ರಾಷ್ಟ್ರೀಯತೆಯೇ ಬಿಜೆಪಿ ಮೂಲ ಸಿದ್ಧಾಂತ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅ​ಧಿಕಾರದ ಗದ್ದುಗೆ ಹಿಡಿಯಲಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಧಾನವಾಗಿರಿಸಿ ನಮ್ಮ ಭವ್ಯ ಭಾರತವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ: ಸ್ಮೃತಿ ಇರಾನಿ

Nationalism is the Basic Ideology of BJP Says Union Minister Smriti Irani grg

ತೇರದಾಳ(ಮೇ.08): ರಾಷ್ಟ್ರೀಯತೆಯೇ ಬಿಜೆಪಿ ಮೂಲ ಸಿದ್ಧಾಂತವಾಗಿದ್ದು, ದೇಶ ಉಳಿದರೆ ನಾವು ಉಳಿಯಲು ಸಾಧ್ಯ. ದೇಶದ ಹಿತಾಸಕ್ತಿ ಕಡೆಗಣಿಸಿ 65 ವರ್ಷಗಳ ಆಡಳಿತ ನೀಡಿದ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ನಿರತವಾಗಿ ಅಭಿವೃದ್ಧಿ ಮರೆಯಿತು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ತೇರದಾಳ ಪಟ್ಟಣದಲ್ಲಿ ಭಾನುವಾರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಆಯೋಜಿಸಿದ್ದ ಬೃಹತ್‌ ರೋಡ್‌ ಶೋದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅ​ಧಿಕಾರದ ಗದ್ದುಗೆ ಹಿಡಿಯಲಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರಧಾನವಾಗಿರಿಸಿ ನಮ್ಮ ಭವ್ಯ ಭಾರತವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಬಿಜೆಪಿ ಕೇವಲ ದೇಶದ ಪ್ರತಿ ಮನೆಯಲ್ಲಿ ವಾಸವಾಗಿರದೇ 150 ಕೋಟಿ ಜನರ ಮನಸಿನಲ್ಲಿದೆ. ಬಿಜೆಪಿಯನ್ನು ಸೋಲಿಸುವುದು ಅಸಂಭವ ಎಂದು ಹೇಳಿದರು.

ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಮುರುಗೇಶ ನಿರಾಣಿ

ಬಿಜೆಪಿ ಸೋಲಿಸುವುದು ಹಗಲು ಕನಸು:

ಯಾವ ಸರ್ಕಾರಗಳು ಮಾಡದ ಅಭಿವೃದ್ಧಿ ಕೇವಲ 8 ವರ್ಷಗಳ ಮೋದಿ ಆಡಳಿತದಲ್ಲಾಗಿದೆ. ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್‌ ಆಲದ ಮರದಂತಿರುವ ಬಿಜೆಪಿಯನ್ನು ಸೋಲಿಸುವ ಹಗಲುಗನಸು ಕಾಣುತ್ತಿರುವ ಪ್ರತಿಪಕ್ಷಗಳಿಗೆ ಚಾಟಿ ಬೀಸಿದ ಅವರು, ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳುವಂತೆ ನಿಗಾವಹಿಸಿ ಪ್ರತಿ ಮನೆ ಮನೆಗೆ ಬಿಜೆಪಿ ಸಾಧನೆಗಳನ್ನು ತಿಳಿಸಿ ಮತದಾರರನ್ನು ಮನವೊಲಿಸಿ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಅವರಿಗೆ ಮತ ನೀಡಲು ವಿನಂತಿಸಬೇಕು ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಮತಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಮಾತ್ರ ಇರದೇ ಸ್ಮೃತಿ ಇರಾನಿ ಆಗಮನದಿಂದ ಸುನಾಮಿಯಾಗಿ ಅಬ್ಬರಿಸಲಿದ್ದು, ಈಗಾಗಲೇ ನಮ್ಮ ತೇರದಾಳ ಮತಕ್ಷೇತ್ರಕ್ಕೆ ಸಂಬಂಧಿ​ಸಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ಕೈಗೊಂಡ ಸಮೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿಗೆ 1.15 ಲಕ್ಷಕ್ಕಿಂತ ಹೆಚ್ಚು ಮತಗಳು ಲಭಿಸುವ ನಿರೀಕ್ಷೆಯಿದ್ದು, ನನ್ನ ಗೆಲುವು ಕಟ್ಟಿಟ್ಟಬುತ್ತಿ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.

