ದೇಶದ ಸುರಕ್ಷತೆಗಾಗಿ ಮೋದಿ ಪ್ರಧಾನಿಯಾಗಬೇಕು: ಮಾಜಿ ಸಚಿವ ರಾಮದಾಸ್
ದೇಶದ ಸುರಕ್ಷತೆ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿರುವುದು ಅಗತ್ಯ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಹುಬ್ಬಳ್ಳಿ (ಜ.11): ದೇಶದ ಸುರಕ್ಷತೆ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿರುವುದು ಅಗತ್ಯ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ 2024ಕ್ಕೆ ಮತ್ತೆ ಪ್ರಧಾನಿ ಆಗದಿದ್ದರೆ ಭಾರತದ ಪರಿಸ್ಥಿತಿ ಊಹಿಸಲು ಅಸಾಧ್ಯ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ಮತ್ತು ಮಾಲ್ಡಿವ್ಸ್ ದೇಶಗಳು ಭಾರತವನ್ನು ಛಿದ್ರಗೊಳಿಸಲು ಹವಣಿಸುತ್ತಿವೆ. ಪಾಕಿಸ್ತಾನ, ಚೀನಾದಂತಹ ದೇಶಗಳು ಭಾರತದಲ್ಲಿ ನುಸುಳುವ ಯತ್ನ ನಡೆಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ದೇಶವನ್ನು ಸುರಕ್ಷಿತವಾಗಿ ಕಾಯ್ದುಕೊಂಡು ಮುನ್ನಡೆಸಲು ಮೋದಿ ಆಡಳಿತ ಅತ್ಯಗತ್ಯ ಎಂದರು.
ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಮೈತ್ರಿಯಿಂದ ಆ ಭಾಗದಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲುವು ನಿಶ್ಚಿತವಾಗಿದೆ. ಜೀವನದಲ್ಲಿ ಸಹಜವಾಗಿ ಆಗುವ ಬದಲಾವಣೆಯಂತೆ ಪಕ್ಷವೂ ಬದಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ರವಿ ನಾಯ್ಕ, ರಾಮಣ್ಣ ಬಡಿಗೇರ ಸೇರಿದಂತೆ ಇತರರು ಇದ್ದರು.
4.27 ಲಕ್ಷ ಜನರ ನೋಂದಣಿ: ಕೇಂದ್ರ ಸರಕಾರದ ಸ್ವ ನಿಧಿ, ಸಮೃದ್ಧಿ ಸೇರಿದಂತೆ ಎಂಟು ಯೋಜನೆಗಳಿಗೆ ರಾಜ್ಯದಲ್ಲಿ 4.27 ಲಕ್ಷ ಜನರು ನೋಂದಣಿಯಾಗಿದ್ದು, ಫಲಾನುಭವಿಗಳಿಗೆ ಈ ಯೋಜನೆಯಡಿ ಬಿಡುಗಡೆಗೊಂಡ ₹780 ಕೋಟಿ ಸಹಾಯದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪತ್ರಿಕಾ ವಿತರಕರು, ಛಾಯಾಗ್ರಾಹಕ, ಬೀದಿ ಬದಿಯ ವ್ಯಾಪಾರಸ್ಥರು, ಕ್ಯಾಟರಿಂಗ್ ಸಿಬ್ಬಂದಿ, ಡೆಲಿವರಿ ಬಾಯ್ಸ್ ಸೇರಿದಂತೆ 25 ವಿಭಾಗದ ಕೆಳ ಹಂತದ ಕೆಲಸಗಾರರಿಗೆ ಸಹಾಯಹಸ್ತ ನೀಡಿದೆ.
ಕೊಡಗು ಜಿಲ್ಲೆಯ 10 ಸಾವಿರ ಜನರಿಗಿಲ್ಲ ಗೃಹಜ್ಯೋತಿ ಭಾಗ್ಯ: ಕಾಫಿತೋಟದ ಕೂಲಿಕಾರರೇ ಯೋಜನೆಯಿಂದ ವಂಚಿತರು!
ಅಸಂಘಟಿತ ವರ್ಗದವರಿಗೆ ಪಿಎಂ ಜೀವನ ಭಿಮಾ ಯೋಜನೆ, ಸುರಕ್ಷಾ ಯೋಜನೆ, ಜನಧನ ಯೋಜನೆ ಹೀಗೆ ಹತ್ತಾರು ಯೋಜನೆಗಳ ಮೂಲಕ ರಾಜ್ಯದ ಶೇ. 100ರಷ್ಟು ಜನರಿಗೆ ಯೋಜನೆಗಳ ಲಾಭ ತಲುಪಿದೆ. ಇನ್ನು ಧಾರವಾಡದಲ್ಲಿ ಎಂಟು ಯೋಜನೆ ಪೈಕಿ ಆರು ಯೋಜನೆ ಶೇ.100ರಷ್ಟು ಗುರಿ ತಲುಪಲಾಗಿದೆ. ಈ ರೀತಿ ಪ್ರಗತಿ ಸಾಧಿಸಿದ ಜಿಲ್ಲೆಗೆ ಕೇಂದ್ರ ಸರಕಾರದಿಂದ ಸ್ಪಾರ್ಕ್ ಅವಾರ್ಡ್ ನೀಡಲಾಗುತ್ತಿದ್ದು, ಜಿಲ್ಲೆಗೆ ನೀಡಬೇಕು ಎಂದು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.