ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ತ್ರಿಕೋನ ಸ್ಪರ್ಧಾ ಅಖಾಡಕ್ಕೆ ಎಂಟ್ರಿ, ಗಡಿಯಾರ ಚಿಹ್ನೆ ನೀಡುವಂತೆ ಮನವಿ, ಆಯೋಗದ ಸಮ್ಮತಿ, ಗಡಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಪಕ್ಷ ಬೆಂಬಲ, ಮತ್ತೆ ರಾಷ್ಟ್ರೀಯ ಪಕ್ಷ ಸ್ಥಾನಮಾನ ಗಿಟ್ಟಿಸಲು ಎನ್‌ಸಿಪಿ ಪ್ಲ್ಯಾನ್‌. 

ನವದೆಹಲಿ(ಏ.15): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ 40 ರಿಂದ 45 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನ್ಯಾಷಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ನಾಯಕ ಶರದ್‌ ಪವಾರ್‌ ಯೋಜಿಸಿದ್ದಾರೆ. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಪವಾರ್‌ ಇಂದು(ಶನಿವಾರ) ಪಕ್ಷದ ನಾಯಕರ ಸಭೆ ಕರೆದಿದ್ದಾರೆ.

ಈಗಾಗಲೇ ಚುನಾವಣೆಯಲ್ಲಿ ಪಕ್ಷಕ್ಕೆ ‘ಗಡಿಯಾರ’ ಚಿಹ್ನೆಯನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಎನ್‌ಸಿಪಿ ಪತ್ರ ಬರೆದಿದ್ದು, ಆಯೋಗವು ಇದಕ್ಕೆ ಸಮ್ಮತಿಸಿದೆ. ಪಕ್ಷದ ಈ ಯತ್ನದ ಹಿಂದಿನ ಉದ್ದೇಶವು ಇತ್ತೀಚೆಗೆ ತಾನು ಕಳೆದುಕೊಂಡ ರಾಷ್ಟ್ರೀಯ ಪಕ್ಷ ಸ್ಥಾನಮಾನ ಮರಳಿ ಪಡೆಯುವುದಾಗಿದೆ.

ರಾಷ್ಟ್ರೀಯ ಪಕ್ಷ ಸ್ಥಾನಮಾನ ಕಳೆದುಕೊಂಡ ದೇಶದ ಮೂರು ಪ್ರಮುಖ ರಾಜಕೀಯ ಪಕ್ಷಗಳು!

ಒಟ್ಟು 224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕನಿಷ್ಠ 40 ರಿಂದ 45 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಸ್ಫರ್ಧೆಗಿಳಿಸುವ ಹಾಗೂ ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಂಬಲ ಸೂಚಿಸುವ ಬಗ್ಗೆ ಪಕ್ಷ ತೀರ್ಮಾನಿಸಿದೆ ಎಂದು ಎನ್‌ಸಿಪಿ ನಾಯಕರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪವಾರ್‌ ‘ಕರ್ನಾಟಕ ಚುನಾವಣೆ ಕುರಿತಂತೆ ನಮ್ಮ ಯೋಜನೆಗಳನ್ನು ಅಂತಿಮಗೊಳಿಸಲು ಮುಂಬೈನಲ್ಲಿ ಶನಿವಾರ ಸಭೆ ನಡೆಸಲಿದ್ದೇವೆ’ ಎಂದಿದ್ದಾರೆ.

ಕೇಂದ್ರದಲ್ಲಿ ಎನ್‌ಸಿಪಿ ಯುಪಿಎ ಅಂಗಪಕ್ಷವಾಗಿದ್ದರೂ ಕಾಂಗ್ರೆಸ್‌ ವಿರುದ್ಧ ಸಣೆಸಲು ಉದ್ದೇಶಿಸಿರುವುದು ಗಮನಾರ್ಹ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.