ಕುಡಿಯುವ ನೀರಿನ ಸಮಸ್ಯೆ: ಸರ್ಕಾರದ ವಿರುದ್ಧ ನಿರ್ಮಲಾ ಸೀತಾರಾಮನ್ ಟೀಕೆ
ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಕಾಲರಾ ಕಾಯಿಲೆ ಹರಡುತ್ತಿರುವುದು ಕಳವಳಕಾರಿ ವಿಚಾರ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಏ.07): ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಕಾಲರಾ ಕಾಯಿಲೆ ಹರಡುತ್ತಿರುವುದು ಕಳವಳಕಾರಿ ವಿಚಾರ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಲ್ಲೇಶ್ವರದಲ್ಲಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರ ಅಗತ್ಯತೆಗಳನ್ನು ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನೀರಿನ ಸಮಸ್ಯೆ ಉಲ್ಬಣಗೊಂಡರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಅಲ್ಲದೇ, ಕಾಲರಾ ಸೇರಿದಂತೆ ಕೆಲವು ಕಾಯಿಲೆಗಳು ಹಬ್ಬುವ ಆತಂಕ ಇದೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿಕೊಂಡಿದೆ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿವಿಧ ನೀರಾವರಿ ಯೋಜನೆಗಳಿಗೆ 20 ಸಾವಿರ ಕೋಟಿ ರು. ಮೊತ್ತದ ಟೆಂಡರ್ ಪ್ರಕ್ರಿಯೆ ಆರಂಭಿಸಲಾಯಿತು. ನಂತರ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೇ ಕೇಂದ್ರದ ಜಲ ಜೀವನ್ ಮೀಷನ್ ಯೋಜನೆಗೆ ಉತ್ತೇಜನ ನೀಡಿಲ್ಲ. ನಿರ್ಮಾಣ ಹಂತದ ಕಾರ್ಮಿಕರ ಮಕ್ಕಳಿಗೆ ನೀಡುವ ಶಿಷ್ಯ ವೇತನವನ್ನು ಸಹ ನೀಡುತ್ತಿಲ್ಲ ಎಂದು ಟೀಕಾಪ್ರಹಾರ ನಡೆಸಿದರು. ಇನ್ನು, ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ದುರದೃಷ್ಟಕರವಾಗಿದ್ದು, ಪ್ರಕರಣ ಸಂಬಂಧ ಆರೋಗ್ಯ ಸಚಿವರು ಸಾಕ್ಷಿಯೊಬ್ಬರ ಮಾಹಿತಿ ಬಹಿರಂಗ ಪಡಿಸಿರುವುದು ಸಮಂಜಸವಲ್ಲ.
ಸಾಕ್ಷಿಗಳ ರಕ್ಷಣೆ ಮಾಡಬೇಕು ಎಂಬ ಕನಿಷ್ಠ ಜ್ಞಾನವೂ ಸಚಿವರಿಗೆ ಇಲ್ಲ. ಸಚಿವರಿಗೆ ಜವಾಬ್ದಾರಿ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಸಚಿವರ ಮಾಹಿತಿಯು ಅತ್ಯಂತ ಆತಂಕಕಾರಿ ವಿಚಾರವಾಗಿದ್ದು, ಸಾಕ್ಷಿಯ ಬದುಕಿಗೆ ಇದು ಸಮಸ್ಯೆ ತರಬಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧಲ್ಲಿ ಪಾಕ್ ಪರ ಘೋಷಣೆ ಪ್ರಕರಣ ನಡೆಯಬಾರದಾಗಿತ್ತು. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಅಲ್ಲದೇ, ಚಾಮರಾಜಪೇಟೆಯಲ್ಲಿ ಪಶುಸಂಗೋಪನೆ ಇಲಾಖೆ ಜಮೀನು ಅಲ್ಪಸಂಖ್ಯಾತ ಇಲಾಖೆಗೆ ಕೊಟ್ಟಿದ್ದೇಕೆ? ಇದು ಓಲೈಕೆ ರಾಜಕಾರಣ ಅಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಿಂದಾಗಿ ಬರ ಪರಿಹಾರ ತಡ: ನಿರ್ಮಲಾ ಸೀತಾರಾಮನ್
ಈ ನಡುವೆ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಕುರಿತು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಮಹಿಳೆಯರ ಕುರಿತ ಅವರ ದೃಷ್ಟಿಕೋನ ಏನು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಬೆಳಗಾವಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯದ ಕುರಿತು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅತ್ಯಾಚಾರ ಪ್ರಮಾಣ ಶೇ 72ರಷ್ಟು ಹೆಚ್ಚಾಗಿದೆ ಎಂದು ಟೀಕಿಸಿದರು.