ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸಾವಿನ ಬೆನ್ನಲ್ಲೇ ಎನ್‌ಸಿಪಿ ಪಕ್ಷದ ಎರಡೂ ಬಣಗಳು ಒಂದಾಗುವ ಸುಳಿವು ಸಿಕ್ಕಿದೆ. ಫೆಬ್ರವರಿ ಎರಡನೇ ವಾರ ಈ ಕುರಿತ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಬಾರಾಮತಿ : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸಾವಿನ ಬೆನ್ನಲ್ಲೇ ಎನ್‌ಸಿಪಿ ಪಕ್ಷದ ಎರಡೂ ಬಣಗಳು ಒಂದಾಗುವ ಸುಳಿವು ಸಿಕ್ಕಿದೆ. ಫೆಬ್ರವರಿ ಎರಡನೇ ವಾರ ಈ ಕುರಿತ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ, ಎನ್‌ಸಿಪಿಯ ಅಜಿತ್‌ ಬಣ ಮತ್ತು ಶರದ್‌ ಪವಾರ್‌ ಬಣದ ಹಿರಿಯ ನಾಯಕರು ಡಿಸೆಂಬರ್‌ ಮತ್ತು ಜನವರಿ ಆರಂಭದಲ್ಲಿ ಶರದ್‌ ಪವಾರ್‌ ಜತೆಗೆ ಮಾತುಕತೆ ನಡೆಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಗಳ ಬಳಿಕ ವಿಲೀನ ಕುರಿತು ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇತ್ತು. ಅಷ್ಟರಲ್ಲೇ ಅಜಿತ್‌ ತೀರಿಕೊಂಡಿದ್ದಾರೆ. ಇದೀಗ ಮುಂದಿನ ವಾರ ಈ ಕುರಿತು ಅಂತಿಮ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆ ಇದೆ.

ವಿಮಾನ ದುರಂತಕ್ಕೂ 5 ದಿನ ಮೊದಲು ಎನ್‌ಸಿಪಿ ವಿಲೀನ ಕುರಿತು ಅಜಿತ್‌ ಪವಾರ್‌ ಪ್ರಸ್ತಾಪಿಸಿದ್ದರು. ಕೆಲವೇ ದಿನಗಳಲ್ಲಿ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಮ್ಮ ಬಳಿ ಹೇಳಿಕೊಂಡಿದ್ದಾಗಿ 1980ರಿಂದಲೂ ಅಜಿತ್‌ ಪವಾರ್‌ ಜತೆಗಿರುವ ಎನ್‌ಸಿಪಿ ಮುಖಂಡ ಕಿರಣ್‌ ಗುಜ್ಜಾರ್‌ ತಿಳಿಸಿದ್ದಾರೆ.

ನೇತೃತ್ವ ಯಾರಿಗೆ?:

ಎನ್‌ಸಿಪಿ ಎರಡೂ ಬಣಗಳು ವಿಲೀನವಾದರೆ ಪಕ್ಷವನ್ನು ಮುನ್ನಡೆಸುವವರ ಪಟ್ಟಿಯಲ್ಲಿ ಶರದ್‌ ಪವಾರ್‌ ಅವರಲ್ಲದೆ, ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಪವಾರ್‌, ಸುಪ್ರಿಯಾ ಸುಳೆ ಮತ್ತು ಪ್ರಫುಲ್‌ ಪಟೇಲ್‌ ಹೆಸರು ಮುನ್ನಲೆಗೆ ಬಂದಿದೆ. ಈ ಪೈಕಿ ಶನಿವಾರ ಡಿಸಿಎಂ ಆಗಿ ಅಧಿಕಾರ ಸ್ವೀಕರಿಲಿದ್ದಾರೆ ಎನ್ನಲಾದ ಅಜಿತ್‌ ಪತ್ನಿ ಸುನೇತ್ರಾ ಹೆಸರು ಮುಂಚೂಣಿಯಲ್ಲಿದೆ. ತಪ್ಪಿದಲ್ಲಿ ಪ್ರಫುಲ್‌ ಪಟೇಲ್‌ ಅಥವಾ ಸುನೀಲ್‌ ತತ್ಕರೆ ಅವರಿಗೆ ಆ ಹೊಣೆ ನೀಡುವ ಒತ್ತಾಯ ಇದೆ.

ಎನ್‌ಸಿಪಿ ಹೊರಬಿದ್ದರೂ ಫಡ್ನವೀಸ್ ಸರ್ಕಾರ ಅಬಾಧಿತ

ಮುಂಬೈ: ಒಂದು ವೇಳೆ ಎನ್‌ಸಿಪಿಯ ಅಜಿತ್‌ ಹಾಗೂ ಶರದ್ ಪವಾರ್‌ ಬಣಗಳು ಒಂದಾಗಿ ಮಹಾಯುತಿ ಸರ್ಕಾರದಿಂದ ಹೊರನಡೆದರೆ, ಸರ್ಕಾರವೇನೂ ಬೀಳುವುದಿಲ್ಲ ಎಂದು ಅಂಕಿ-ಅಂಶಗಳು ಹೇಳುತ್ತವೆ,288 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿಯ 131 ಹಾಗೂ ಶಿವಸೇನೆಯ (ಶಿಂಧೆ ಬಣ) 57 ಶಾಸಕರಿದ್ದಾರೆ. ಎನ್‌ಸಿಪಿ (ಅಜಿತ್‌ ಬಣ) ಶಾಸಕರ ಸಂಖ್ಯೆ 41. ಬಹುಮತ ಸಾಬೀತಿಗೆ 145 ಮತ ಬೇಕು. ಎನ್‌ಸಿಪಿ ಹೊರಹೋಗಿ ಸೇನೆ ಹಾಗೂ ಬಿಜೆಪಿ ಶಾಸಕರಷ್ಟೇ ಸರ್ಕಾರದಲ್ಲಿ ಉಳಿದರೂ 188 ಸಂಖ್ಯಾಬಲ ಆಗುತ್ತದೆ. ಹೀಗಾಗಿ ಫಡ್ನವೀಸ್‌ ಸರ್ಕಾರ ಅಬಾಧಿತ.