Asianet Suvarna News Asianet Suvarna News

ಮತ್ತೊಮ್ಮೆ ಮೋದಿಯೇ ದೇಶಕ್ಕೆ ಪ್ರಧಾನಿ : ಭವಿಷ್ಯ

ಮತ್ತೊಮ್ಮೆ ರಾಜ್ಯದಲ್ಲಿ  ಮೋದಿಯೇ ಪ್ರಧಾನಿಯಾಗಲಿದ್ದಾರೆ ಹೀಗೆಂದು ಭವಿಷ್ಯ ಒಂದನ್ನು ನುಡಿಯಲಾಗಿದೆ

Narendra Modi will Become Indian PM Again says BS yediyurappa snr
Author
Bengaluru, First Published Oct 25, 2020, 7:32 AM IST

ತುಮಕೂರು (ಅ.25):  ಶಿರಾ ಉಪಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಹಾಗೆಯೇ ಆರ್‌.ಆರ್‌.ನಗರದಲ್ಲೂ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವ್ಯಕ್ತಪಡಿಸಿದರು.

ಅವರು ನಗರದ ಸಿದ್ಧಿವಿನಾಯಕ ಸಭಾಂಗಣದಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. 4 ವಿಧಾನ ಪರಿಷತ್‌ ಕ್ಷೇತ್ರಗಳಲ್ಲೂ ಕೂಡ ಬಿಜೆಪಿ ಗೆಲುವು ಸಾಧಿಸಲಿದೆ. ಮುಂದಿನ ಯಾವುದೇ ಚುನಾವಣೆಯನ್ನು ಸಿದ್ದರಾಮಯ್ಯನವರು ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಗುಡುಗಿದರು.

ಜಾತಿಗಳನ್ನ ಒಡೆದು ಆಳಿದ್ರೆ ಡಿಕೆಶಿ ಸಿಎಂ ಆಗ್ತಾರಾ..? ಸಖತ್ ಟಾಂಗ್ ಕೊಟ್ಟ ಮುನಿರತ್ನ ...

ಬಿಜೆಪಿ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ಕರೆ ತಂದು ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು. ಮಲ್ಲಿಕಾರ್ಜುನಯ್ಯ ಅವರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ ಯಾವುದೇ ಕಾರಣಕ್ಕೂ ಬಿಜೆಪಿ ಕೈ ತಪ್ಪದಂತೆ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಸಬ್‌ ಕಾ ಸಾಥ್‌ ಸಬ್‌ ವಿಕಾಸ್‌ ಘೋಷಣೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಮೋದಿ ಅವರೇ ಮತ್ತೆ ಲೋಕಸಭಾ ಚುನಾವಣೆ ಎದುರಿಸಿ ಮೂರನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರನೇ ವೇತನ ಆಯೋಗ, ಯುಜಿಸಿ ವೇತನ ಶ್ರೇಣಿ ಅಂತರ ಕಡಿಮೆ ಮಾಡಿದ್ದೇನೆ. ಕೊರೋನಾ ಸಂಕಷ್ಟದಲ್ಲಿಯೂ ಶಿಕ್ಷಕರ ವೇತನವನ್ನು ಕಡಿತಗೊಳಿಸದೆ ನೀಡಿದ್ದ ಸರ್ಕಾರ ನಮ್ಮದು ಮಾತ್ರ, ಅನೇಕ ಅಭಿವೃದ್ಧಿಯನ್ನು ಕೊರೋನಾ ಸಂಕಷ್ಟದಲ್ಲಿಯೂ ನಿರ್ವಹಿಸಿದ್ದೇನೆ ಎಂದು ಹೇಳಿದರು.

ವಿಪಕ್ಷಗಳು ಏನೇ ಹೇಳಿದರೂ ಲೋಕಸಭೆಯಲ್ಲಿ 26 ಸ್ಥಾನ ಗೆದ್ದಿದ್ದೇವೆ, ವಿಚಾರವಂತರು, ಪ್ರಜ್ಞಾವಂತರು ಇಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಪಕ್ಷದೊಂದಿಗೆ ಇದ್ದಾರೆ. ಚುನಾವಣೆ ಹತ್ತಿರದಲ್ಲಿದೆ, ಬಿಜೆಪಿ ಕಾರ್ಯಕರ್ತರೇ ಅಭ್ಯರ್ಥಿಗಳು ಎನ್ನುವಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.

ಮುಂದಿನ ಬಾರಿ ಕೇಂದ್ರದಲ್ಲಿ ಮೋದಿ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದ ಅವರ, ಶಿಕ್ಷಕ ಹಾಗೂ ಪದವೀಧರರ ಸಮಸ್ಯೆ ಬಗೆ ಹರಿಸಲು ಸಿದ್ಧ ಇರುವುದಾಗಿ ಭರವಸೆ ನೀಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ವರ್ಷದ ಹಿಂದೆ ಯಡಿಯೂರಪ್ಪ ಅವರು ಒಬ್ಬರೇ ಮುಖ್ಯಮಂತ್ರಿಯಾಗಿ ಭೀಕರ ಬರ ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ಕಂಡಿದ್ದೇವೆ. ಇಂದು ಬೆಂಗಳೂರಿನಲ್ಲಿ ಮಳೆಯಿಂದ ಬಾಧಿತರಾದವರನ್ನು ಭೇಟಿ ಮಾಡಿ, ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ ಇದು ಅವರ ಬದ್ಧತೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರಿಗೆ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿರಬೇಕು ಎನ್ನುವ ಮುಂದಾಲೋಚನೆಯಿಂದ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿದ್ದಾರೆ, ಇದರಿಂದ ಮಕ್ಕಳಲ್ಲಿ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲಿದ್ದು, ಮುಂದಿನ ವರ್ಷದಿಂದ ಅನುಷ್ಠಾನಗೊಳ್ಳಲಿರುವ ಶಿಕ್ಷಣ ನೀತಿಗೆ ಪೂರಕವಾಗಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಅವರು ನಾಲ್ಕೂವರೆ ವರ್ಷ ಶ್ರಮವಹಿಸಿ ಸಿದ್ಧಪಡಿಸಿರುವ ನೂತನ ಶಿಕ್ಷಣ ನೀತಿ ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿದಾನಂದಗೌಡ ಅವರಂತವರು ವಿಧಾನಸೌಧದಲ್ಲಿರುವುದು ಅವಶ್ಯಕ. ನರೇಂದ್ರ ಮೋದಿ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೈ ಬಲ ಪಡಿಸುವ ನಿಟ್ಟಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆ, ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತದಾರರು ಯಾವಾಗಲೂ ಬೆಂಬಲಿಸಿದ್ದಾರೆ. ಮೋದಿ ಅವರು ಅಧಿಕಾರದಲ್ಲಿ ನೀಡಿರುವ ಕೊಡುಗೆ, ಬಿಎಸ್‌ವೈ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಅವರು ಮಾತನಾಡಿ, ಚುನಾವಣೆಯಲ್ಲಿ ನಾನು ನೆಪ ಮಾತ್ರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರ್ಶೀವಾದದಿಂದ ಸ್ಪರ್ಧಿಸಿದ್ದು, ಕಳೆದ ಎರಡು ವರ್ಷದಿಂದ ಮತದಾರರ ನೋಂದಣಿ ಮಾಡಿಸಿದ್ದು, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ಸಂಸದ ಜಿ.ಎಸ್‌. ಬಸವರಾಜು, ಬಿಜೆಪಿ ಶಾಸಕರು ಹಾಜರಿದ್ದರು.

Follow Us:
Download App:
  • android
  • ios