Nikhil Kumaraswamy: ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆಗಳು ನಾಲ್ಕು ಗೋಡೆಗಳ ನಡುವೆ ನಡೆಯಬೇಕು, ಹಾದಿಬೀದಿಯಲ್ಲಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕೆಲವರು ಪ್ರಚಾರಕ್ಕಾಗಿ ಮೈತ್ರಿ ಮುರಿಯುವ ಹೇಳಿಕೆ ನೀಡುತ್ತಿದ್ದು, ಎರಡೂ ಪಕ್ಷಗಳ ನಾಯಕರು ಮೈತ್ರಿ ಧರ್ಮವನ್ನು ಗೌರವದಿಂದ ಪಾಲಿಸಬೇಕು ಎಂದರು.

 ಬೆಂಗಳೂರು (ಫೆ.19) ಬಿಜೆಪಿ-ಜೆಡಿಎಸ್‌ ಮೈತ್ರಿ ವಿಚಾರ ಚರ್ಚೆ ನಾಲ್ಕು ಗೋಡೆಗಳ ನಡುವೆ ಇರಬೇಕೇ ಹೊರತು ಹಾದಿ-ಬೀದಿಯಲ್ಲಿ ಚರ್ಚೆ ಆಗಬಾರದು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರಗಳು ನಾಲ್ಕು ಗೋಡೆಗಳ ಒಳಗೆ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ಚರ್ಚಿಸಿ ಇತ್ಯರ್ಥವಾಗುವ ವಿಚಾರವಲ್ಲ. ಲೋಕಸಭಾ ಚುನಾವಣೆಯಿಂದಲೂ ಎರಡೂ ಪಕ್ಷಗಳ ಮೈತ್ರಿ ಇದೆ. ಅಂದಿನಿಂದಲೂ ನಮ್ಮನ್ನು ಗೌರವದಿಂದ ನೋಡಿಕೊಂಡಿದ್ದಾರೆ ಎಂದರು.

ಕೆಲವರು ಪ್ರಚಾರಕ್ಕಾಗಿ ಮಾತು:

ಕೆಲ ಬಿಜೆಪಿಗರಿಂದ ಮೈತ್ರಿ ಮುರಿಯುವ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾವು ಮೈತ್ರಿ ಧರ್ಮವನ್ನು ಅತ್ಯಂತ ಗೌರವದಿಂದ ಪಾಲಿಸುತ್ತಿದ್ದೇವೆ. ನಮ್ಮ ಮೈತ್ರಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮಾರ್ಗದರ್ಶನ ಇದೆ. ಬಿಜೆಪಿ ಆಥವಾ ಜೆಡಿಎಸ್‌ನ ಯಾರೇ ಆಗಿರಲಿ ಹೊರಗೆ ಮಾತನಾಡಬಾರದು. ಎರಡು ಜಿಲ್ಲೆಗಳಲ್ಲಿ ಮೈತ್ರಿ ವಿಚಾರದ ಸಮಸ್ಯೆ ಉದ್ಭವವಾಗಿದೆ. ಅಲ್ಲಿನ ಮೂರ್ನಾಲ್ಕು ಜನ ಪ್ರಚಾರಕ್ಕೆ ಮಾತನಾಡಿದ್ದಾರೆ ಎಂದರು.

ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಎನ್ನುವುದಕ್ಕಿಂತ ಎನ್‌ಡಿಎ 140ರಿಂದ 150 ಸ್ಥಾನ ಗೆಲ್ಲಲಿದೆ. ನಾವು ಮೈತ್ರಿ ಧರ್ಮ ಪಾಲಿಸುತ್ತೇವೆ. ಲೋಕಸಭೆ ಗೆದ್ದಂತೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ದಾಖಲೆ ಸೃಷ್ಟಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾವೆಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿಖಿಲ್‌, ನಾವೆಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಕೆ.ಆರ್.ಪೇಟೆಯಲ್ಲಿ ನೀವು ಈಗಾಗಲೇ ಶಾಸಕರಾಗಿದ್ದೀರಿ. ಮತ್ತೆ ಆರಿಸಿ ಬರುವುದಕ್ಕೆ ಜನರ ಪ್ರೀತಿ ವಿಶ್ವಾಸ ಗಳಿಸಿ ಮಂಜಣ್ಣ ಅಂತ ಹೇಳಿದ್ದೆ. ಆದರೆ, ನನ್ನ ಹೇಳಿಕೆ ತಿರುಚಿದ್ದಾರೆ. ಅಭ್ಯರ್ಥಿಗಳ ಘೋಷಿಸಲು ನಾನು ಯಾರು? ನಾನು ಜನರ ವಿಶ್ವಾಸ ಉಳಿಸಿಕೊಂಡು ಹೋಗಿ ಅಂತ ಹೇಳುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.

ಜಿಪಂ ಮತ್ತು ತಾಪಂ ಚುನಾವಣೆಗೆ ಮೈತ್ರಿ ಇರುತ್ತಾ ಎಂಬ ಪ್ರಶ್ನೆಗೆ, ಈ ವಿಚಾರ ಇನ್ನೂ ಎರಡೂ ಪಕ್ಷಗಳ ಚೌಕಟ್ಟಿನಲ್ಲಿ ಚರ್ಚೆಗೆ ಬಂದಿಲ್ಲ. ಮೊದಲು ಈ ಚುನಾವಣೆಗಳು ನಡೆಯುತ್ತಾ ಇಲ್ವಾ ಅನ್ನೋದೇ ಗೊತ್ತಿಲ್ಲ. ಕಾರ್ಯಕರ್ತರ ಹಿತದೃಷ್ಟಿ ಮುಂದಿಟ್ಟುಕೊಂಡು ಮೈತ್ರಿಯಾಗಿ ಅಥವಾ ಪಕ್ಷವಾಗಿ ಹೋಗಬೇಕಾ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು.

YouTube video player