ಕಾಂಗ್ರೆಸ್‌ ತೊರೆದು ಆಪ್‌ಗೆ ಸಿಧು ಶೀಘ್ರ?| ಸಿಧು ಕರೆತರಲು ಪ್ರಶಾಂತ್‌ ಕಿಶೋರ್‌ ಯತ್ನ| ‘ನನ್ನನ್ನು ಸಿಎಂ ಅಭ್ಯರ್ಥಿ ಮಾಡುತ್ತೀರಾ’ ಎಂದು ಕೇಳಿರುವ ಸಿಧು

ನವದೆಹಲಿ(ಜೂ.04): ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ಪಂಜಾಬ್‌ನಲ್ಲಿ ಮಂತ್ರಿಯಾಗಿದ್ದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು, ಮತ್ತೆ ಪಕ್ಷಾಂತರ ಮಾಡುವ ಸಾಧ್ಯತೆ ಇದೆ. ಅವರು ಆಮ್‌ ಆದ್ಮಿ ಪಕ್ಷ (ಆಪ್‌) ಸೇರುವ ಸಾಧ್ಯತೆ ಇದೆ.

2022ರಲ್ಲಿ ಪಂಜಾಬ್‌ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಅವರು ಆಪ್‌ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಆಪ್‌ ಪರ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್‌ ಕಿಶೋರ್‌ ಅವರು ತೆರೆಮರೆಯಲ್ಲಿ ಸಿಧು ಅವರನ್ನು ಆಪ್‌ಗೆ ಕರೆತರುವ ಯತ್ನ ನಡೆಸುತ್ತಿದ್ದಾರೆ. ಮಂಗಳವಾರ ಇಬ್ಬರೂ ವಾಟ್ಸಪ್‌ ಕಾಲ್‌ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ, ‘ಆಪ್‌ಗೆ ಬಂದರೆ ನನ್ನ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸಿ. ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡುತ್ತೀರಾ? ನಾನು ಹೇಳಿದ ಎಷ್ಟುಜನರಿಗೆ ಟಿಕೆಟ್‌ ಕೊಡುತ್ತೀರಿ’ ಎಂಬ ಪ್ರಶ್ನೆಗಳನ್ನು ಸಿಧು ಎಸೆದರು ಎಂದು ಮೂಲಗಳು ತಿಳಿಸಿವೆ.

ಆದರೆ ಮಾತುಕತೆ ಬಗ್ಗೆ ತಮಗೆ ಗೊತ್ತಿಲ್ಲ. ಸಿಧು ಬಂದರೆ ಸ್ವಾಗತ ಎಂದು ಆಪ್‌ನ ಪಂಜಾಬ್‌ ಪ್ರಭಾರಿ ಜರ್ನೈಲ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಜತೆ ಸಿಧು ಉತ್ತಮ ಬಾಂಧವ್ಯ ಹೊಂದಿಲ್ಲ. ಹೀಗಾಗಿ ಕಳೆದ ವರ್ಷವೇ ಸಿಧು ಮಂತ್ರಿ ಸ್ಥಾನ ಬಿಟ್ಟಿದ್ದರು. ಈಗ ಪಕ್ಷಾಂತರ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

News In 100 Seconds: ಈ ಕ್ಷಣದ ಪ್ರಮುಖ ಸುದ್ದಿಗಳು

"