Asianet Suvarna News Asianet Suvarna News

ಮೋದಿ ಇನ್ನಷ್ಟು ವರ್ಷ ಪ್ರಧಾನಿಯಾಗಿರಬೇಕು, ಇವರಿಂದ ದೇಶದ ಸಮಸ್ಯೆಗೆ ಪರಿಹಾರ ಸಾಧ್ಯ: ಎಸ್‌.ಎಂ.ಕೃಷ್ಣ

ಪ್ರಧಾನಿ ಸ್ಥಾನದಲ್ಲಿ ಮತ್ತಷ್ಟು ವರ್ಷ ಮುನ್ನಡೆಯಬೇಕು. ಅವರ ಆಡಳಿತ ಯುಗದಲ್ಲಿ ಭಾರತ ಸುಭದ್ರವಾಗಿದೆ ಅಂತ ಮುಕ್ತಕಂಠದಿಂದ ಹೊಗಳಿದ ಮಾಜಿ ಸಿಎಂ ಎಸ್‌.ಎಂ.ಕೃಷ್ಣ

Narendra Modi Should be PM for More Years Says SM Krishna grg
Author
First Published Sep 18, 2022, 12:28 PM IST

ಮೈಸೂರು(ಸೆ.18): ಪ್ರಧಾನಿ ನರೇಂದ್ರ ಮೋದಿ ಅವರು ಇನ್ನಷ್ಟು ವರ್ಷ ದೇಶದ ಪ್ರಧಾನಿಯಾಗಿ ಮುಂದುವರೆಯಬೇಕು. ಆಗ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದರು. ನಗರದ ವಿದ್ಯಾರಣ್ಯಪುರಂನ ಶ್ರೀರಾಮಲಿಂಗೇಶ್ವರ ಉದ್ಯಾನವನದಲ್ಲಿ ಶನಿವಾರ ಮೋದಿ ಹುಟ್ಟುಹಬ್ಬ ಅಂಗವಾಗಿ ಕೆ.ಆರ್‌. ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರು ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ಒಬ್ಬ ತಪಸ್ವಿ, ಯುಗ ಪರಿವರ್ತಕ. ಅವರು ಪ್ರಧಾನಿಯಾಗಿ ಬಂದ ಮೇಲೆ ದೇಶದ ಹಲವು ಸಮಸ್ಯೆಗೆ ಪರಿಹಾರ ದೊರಕಿದೆ. ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಿದೆ. ಆದ್ದರಿಂದ ಅವರು ಪ್ರಧಾನಿ ಸ್ಥಾನದಲ್ಲಿ ಮತ್ತಷ್ಟು ವರ್ಷ ಮುನ್ನಡೆಯಬೇಕು. ಅವರ ಆಡಳಿತ ಯುಗದಲ್ಲಿ ಭಾರತ ಸುಭದ್ರವಾಗಿದೆ ಎಂದು ಅವರು ಮುಕ್ತಕಂಠದಿಂದ ಹೊಗಳಿದರು.

ದಸರಾ ಜಂಬೂ ಸವಾರಿಗೆ ಪ್ರಧಾನಿ ಮೋದಿ ಭೇಟಿ ಇಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

ಭಾರತ ವಿಶ್ವಗುರು ಆಗುವ ಮೂಲಕ ಜಾಗತಿಕವಾಗಿ ಮನ್ನಣೆ ಪಡೆದಿದೆ. ಅಭಿವೃದ್ಧಿಯ ವಿಷಯದಲ್ಲಿ ಮಾದರಿಯಾಗಿದೆ. ಮೋದಿ ಅವರು ಯುಗ ಪರಿವರ್ತನೆಯ ಹರಿಕಾರನಂತೆ. ಅವರು ಅವರ ತಾಯಿ ಹೀರಾಬೆನ್‌ ಅವರಂತೆ ನೂರಾರು ವರ್ಷ ಬದುಕಬೇಕು. ತಾಯಿ ಚಾಮುಂಡೇಶ್ವರಿ ಅಷ್ಟುಶಕ್ತಿ ಮತ್ತು ಆರೋಗ್ಯವನ್ನು ಅವರಿಗೆ ಕರುಣಿಸಲಿ ಎಂದು ಅವರು ಆಶಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ನನಗೆ ಇಂದಿಗೂ ಪ್ರೀತಿಯ ರಾಜಕಾರಣಿ ಎಂದರೆ ಅದು ಎಸ್‌.ಎಂ. ಕೃಷ್ಣ. ಏಕೆಂದರೆ ಬೆಂಗಳೂರಿಗೆ ಐಟಿ, ಬಿಟಿ ಬರಲು, ಯಶಸ್ವಿನಿ ಯೋಜನೆ ಜಾರಿಗೊಳಿಸಲು ಇವರೇ ಕಾರಣ. ಚತುಷ್ಪಥ ಯೋಜನೆ ಜಾರಿಗೊಳಿಸಿದ್ದು ಇವರೇ. ಆದರೆ ಜನ ಇವರ ಕೈ ಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2004 ದೇಶ ಹಾಗೂ ರಾಜ್ಯಕ್ಕೆ ಕರಾಳ ವರ್ಷ ಆಗಿತ್ತು. ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಮತ್ತೆ ಬರಲಿಲ್ಲ. ಇತ್ತ ಎಸ್‌.ಎಂ. ಕೃಷ್ಣ ಅವರು ಮತ್ತೆ ಮುಖ್ಯಮಂತ್ರಿ ಆಗಲಿಲ್ಲ. ಇವರಿಬ್ಬರು ಮತ್ತೆ ಅಧಿಕಾರಕ್ಕೆ ಬಂದಿದ್ದರೆ ದೇಶ ಮತ್ತಷ್ಟುಅಭಿವೃದ್ಧಿ ಪಥದತ್ತ ಹೋಗುತ್ತಿತ್ತು. ತಮಿಳುನಾಡನ್ನು ಕೂಡ ನಾವು ಹಿಂದಿಕ್ಕಬಹುದಿತ್ತು. ಆದರೆ, ಜನ ನಮ್ಮ ಕೈ ಹಿಡಿಯಲಿಲ್ಲ ಎಂದರು.

