Asianet Suvarna News Asianet Suvarna News

ಇಂದು ಬಿಜೆಪಿಗೆ ನೆಹರು ಓಲೇಕಾರ ರಾಜೀನಾಮೆ: ಜೆಡಿಎಸ್‌ಗೆ ಸೇರ್ಪಡೆ

ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದೆ ಬಂಡಾಯವೆದ್ದಿರುವ ಶಾಸಕ ನೆಹರು ಓಲೇಕಾರ ಭಾನುವಾರ ಬಿಜೆಪಿಗೆ ರಾಜೀನಾಮೆ ನೀಡಲಿದ್ದು, ಸಂಜೆ ಜೆಡಿಎಸ್‌ ಸೇರುವುದಾಗಿ ತಿಳಿಸಿದ್ದಾರೆ. 

Nehru Olekar resigns from BJP on April 16th Joins JDS gvd
Author
First Published Apr 16, 2023, 3:40 AM IST

ಹಾವೇರಿ (ಏ.16): ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದೆ ಬಂಡಾಯವೆದ್ದಿರುವ ಶಾಸಕ ನೆಹರು ಓಲೇಕಾರ ಭಾನುವಾರ ಬಿಜೆಪಿಗೆ ರಾಜೀನಾಮೆ ನೀಡಲಿದ್ದು, ಸಂಜೆ ಜೆಡಿಎಸ್‌ ಸೇರುವುದಾಗಿ ತಿಳಿಸಿದ್ದಾರೆ. ಭಾನುವಾರ ಶಿರಸಿಗೆ ತೆರಳಿ ಸ್ವೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡುತ್ತೇನೆ. ಅಲ್ಲಿಂದ ಬೆಂಗಳೂರಿಗೆ ತೆರಳಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸುವೆ. ಸಂಜೆ ಜೆಡಿಎಸ್‌ ಕಚೇರಿಗೆ ತೆರಳಿ ಪಕ್ಷ ಸೇರುತ್ತೇನೆ ಎಂದು ಹೇಳಿದ್ದಾರೆ.  ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ. 

ನನ್ನ ಟಿಕೆಟ್‌ ತಪ್ಪಿಸಲು ಅನೇಕ ಜನರ ಮುಂದೆ ನನ್ನ ಬಗ್ಗೆಯೂ ಮಾತನಾಡಿದ್ದಾರೆ. ಅದೆಲ್ಲವನ್ನೂ ತಿಳಿದುಕೊಂಡು ಮಾತನಾಡಿದ್ದೇನೆ. ಮುಖ್ಯಮಂತ್ರಿ ಮಾಡಿರುವ 1500 ಕೋಟಿ ಹಗರಣದ ದಾಖಲೆ ಬಿಡುಗಡೆ ಮಾಡುವೆ. ಎಷ್ಟುವೆಚ್ಚ ಮಾಡಿದ್ದಾರೆ ಎಂಬುವುದನ್ನು ಮಾಧ್ಯಮದವರನ್ನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ

ಓಲೇಕಾರಗೆ ತಪ್ಪಿದ ಟಿಕೆಟ್‌, ಭುಗಿಲೆದ್ದ ಆಕ್ರೋಶ: ಹಾವೇರಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಹಾಲಿ ಶಾಸಕ ನೆಹರು ಓಲೇಕಾರ ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಖ್ಯಮಂತ್ರಿ ತುಂತುರು ನೀರಾವರಿ ಯೋಜನೆಯಲ್ಲಿ . 1500 ಕೋಟಿ ಕೊಳ್ಳಿ ಹೊಡೆದಿದ್ದು ಶೀಘ್ರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ಅದರೊಂದಿಗೆ ಸಿಎಂ 40% ಕಮಿಷನ್‌ ಏಜೆಂಟ್‌, ಅವನಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿನ ಸಿದ್ದಪ್ಪ ವೃತ್ತದಲ್ಲೂ ಓಲೇಕಾರ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ತುಂತುರು ನೀರಾವರಿ ಯೋಜನೆಯಲ್ಲಿ . 1,500 ಕೋಟಿ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು. ರೈತರಿಗೆ ಒಂದು ಪೈಪ್‌ ಕೂಡ ನೀಡಿಲ್ಲ. ತುಂತುರು ನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಇತರ ಜಿಲ್ಲೆಯ ರೈತರಿಗೆ ಯೋಜನೆಯಿಂದ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಕಿಡಿಕಾರಿದರು.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಗೆ ಮತ ನೀಡಿ: ಡಾ.ಜಿ.ಪರಮೇಶ್ವರ್‌

ನನ್ನ ಬೆಳವಣಿಗೆ ಸಹಿಸದೇ ನನಗೆ ಟಿಕೆಟ್‌ ತಪ್ಪಿಸಿದ್ದಾರೆ. ಬೊಮ್ಮಾಯಿ ಅವರಿಗೆ ಧಮ್‌, ತಾಕತ್ತು ಎಷ್ಟಿದೆ ಎಂಬುದನ್ನು ತೋರಿಸಲಿ. ನಾವು ಕೂಡ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಸವಾಲು ಹಾಕಿದರು. ಸಿಎಂ ಬೊಮ್ಮಾಯಿ 40% ಕಮಿಷನ್‌ ಏಜೆಂಟ್‌. ಬೊಮ್ಮಾಯಿಂದ ಬಿಜೆಪಿಗೆ ದೊಡ್ಡ ಹೊಡೆತ. ತನಗೆ ಅನುಕೂಲ ಆಗುವವರಿಗೆ ಟಿಕೆಟ್‌ ಕೊಡಿಸಿದ್ದಾನೆ. ಬೊಮ್ಮಾಯಿ ಬಿಜೆಪಿ ಹಾಳು ಮಾಡುತ್ತಾನೆ. ಉದ್ಧಾರ ಮಾಡಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರವೇ ಬಿಜೆಪಿ ಸರ್ಕಾರದ ಸಾಧನೆ. ಹೈಕಮಾಂಡ್‌ ಕೂಡಲೇ ಆಲೋಚನೆ ಮಾಡಬೇಕು. ಇಂಥ ಭ್ರಷ್ಟರನ್ನು ಕಡೆಗಣಿಸಬೇಕು. ಭ್ರಷ್ಟಾಚಾರ ಮಾಡಿದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios