ಬಿಜೆಪಿ - ಜೆಡಿಯು ಮೈತ್ರಿ ಅಂತ್ಯ; ರಾಜ್ಯಪಾಲರನ್ನು ಭೇಟಿ ಮಾಡಲಿರುವ ನಿತೀಶ್ - ತೇಜಸ್ವಿ ಯಾದವ್
Bihar Political Crisis Updates: ಬಿಜೆಪಿ ಜತೆಗಿನ ಮೈತ್ರಿಯಿಂದ ನಿತೀಶ್ ಕುಮಾರ್ ಹೊರಬರುವ ಕಾಲ ಸನ್ನಿಹಿತವಾಗಿದೆ. ಮತ್ತೊಮ್ಮೆ ಜೆಡಿಯು, ಆರ್‌ಜೆಡಿ, ಕಾಂಗ್ರೆಸ್, ಸಿಪಿಐಎಂಎಲ್ ಪಕ್ಷಗಳು ಸೇರಿ ಮಹಾಘಟ ಬಂಧನ ಸರ್ಕಾರ ರಚಿಸಲಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ.
ಪಾಟ್ನಾ: ಬಿಹಾರ ರಾಜಕಾರಣದಲ್ಲಿ ನಿತೀಶ್ ಕುಮಾರ್ ಮತ್ತೆ ಯು ಟರ್ನ್ ಹೊಡೆಯುವ ಸಾಧ್ಯತೆ ಹೆಚ್ಚಾಗಿದ್ದು ಬಿಜೆಪಿ ಜತೆಗಿನ ಮೈತ್ರಿ ಮುರಿಯಲು ಮುಂದಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಬಿರುಕುಗೊಂಡ ರೀತಿಯಲ್ಲೇ ಜೆಡಿಯು ಪಕ್ಷದ ಶಾಸಕರನ್ನೂ ಬಿಜೆಪಿ ಸೆಳೆಯಲು ಮುಂದಾಗಿದೆ ಎಂಬ ಊಹಾಪೋಹಗಳ ನಡುವೆ ಹೊಸ ರಾಜಕೀಯ ಬೆಳವಣಿಗೆಗೆ ಬಿಹಾರ ಸಾಕ್ಷಿಯಾಗಿದೆ. ಈಗಾಗಲೇ ನಿತೀಶ್ ಕುಮಾರ್ ಪಕ್ಷದ ಶಾಸಕಾಂಗ ಸಭೆ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಬ್ರಿ ದೇವಿ ಅವರ ನಿವಾಸದಲ್ಲಿ ಆರ್‌ಜೆಡಿ ಸದಸ್ಯರು ಸಭೆ ಸೇರಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಐಎಂಎಲ್ ಪಕ್ಷ ಈಗಾಗಲೇ ನಿತೀಶ್ ಕುಮಾರ್‌ಗೆ ಬೆಂಬಲ ನೀಡುವುದಾಗಿ ತಿಳಿಸಿವೆ. ಬಿಜೆಪಿ ಜತೆಗಿನ ಮೈತ್ರಿ ಮುಇದು ಆಚೆ ಬಂದರೆ ನಿತೀಶ್ ಕುಮಾರ್‌ಗೆ ಬೆಂಬಲ ಕೊಡುವುದಾಗಿ ನಾಯಕರು ತಿಳಿಸಿದ್ದಾರೆ. ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ. ಈ ಮೂಲಕ ಹಿಂದೆ ಮಹಾರಾಷ್ಟ್ರದಲ್ಲಿ ರಚನೆಯಾದಂತೆ ಬಿಹಾರದಲ್ಲೂ ಮಹಾಘಟ ಬಂಧನ ಸರ್ಕಾರ ರಚನೆಯಾಗಲಿದೆ.
243 ಶಾಸಕರಿರುವ ಬಿಹಾರದಲ್ಲಿ ಜೆಡಿಯು 45 ಸ್ಥಾನಗಳನ್ನು ಹೊಂದಿದರೆ ಬಿಜೆಪಿ 77 ಸ್ಥಾನಗಳನ್ನು ಹೊಂದಿದೆ. ಸರ್ಕಾರ ರಚನೆಗೆ 122 ಶಾಸಕರ ಬಲದ ಅಗತ್ಯವಿದೆ. ರಾಷ್ಟ್ರೀಯ ಜನತಾ ದಳ 79, ಕಾಂಗ್ರೆಸ್ 19 ಮತ್ತು ಸಿಪಿಐಎಂಎಲ್ 12 ಶಾಸಕರನ್ನು ಹೊಂದಿದೆ. ಆರ್‌ಜೆಡಿ ಬೆಂಬಲ ನೀಡಲು ಮುಂದೆ ಬಂದರೆ ಬಿಜೆಪಿ ಜತೆಗಿನ ಮೈತ್ರಿಯಿಂದ ನಿತೀಶ್ ಕುಮಾರ್ ಹೊರಬರಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಕೂಡ ಬಿಜೆಪಿ ಜತೆಗಿನ ಮೈತ್ರಿ ಮುರಿದು ನಿತೀಶ್ ಕುಮಾರ್ ಮಹಾಘಟ ಬಂಧನ ಮಾಡಿಕೊಂಡಿದ್ದರು. ಈ ಬಾರಿಯೂ ಅದೇ ರೀತಿ ಬಿಜೆಪಿ ವಿರುದ್ಧ ನಿತೀಶ್ ಹೋಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷದಲ್ಲಿ ನಾಲ್ಕು ಶಾಸಕರಿದ್ದಾರೆ. ಮಾಂಝಿ ಪಕ್ಷ ಕೂಡ ನಿತೀಶ್ ಕುಮಾರ್‌ಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಯು, ಆರ್‌ಜೆಡಿ, ಕಾಂಗ್ರೆಸ್, ಸಿಪಿಐಎಂಎಲ್, ಎಚ್‌ಎಎಮ್ ಒಟ್ಟುಗೂಡಿ 159 ಶಾಸಕರಾಗಲಿದ್ದಾರೆ. ಮಹಾಘಟ ಬಂಧನ ಸರ್ಕಾರ ಸುಲಭವಾಗಿ ಅಸ್ತಿತ್ವಕ್ಕೆ ಬರಲಿದೆ.
