Asianet Suvarna News Asianet Suvarna News

ಸಿದ್ದರಾಮಯ್ಯ ಬೋಗಸ್ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಶ್ರೇಷ್ಠ: ಬಿ.ವೈ.ವಿಜಯೇಂದ್ರ

ಮುಂದಿನ ಲೋಕಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರಂಟಿಗಿಂತ ನರೇಂದ್ರ ಮೋದಿಯವರ ಗ್ಯಾರಂಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ. 

Narendra Modi guarantee better than Siddaramaiahs bogus guarantee Says BY Vijayendra gvd
Author
First Published Jan 21, 2024, 6:03 AM IST

ಬೆಂಗಳೂರು (ಜ.21): ಮುಂದಿನ ಲೋಕಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರಂಟಿಗಿಂತ ನರೇಂದ್ರ ಮೋದಿಯವರ ಗ್ಯಾರಂಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಎಸ್‍ಟಿ (ಪರಿಶಿಷ್ಟ ಪಂಗಡ) ಮೋರ್ಚಾ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಮೂಲಕ ಈಗಾಗಲೇ ಸಾಬೀತಾಗಿದೆ. ಅದನ್ನು ಪುನರಾವರ್ತನೆ ಮಾಡಬೇಕಿದೆ ಎಂದರು.

ವಾಲ್ಮೀಕಿ ಸಮಾಜ ಮತ್ತು ಬಿಜೆಪಿ ನಡುವೆ ಅವಿನಾಭಾವ ಸಂಬಂಧವಿದೆ. ಬಿಜೆಪಿ ಮತ್ತು ಎಸ್‍ಟಿ ಸಮಾಜದ ನಡುವೆ ಒಂದು ಅವಿನಾಭಾವ ಸಂಬಂಧ ಹಿಂದಿನಿಂದಲೂ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಎಸ್‍ಟಿ ಸಮುದಾಯಗಳ ಪಾತ್ರ ದೊಡ್ಡ ಮಟ್ಟದಲ್ಲಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ ಅಭಿವೃದ್ಧಿ ಕಾರ್ಯದ ಹಿಂದೆ ವಾಲ್ಮೀಕಿ ಸಮುದಾಯದ ಶಾಸಕರ ತ್ಯಾಗ ಮತ್ತು ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಮನ ಬಗ್ಗೆ ಸಚಿವ ರಾಜಣ್ಣ ಹೇಳಿಕೆ ಕಾಂಗ್ರೆಸ್‌ ಮಾನಸಿಕತೆ ತೋರಿಸುತ್ತದೆ: ಸಂಸದ ನಳಿನ್‌ ಕುಮಾರ್‌

ಈ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿಗಳ ಸ್ಥಾನಕ್ಕೆ ಎಸ್‍ಟಿ ಸಮುದಾಯದ ಗೌರವಾನ್ವಿತ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದ್ದಾರೆ. ಮೋದಿ ಅವರು ಎಸ್‍ಟಿ ಸಮುದಾಯದ ಬಗ್ಗೆ ಇಟ್ಟ ಕಳಕಳಿಯನ್ನು ಇದು ಸೂಚಿಸುತ್ತದೆ. ಬಿಜೆಪಿಯು ಎಸ್‍ಟಿ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ರಾಜ್ಯದಲ್ಲಿ ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ನಿರಂತರ ಹೋರಾಟ ನಡೆದಿತ್ತು. ಮೀಸಲಾತಿ ಪ್ರಮಾಣ ಹೆಚ್ಚಿಸಿದ ಕೀರ್ತಿ ಬಿಜೆಪಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಶತಮಾನಗಳಿಂದ ತುಳಿತಕ್ಕೆ ಒಳಗಾದ ಹಲವಾರು ವರ್ಗಗಳಲ್ಲಿ ಪರಿಶಿಷ್ಟ ಪಂಗಡವೂ ಒಂದು. ಸಾಮಾಜಿಕ ನ್ಯಾಯ ಒದಗಿಸಬೇಕಾದ ಕಾಂಗ್ರೆಸ್ ಸರ್ಕಾರ ಈ ಸಮುದಾಯಗಳನ್ನು ಮತಬ್ಯಾಂಕಾಗಿ ಮಾಡಿಕೊಂಡಿತ್ತು. ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡದೇ ಅಭಿವೃದ್ಧಿ ವಂಚಿತರನ್ನಾಗಿ ಮಾಡಿದರು ಎಂದು ಹರಿಹಾಯ್ದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 15 ಮೀಸಲು ಕ್ಷೇತ್ರಗಳಲ್ಲಿ ಒಬ್ಬರೂ ವಾಲ್ಮೀಕಿ ಸಮುದಾಯದ ನಾಯಕರು ಗೆದ್ದಿಲ್ಲ. ಸಮುದಾಯ ಎಲ್ಲೋ ಒಂದು ಕಡೆ ದೂರ ಹೋದುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಮೀಸಲಾತಿ ಪ್ರಮಾಣ ಹೆಚ್ಚಿಸದೆ ಇರುವುದು ಯಾರ ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಪಕ್ಷವು ನಮ್ಮ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ ಎಂದು ಹೇಳಿದರು.

ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಮೊಣಕೈ, ಮೂಗಿಗೆ ತುಪ್ಪ ಸವರುವುದೇ ಕಾಂಗ್ರೆಸ್‍ನ ಸಾಮಾಜಿಕ ನ್ಯಾಯ. ತುಪ್ಪ ನಿನಗೆ ಕೊಟ್ಟಿದ್ದೇನೆ ನೋಡು ಎನ್ನುವುದು ಕಾಂಗ್ರೆಸ್‍ನ ಪದ್ಧತಿ. ಮೂಗಿಗೆ, ಮೊಣಕೈಗೆ ಸವರಿದ ತುಪ್ಪ ತಿನ್ನಲಾಗುತ್ತದೆಯೇ? ಮೊಣಕೈ, ಮೂಗಿಗೆ ತುಪ್ಪ ಸವರುವುದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ನ್ಯಾಯ. ಶೇ.3ರಷ್ಟಿದ್ದ ಎಸ್‍ಟಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿದ್ದು ಬಿಜೆಪಿ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಈ ನಿರ್ಧಾರ ಮಾಡಲಾಗಿದೆ. 

ಸರ್ಕಾರದ ಗ್ಯಾರಂಟಿ ಅನುಷ್ಠಾನದಿಂದ ಅಭಿವೃದ್ದಿ ಕಾರ್ಯ ವಿಳಂಬ: ಶಾಸಕ ದರ್ಶನ್ ಧ್ರುವನಾರಾಯಣ್

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಾಲ್ಮೀಕಿ ಜಯಂತಿ ಆಚರಣೆ ಆರಂಭಿಸಲಾಯಿತು. ಬಿಜೆಪಿ ಸರ್ಕಾರವು ಎಸ್‍ಟಿಗಳಿಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸಿದೆ ಎಂದು ವಿವರಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯದ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು. ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅಧ್ಯಕ್ಷತೆ ವಹಿಸಿದ್ದರು.

Follow Us:
Download App:
  • android
  • ios