ಕಾರ್ಯಕ್ರಮದ ರುವಾರಿ ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಪ್ರತಿ ವರ್ಷ ಪ್ರಧಾನಿ ನರೇಂದ್ರಮೋದಿ ಅವರ ಹುಟ್ಟುಹಬ್ಬವನ್ನು ಮೋದಿ ಯುಗ ಉತ್ಸವ್‌ ಹೆಸರಿನಲ್ಲಿ ಆಚರಿಸುತ್ತಿದ್ದೇವೆ. ಮೋದಿ ಯುಗ ಉತ್ಸವ್‌ ಅಂಗವಾಗಿ ಸುಮಾರು 1008 ಮಂದಿ ಫಲಾನುಭವಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.

ಕೆನಡಿ ಅವರಿಂದ ಪ್ರಶಂಸೆಗೆ ಒಳಗಾಗಿದ್ದ ಕೃಷ್ಣ:

ಮೈಸೂರಿನ ಪದವಿ ಪೂರೈಸಿದ ಎಸ್‌.ಎಂ. ಕೃಷ್ಣ ಅವರು ಕಾನೂನು ಪದವಿ ಪಡೆಯಲು ಅಮೆರಿಕಾದ ವಾಷಿಂಗ್‌ಟನ್‌ಗೆ ತೆರಲಿದ್ದರು. ಆಗ ಅಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿತ್ತು. ಅದರಲ್ಲಿ ಜಾನ್‌ ಎಫ್‌ ಕೆನಡಿ ಸ್ಪರ್ಧಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳ ಪರವಾಗಿ ಎಸ್‌.ಎಂ. ಕೃಷ್ಣ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆ ಚುನಾವಣೆಯಲ್ಲಿ ಕೆನಡಿ ಅವರು ಅಭೂತಪೂರ್ವ ಗೆಲುವು ಸಾಧಿಸಿದರು. ಕೆಲ ದಿನಗಳ ನಂತರ ಕೆನಡಿ ಅವರು ಎಸ್‌.ಎಂ. ಕೃಷ್ಣ ಅವರಿಗೆ ಪತ್ರ ಬರೆದು ಅವರ ಪ್ರಚಾರ ಕಾರ್ಯದ ಕುರಿತು ಅಭಿನಂದಿಸಿದ್ದಾಗಿ ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

ಬೆಟ್ಟ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರಕ್ಕೆ ಈಶ್ವರಪ್ಪ ಕೃತಜ್ಞತೆ

ತೆರೆದ ವಾಹನದಲ್ಲಿ ಮೆರವಣಿಗೆ:

ಕಾರ್ಯಕ್ರಮಕ್ಕೂ ಮುನ್ನ ಎಸ್‌.ಎಂ. ಕೃಷ್ಣ ಅವರನ್ನು ತೆರೆದ ವಾಹನಗಳ ಮೂಲಕ ವೇದಿಕೆಗೆ ಕರೆತರಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ. ರೂಪಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ನಟಿ ರೂಪಿಕಾ, ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ, ನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್‌, ಕೆ.ಆರ್‌. ಕ್ಷೇತ್ರದ ಮಂಡಲ ಅಧ್ಯಕ್ಷ ವಡಿವೇಲು ಮೊದಲಾದವರು ಇದ್ದರು.

ಏನೇನು ಕಾರ್ಯಕ್ರಮ

ಕ್ಷೇತ್ರದ 250 ಗರ್ಭಿಣಿಯರಿಗೆ ಉಡಿ ತುಂಬುವ ಶಾಸ್ತ್ರ, 80 ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್‌ ವಿತರಣೆ, 10 ಸ್ವಸಹಾಯ ಸಂಘಗಳಿಗೆ ಸಹಾಯಧನ ನೀಡುವುದು, 1008 ಜನರಿಂದ ಬೃಹತ್‌ ರಕ್ತದಾನ ಶಿಬಿರ, 10 ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಪಾಸ್ಬುಕ್‌ ವಿತರಣೆ, 5 ಜನರಿಗೆ ಮೆಡಿಕಲ್‌ ಕಿಟ್‌ ವಿತರಣೆ, ಐದು ಮಕ್ಕಳಿಗೆ ಅನ್ನಪ್ರಾಶನ ಮತ್ತು ಲಾನುಭವಿಗಳಿಗೆ ಸರ್ಕಾರಿ ಮಂಜೂರಾತಿ ಪತ್ರ ವಿತರಣೆ.
 

Follow Us:
Download App:
  • android
  • ios