೂರಕ್ಕೆ ನೂರರಷ್ಟು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಹಿಂದೆ ಎದುರಾದಂಥ ಅನಿವಾರ್ಯ ರಾಜಕೀಯ ಸನ್ನಿವೇಶಗಳು ಉದ್ಭವಿಸುವುದಿಲ್ಲ. ಪ್ರಧಾನಿ ಮೋದಿ ಅವರ ಹೆಸರು ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ಯಶಸ್ಸನ್ನೂ ಗಳಿಸುತ್ತೇವೆ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ. ಜನರು ಕಾಂಗ್ರೆಸ್‌ ಪಕ್ಷವನ್ನು ದೇಶಾದ್ಯಂತ ತಿರಸ್ಕರಿಸುತ್ತಿದ್ದಾರೆ. ಮುಂಬರುವ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಜನರು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿ ಬಿಜೆಪಿಗೆ ಪೂರ್ಣ ಬಹುಮತ ನೀಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಇದನ್ನೂ ಓದಿ: HD Kumaraswamy: ಪಂಚರಾಜ್ಯ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ

ಜೆಡಿಎಸ್‌ ಜತೆ ಸ್ನೇಹವಿಲ್ಲ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜೆಡಿಎಸ್‌ ಜತೆಗೆ ನಮ್ಮ ಪಕ್ಷದ ಯಾವುದೇ ಸ್ನೇಹ ಸಂಬಂಧ ಇಲ್ಲ. ನಾವು ಏಕಾಂಗಿಯೇ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿ ಏಕಾಂಗಿಯೇ ಸೋಲಿಸಲಿದೆ. ಅದಕ್ಕೆ ಬೇರೆ ಪಕ್ಷಗಳ ಸಾಥ್‌ ಅಥವಾ ನೆರವು ಬೇಕಾಗಿಲ್ಲ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಗುಡಿಸಿ ಹೊರದಬ್ಬುವುದು ನಿಶ್ಚಿತ ಎಂದು ಹೇಳಿದರು.

ಬೊಮ್ಮಾಯಿ ಬದಲಿಲ್ಲ: ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಂಗ್‌, ಕರ್ನಾಟಕದಲ್ಲಿ ನಾಯಕತ್ವ ಕುರಿತಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. 

ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಎಲ್ಲವೂ ವದಂತಿ. ಸಂಸತ್‌ ಅಧಿವೇಶನದ ಬಳಿಕ ನಾನು ಮುಂದಿನ ತಿಂಗಳು ಕರ್ನಾಟಕಕ್ಕೆ ಆಗಮಿಸುತ್ತೇನೆ. ಪಕ್ಷದ ಎಲ್ಲ ಮುಖಂಡೊಂದಿಗೆ ಮಾತುಕತೆ ನಡೆಸುತ್ತೇನೆ. ಮುಂದಿನದನ್ನ ಅಲ್ಲಿ ಬಂದ ಮೇಲೆಯೇ ಮಾತನಾಡುತ್ತೇನೆ ಎಂದರು.

ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದು ಅವರ ವಿವೇಚನೆಗೆ ಬಿಟ್ಟವಿಚಾರ. ಆದರೆ, ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಲಿದ್ದಾರೆ ಎಂದು ಅರುಣ್‌ ಸಿಂಗ್‌ ತಿಳಿಸಿದರು.

ವಿಶೇಷ ಸಂದರ್ಶನ: ವಿಜಯ್‌ ಮಲಗಿಹಾಳ, ಕನ್ನಡಪ್ರಭ

Latest Videos
Follow Us:
Download App:
  • android
  • ios