ನವದೆಹಲಿ[ಮಾ.11]: ಅನಾಮಧೇಯ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ಸಂದಾಯವಾಗುವ ದೇಣಿಗೆ ಬಗ್ಗೆ ಆಕ್ಷೇಪಗಳ ಇರುವ ಬೆನ್ನಲ್ಲೇ, 2004-05ನೇ ಸಾಲಿನಿಂದ 2018-19ನೇ ಸಾಲಿನ ಅವಧಿಯಲ್ಲಿ 7 ರಾಜಕೀಯ ಪಕ್ಷಗಳು ಅನಾಮಧೇಯ ಮೂಲಗಳಿಂದ ಭರ್ಜರಿ 11234 ಕೋಟಿ ರು. ದೇಣಿಗೆ ಪಡೆದಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಅಸೋಸಿಯೇಷನ್‌ ಆಫ್‌ ಡೆಮಾಕ್ರೆಟಿಕ್‌ ರಿಫಾಮ್ಸ್‌ರ್‍ (ಎಡಿಆರ್‌) ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಅನ್ವಯ, ಬಿಜೆಪಿ, ಕಾಂಗ್ರೆಸ್‌, ಟಿಎಂಸಿ, ಸಿಪಿಎಂ,ಎನ್‌ಸಿಪಿ, ಬಿಎಸ್‌ಪಿ ಮತ್ತು ಸಿಪಿಐ ಪಕ್ಷಗಳು 11234.12 ಕೋಟಿ ರು.ದೇಣಿಗೆಯನ್ನು ಅನಾಮಧೇಯ ಮೂಲಗಳಿಂದ ಸಂಗ್ರಹಿಸಿವೆ. 20000 ರು.ಗಳಿಗಿಂತ ಕಡಿಮೆ ಮೊತ್ತದ ದೇಣಿಗೆ ನೀಡಿದವರ ಹೆಸರನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಲೆಕ್ಕಪತ್ರದಲ್ಲಿ ನೊಂದಾಯಿಸಿಕೊಳ್ಳಬೇಕಿಲ್ಲ ಮತ್ತು ಅದನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುವ ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸುವುದೂ ಕಡ್ಡಾಯವಲ್ಲ. ಈ ರೂಪದಲ್ಲಿ ಬಂದ ದೇಣಿಗೆಯನ್ನು ಅನಾಮಧೇಯ ಮೂಲಗಳಿಂದ ಬಂದ ಹಣ ಎಂದು ಪರಿಗಣಿಸಲಾಗುತ್ತದೆ.

7 ರಾಜಕೀಯ ಪಕ್ಷಗಳು, ಚುನಾವಣಾ ಬಾಂಡ್‌, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ, ಇತರೆ ಆದಾಯ, ಸ್ವಯಂಪ್ರೇರಿತ ದೇಣಿಗೆ, ಮೋರ್ಚಾಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆಯನ್ನು ಸಂಗ್ರಹಿಸಿವೆ.