ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದ್ಯಕ್ಕೆ ಜೆಡಿಎಸ್ ಜೊತೆಗೆ ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಹುಣಸೂರು/ಬೆಂಗಳೂರು [ಡಿ.04]: ಉಪಚುನಾವಣೆ ಬಳಿಕ ಮತ್ತೆ ದೋಸ್ತಿ ಸರ್ಕಾರ ರಚನೆ ಸಾಧ್ಯತೆಗಳ ಕುರಿತು ಕಾಂಗ್ರೆಸ್‌ನ ಹಲವು ಮುಖಂಡರು ಹೇಳಿಕೆ ನೀಡುತ್ತಿದ್ದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದ್ಯಕ್ಕೆ ಜೆಡಿಎಸ್ ಜೊತೆಗೆ ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೈತ್ರಿ ಸರ್ಕಾರ ರಚನೆ ಕುರಿತು ನಾನು ಈಗಲೇ ಏನೂ ಹೇಳಲಾಗದು ಎಂದು ಹೇಳುವ ಮೂಲಕ ಸದ್ಯಕ್ಕೆ ಈ ವಿಚಾರವನ್ನು ತಟಸ್ಥವಾಗಿರಿಸಲು ಪ್ರಯತ್ನಿಸಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ರಾಮಲಿಂಗಾ ರೆಡ್ಡಿ, ಬಿ.ಕೆ.ಹರಿಪ್ರಸಾದ್, ವೀರಪ್ಪ ಮೊಯ್ಲಿ, ಸತೀಶ್ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರ ಬಿದ್ದಲ್ಲಿ ಮತ್ತೆ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ.
ಈ ವಿಚಾರವಾಗಿ ಮಂಗಳವಾರ ಹುಣಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸದ್ಯಕ್ಕೆ ಜೆಡಿಎಸ್ ಜೊತೆ ಮೈತ್ರಿಯ ಯಾವ ಮಾತುಕತೆಯೂ ಆಗಿಲ್ಲ. ಅಂತಹ ಸಂದರ್ಭ ಬಂದರೆ ಅದರ ಬಗ್ಗೆ ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡುತ್ತೆ ಎಂದಷ್ಟೇ ತಿಳಿಸಿದ್ದಾರೆ. ಮುಂದುವರಿದು ಬಿಜೆಪಿಯಷ್ಟೆಜೆಡಿಎಸ್ ಪಕ್ಷ ಸಹ ನಮಗೆ ರಾಜಕೀಯ ವೈರಿಯಾಗಿದೆ. ಈ ಎರಡೂ ಪಕ್ಷಗಳು ಈ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ. ನಾವು ಎಲ್ಲ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಲೇ ಹೇಳುವ ಹಾಗಿಲ್ಲ: ಇದೇ ವೇಳೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಮತ್ತೆ ಮೈತ್ರಿ ಸರ್ಕಾರ ರಚಿಸುವ ಕುರಿತು ಈಗಲೇ ಏನು ಹೇಳಲೂ ಆಗುವುದಿಲ್ಲ. ಮೈತ್ರಿ ಕುರಿತು ಉಪ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ ಈ ವಿಚಾರ ಪರಿಗಣನೆಗೆ ಬರುತ್ತದೆ. ಈಗ ಈ ಬಗ್ಗೆ ಏನೂ ಹೇಳಲಾಗದು ಎಂದು ತಿಳಿಸಿದರು. ಮತ್ತೆ ಮೈತ್ರಿ ಸರ್ಕಾರ ರಚನೆ ಕುರಿತು ಉಪ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ನ ಯಾವುದೇ ನಾಯಕರು ತಾವಾಗಿಯೇ ಪ್ರಸ್ತಾಪ ಮಾಡಿಲ್ಲ. ಈ ಕುರಿತು ಮಾಧ್ಯಮದವರು ಪ್ರಶ್ನೆಗಳನ್ನು ಕೇಳಿದಾಗ ನಮ್ಮ ಕೆಲವು ನಾಯಕರು ಮರು ಮೈತ್ರಿ ಸಾಧ್ಯಾಸಾಧ್ಯತೆಗಳ ಬಗ್ಗೆ ಉತ್ತರಿಸಿದ್ದಾರಷ್ಟೇ ಎಂದು ಸಮಜಾಯಿಷಿ ನೀಡಿದರು.
