ಬಿಜೆಪಿಯ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಕಾಂಗ್ರೆಸ್‌ ಸೇರ್ಪಡೆಗೆ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಕುಮಾರಸ್ವಾಮಿ ಅವರ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಮುಂದೂಡಿಕೆ ಕಂಡಿದೆ. 

ಬೆಂಗಳೂರು (ಅ.13): ಬಿಜೆಪಿಯ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಕಾಂಗ್ರೆಸ್‌ ಸೇರ್ಪಡೆಗೆ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಕುಮಾರಸ್ವಾಮಿ ಅವರ ಕಾಂಗ್ರೆಸ್‌ ಪಕ್ಷ ಸೇರ್ಪಡೆ ಮುಂದೂಡಿಕೆ ಕಂಡಿದೆ. ಮೂಲಗಳ ಪ್ರಕಾರ ಎ.ಕೃಷ್ಣಪ್ಪ ಅವರ ಪುತ್ರಿ ಹಾಗೂ ಬಿಜೆಪಿ ಮಾಜಿ ಶಾಸಕ ಪೂರ್ಣಿಮಾ ಶ್ರೀನಿವಾಸ್‌ ಅವರು ಅ.20 ರಂದು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದು, ಅದೇ ದಿನ ಎಂ.ಪಿ.ಕುಮಾರಸ್ವಾಮಿ ಅವರೂ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಬಿಜೆಪಿ ಮಾಜಿ ಶಾಸಕರಾದ ರಾಮಪ್ಪ ಲಮಾಣಿ ಹಾಗೂ ಎಂ.ಪಿ. ಕುಮಾರಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿದ್ದರು. ಇಬ್ಬರೂ ನಾಯಕರು ಸಮ್ಮತಿ ಸೂಚಿಸಿದ್ದರಿಂದ ಗುರುವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಇಬ್ಬರೂ ಮಾಜಿ ಶಾಸಕರ ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿತ್ತು. 

ಲೋಕಸಭೆ ಚುನಾವಣೆ ಜಯಕ್ಕೆ 'ಗ್ಯಾರಂಟಿ' ಅಸ್ತ್ರ ಬಳಸಿ: ಸಚಿವ ಕೃಷ್ಣ ಬೈರೇಗೌಡ

ಆದರೆ ನಯನಾ ಮೋಟಮ್ಮ ತೀವ್ರ ಆಕ್ಷೇಪದಿಂದಾಗಿ ಎಂ.ಪಿ. ಕುಮಾರಸ್ವಾಮಿ ಪಕ್ಷ ಸೇರ್ಪಡೆ ಮುಂದೂಡಲ್ಪಟ್ಟಿದೆ. ಈ ಸೇರ್ಪಡೆ ಬಗ್ಗೆ ನಯನಾ ಅವರೊಂದಿಗೆ ಚರ್ಚೆ ನಡೆಸಿ ಒಮ್ಮತ ಮೂಡಿಸಿ ಅನಂತರ ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಪಕ್ಷದ ನಾಯಕತ್ವ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. 2018ರಲ್ಲಿ ಬಿಜೆಪಿ ಶಾಸಕರಾಗಿ ಗೆದ್ದಿದ್ದ ಎಂ.ಪಿ. ಕುಮಾರಸ್ವಾಮಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಹೀಗಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದರು. ಬಳಿಕ ಜಗದೀಶ್‌ ಶೆಟ್ಟರ್‌ ಮೂಲಕ ಕಾಂಗ್ರೆಸ್‌ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ.