ದೇಶಕ್ಕೆ ಬೇಕಾಗಿರುವುದು ಬಿಜೆಪಿ ಹಾಗೂ ನರೇಂದ್ರ ಮೋದಿ, ಬೀದರ್‌ ಕ್ಷೇತ್ರಕ್ಕೆ ಬೇಕಾಗಿರುವುದು ಬಿಜೆಪಿ ಹಾಗೂ ಭಗವಂತ ಖೂಬಾ, ಇದು ಜನರ ಮನಸ್ಥಿತಿಯಾಗಿದೆ: ಬಿಜೆಪಿ ಘೋಷಿತ ಅಭ್ಯರ್ಥಿ ಭಗವಂತ ಖೂಬಾ 

ಬೀದರ್‌(ಮಾ.31): ಕಳೆದ 10 ವರ್ಷಗಳಲ್ಲಿ ದೇಶದಲ್ಲಾಗಿರುವ ಅಭಿವೃದ್ಧಿಯನ್ನು ನೋಡಿ ಮತ ನೀಡಿ, ದೇಶದ ಅಭಿವೃದ್ಧಿಗೆ, ರಕ್ಷಣೆಗೆ ಮೋದಿಯವರು ಬೇಕಾಗಿದ್ದಾರೆ ಎಂದು ಬಿಜೆಪಿ ಘೋಷಿತ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಕರೆ ನೀಡಿದರು.

ಬೀದರ್‌ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ರಘುನಾಥರಾವ್‌ ಮಲ್ಕಾಪೂರೆ ಸೇರಿದಂತೆ ಬಿಜೆಪಿಯ ಮುಖಂಡರು ಸೇರಿ ಚಿಮಕೋಡ್‌, ಮಾಳೆಗಾಂವ್‌, ಜನವಾಡಾ ಗ್ರಾಮಗಳಲ್ಲಿ ಪಾದಯಾತ್ರೆ, ಕಾರ್ಯಕರ್ತರ ಸಭೆಗಳ ಮೂಲಕ ಬಿರುಸಿನ ಪ್ರಚಾರ ನಡೆಸಿ ಅವರು ಮಾತನಾಡಿದರು.

LOK SABHA ELECTION 2024: ನಮ್ಮ ಕ್ಯಾಪ್ಟನ್ ಮೋದಿ; ಕಾಂಗ್ರೆಸ್ ಕ್ಯಾಪ್ಟನ್ ಯಾರು ಅಂತಾ ಅವರಿಗೇ ಗೊತ್ತಿಲ್ಲ: ಆರ್ ಅಶೋಕ್ 

ದೇಶಕ್ಕೆ ಬೇಕಾಗಿರುವುದು ಬಿಜೆಪಿ ಹಾಗೂ ನರೇಂದ್ರ ಮೋದಿ, ಬೀದರ್‌ ಕ್ಷೇತ್ರಕ್ಕೆ ಬೇಕಾಗಿರುವುದು ಬಿಜೆಪಿ ಹಾಗೂ ಭಗವಂತ ಖೂಬಾ, ಇದು ಜನರ ಮನಸ್ಥಿತಿಯಾಗಿದೆ. ಕಾಂಗ್ರೆಸ್‌ನಲ್ಲಿ ನನ್ನ ಎದುರು ನಿಲ್ಲಲು ಈಶ್ವರ ಖಂಡ್ರೆಗೆ ಧೈರ್ಯವಾಗಲಿಲ್ಲ, ಆದರೆ ಅಧಿಕಾರ ಬೇರೆಯವರ ಮನೆಗೂ ಕೊಡಲು ಮನಸ್ಸಿರಲಿಲ್ಲ, ಆದ್ದರಿಂದ ಕಾಂಗ್ರೆಸ್‌ನಲ್ಲಿರುವ ಹಿರಿಯ ಮುಖಂಡರಿಗೆ ಮೂಲೆಗುಂಪು ಮಾಡಿ, ತನ್ನ ಸುಪುತ್ರನಿಗೆ ಟಿಕೆಟ್‌ ತಂದಿದ್ದಾರೆ, ಈಶ್ವರ ಖಂಡ್ರೆ ಒಬ್ಬ ಸ್ವಾರ್ಥ ರಾಜಕಾರಣಿ ಎಂದು ಕಿಡಿ ಕಾರಿದರು.

ಜಿಲ್ಲೆಯಲ್ಲಿ ಎಫ್‌ಎಂ ಕೇಂದ್ರ ಪ್ರಾರಂಭವಾಗಿದೆ, ಜನ ಎಫ್‌ಎಂ ಕೇಳ್ತಾ ಇದ್ದಾರೆ. ಸಿಪೆಟ್‌ ಕಾಲೇಜು ಪ್ರಾರಂಭವಾಗಿದೆ, ನಮ್ಮ ಬಿಎಸ್‌ವೈ ಸರ್ಕಾರವಿದ್ದಾಗ ಏರ್‌ಪೋರ್ಟ್‌ ನಾನು ಪ್ರಾರಂಭಿಸಿರುವೆ. ಆದರೆ ಖಂಡ್ರೆ ಇದ್ಯಾವುದು ಆಗಿಲ್ಲ ಅಂತಾರೆ. ಇಂತಹ ಸುಳ್ಳು ಹೇಳುವ ವ್ಯಕ್ತಿಯ ಕುಟುಂಬಕ್ಕೆ ತಾವ್ಯಾರು ಬೆಂಬಲಿಸಬಾರದು ಎಂದು ಜನರಲ್ಲಿ ಕೈ ಮುಗಿದು ವಿನಂತಿಸಿಕೊಂಡರು.