ನಿತೀಶ್ ಆತಂಕವೇನು?:
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಹೇಗೆ ಬಿಜೆಪಿ ಒಡೆದು ಹೋಳು ಮಾಡಿತೋ ಅದೇ ರೀತಿ ಬಿಹಾರದಲ್ಲಿ ಜೆಡಿಯುವನ್ನು ಹೋಳು ಮಾಡಬಹುದು ಎಂಬುದು ನಿತೀಶ್ ಆತಂಕ. ಅದಕ್ಕೆಂದೇ ಮೊನ್ನೆಯವರೆಗೂ ತಮ್ಮ ಪಕ್ಷದಲ್ಲೇ ಇದ್ದು ವಜಾಗೊಂಡ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಅವರನ್ನು ತಮ್ಮ ವಿರುದ್ಧ ಬಿಜೆಪಿ ಎತ್ತಿಕಟ್ಟಿದೆ ಎಂಬುದು ನಿತೀಶ್ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಇನ್ನೊಂದೆಡೆ ಕೇಂದ್ರ ಸಚಿವ ಅಮಿತ್ ಶಾ ಅವರು ದಿಲ್ಲಿಯಿಂದಲೇ ತಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ರಿಮೋಟ್ ಕಂಟ್ರೋಲ್ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ನಿತೀಶ್ ಅವರ ಇನ್ನೊಂದು ಅಸಮಾಧಾನ. ಇದೇ ಕಾರಣಕ್ಕೆ ನಿತೀಶ್ ಇತ್ತೀಚೆಗೆ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆದ ಅನೇಕ ಸಭೆಗಳಿಗೆ ಗೈರು ಹಾಜರಾಗಿದ್ದರು ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಜೆಡಿಯು ಒಡೆಯುವ ಆತಂಕ, ಬಿಜೆಪಿ ಮೈತ್ರಿಗೆ ಅಂತ್ಯಹಾಡಲು ಮುಂದಾದ ನಿತೀಶ್ ಕುಮಾರ್?
ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳ ಜಟಾಪಟಿ ಮುಂದುವರೆದಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದರು.‘ಅಗ್ನಿಪಥವನ್ನು ವಿರೋಧಿಸಿ ಆಂದೋಲನವಾಗಬೇಕೆ ಹೊರತು ಹಿಂಸೆ ಅಥವಾ ವಿಧ್ವಂಸಕ ಕೃತ್ಯಗಳು ನಡೆಸಬಾರದು. ಬಿಜೆಪಿ ಹಾಗೂ ಜೆಡಿಯು ನಡುವಿನ ಜಟಾಪಟಿಯ ಬೆಂಕಿಯಿಂದಾಗಿ ಬಿಹಾರದ ಜನರು ಉರಿಯುತ್ತಿದ್ದಾರೆ. ಬಿಹಾರ ಉರಿಯುತ್ತಿರುವಾಗಲೂ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಎರಡೂ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸುವಲ್ಲಿ ನಿರತರಾಗಿದ್ದಾರೆ’ ಎಂದು ಕಿಶೋರ್ ಜೂನ್ ತಿಂಗಳಲ್ಲಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಬಿಜೆಪಿಗೆ ಕೈಕೊಟ್ಟ ನಿತೀಶ್, ಆಗಸ್ಟ್ 11ಕ್ಕೆ ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಸರ್ಕಾರ?
ಅಗ್ನಿಪಥ ಪ್ರತಿಭಟನಾಕಾರರು ಬಿಹಾರದ ಬಿಜೆಪಿ ಮುಖ್ಯಸ್ಥನ ಮನೆ ಮೇಲೆ ದಾಳಿ ಮಾಡಿದ್ದರು. ಉಪ ಮುಖ್ಯಮಂತ್ರಿ ರೇಣು ದೇವಿಯವರ ಮನೆ ಸೇರಿದಂತೆ ಹಲವಾರು ಬಿಜೆಪಿ ಕಚೇರಿ ಮೇಲೆ ದಾಳಿ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನಿತೀಶ್ ಕುಮಾರ್ ಸರ್ಕಾರ ಹಿಂಸಾತ್ಮಕ ಪ್ರತಿಭಟನೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಜೆಡಿಯು ಸಚಿವ ರಾಜೀವ್ ರಂಜನ್, ‘ಬಿಜೆಪಿ ಮೊದಲು ಯುವಕರ ಸಮಸ್ಯೆ ಬಗ್ಗೆ ಅರಿಯುವ ಕಾಳಜಿ ತೋರಲಿ’ ಎಂದು ತಿರುಗೇಟು ನೀಡಿದ್ದರು.