ಸೈನಿಕರಿಗೆ ನುಡಿ ನಮನ:

ಈ ಸಂದರ್ಭದಲ್ಲಿ ದೇಶದ ಗಡಿ ಕಾಯುವ ಸೈನಿಕರ ಸೇವೆಯನ್ನು ಸ್ಮರಿಸಿದ ಸ್ಮೃತಿ ಇರಾನಿ ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಏ ವಂದನ ಕೀ ಭೂಮಿ ಹೈ ಏ ಅಭಿನಂದನ ಕೀ ಭೂಮಿ ಹೈ ಹರ ನದಿ ಹಮಾರೇ ಲಿಯೇ ಗಂಗಾ ಹೈ ಕಂಕಡ ಕಂಕಡ ಹಮಾರೇ ಲಿಯೇ ಶಂಕರ ಹೈ ಚರಣವನ್ನು ವಾಚಿಸಿ ಸೈನಿಕರಿಗೆ ಗೌರವನುಡಿ ನಮನವನ್ನು ಸಲ್ಲಿಸಿದರು.

ಬಾಗಲಕೋಟೆ ‘ಕಮಲ’ ಕೋಟೆ ಭೇದಿಸಲು ‘ಕೈ’ ರಣತಂತ್ರ

ಸಾವಿರಾರು ಕೇಸರಿ ಕಾರ್ಯಕರ್ತರ ಪಡೆಯ ನಡುವೆ ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಪ್ರಾರಂಭವಾದ ಮೆರವಣಿಗೆ ಮಾರುಕಟ್ಟೆ, ಚಾವಡಿ ಬಸ್‌ ನಿಲ್ದಾಣದ ಮೂಲಕ ಸಾಗಿ ಮಹಾವೀರ ವೃತ್ತದಲ್ಲಿ ಬಹಿರಂಗ ಸಮಾವೇಶದೊಂದಿಗೆ ಸಂಪನ್ನಗೊಂಡಿತು. ಹನುಮ ವೇಷ ಧರಿಸಿದ ರೂಪಕಗಳು ಮೆರವಣಿಗೆಯಲ್ಲಿ ಆಕರ್ಷಣಿಯವಾಗಿದ್ದವು. ಬಿಗಿ ಪೊಲೀಸ್‌ ಬಂದೋಬಸ್ತ್‌ ಆಯೋಜಿಸಲಾಗಿತ್ತು.

ಮೆರವಣಿಗೆಯಲ್ಲಿ ಕ್ಷೇತ್ರ ಉಸ್ತುವಾರಿ ಅರುಣ ಶಹಾಪೂರ, ಕುರುಕ್ಷೇತ್ರ ಸಂಸದ ಸೈನಿ, ಡಾ.ಎಮ್‌ ಎಸ್‌ ದಾನಿಗೊಂಡ, ಮೀನಾಕ್ಷಿ ಸವದಿ, ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಬಿಜೆಪಿ ಅಧ್ಯಕ್ಷರಾದ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕಿವಾಟ, ತೇರದಾಳ ಪಟ್ಟಣ ಬಿಜೆಪಿ ಅಧ್ಯಕ್ಷ ಮಹಾವೀರ ಕೊಕಟನೂರ ಸೇರಿದಂತೆ ಮತಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು. ಮೆರವಣಿಗೆಯಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದುದು ವಿಶೇಷವಾಗಿತ್ತು.

Latest Videos
Follow Us:
Download App:
  • android
  • ios