ಬೆಂಗಳೂರು(ಜ.26):  ನಾನು ಮಂಡ್ಯ ಜಿಲ್ಲೆಯವನು. ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ಸಚಿವ ಸಿ.ಪಿ. ಯೋಗೇಶ್ವರ್‌ ಅವರಿಗೆ ಕೊಡುವ ಸಾಧ್ಯತೆಯೇ ಇಲ್ಲ ಎಂದು ಯುವ ಸಬಲೀಕರಣ, ಕ್ರೀಡೆ ಹಾಗೂ ಯೋಜನೆ ಸಚಿವ ಕೆ.ಸಿ. ನಾರಾಯಣಗೌಡ ಸ್ಪಷ್ಟವಾಗಿ ಹೇಳಿದ್ದಾರೆ.

ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಸೋಮವಾರ ವಿಕಾಸಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಮಂಡ್ಯ ಜಿಲ್ಲೆ ಉಸ್ತುವಾರಿ ನೀಡುವಂತೆ ಸಿ.ಪಿ. ಯೋಗೇಶ್ವರ್‌ ಕೇಳಿಲ್ಲ. ಯೋಗೇಶ್ವರ್‌ ಪಕ್ಕದ ರಾಮನಗರ ಜಿಲ್ಲೆಯವರಾಗಿರುವಾಗ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.

ಖಾತೆ ಬದಲಾವಣೆಗೆ ನಾರಾಯಣ ಗೌಡ ಆಕ್ರೋಶ, ಸಿಎಂ ಭೇಟಿಗೆ ನಿರ್ಧಾರ ...

ಖಾತೆ ಹಂಚಿಕೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಹಾಗೆ ನೋಡಿದರೆ ಎಲ್ಲವೂ ಒಳ್ಳೆಯ ಖಾತೆಗಳಾಗಿವೆ. ಕೊವೀಡ್‌ ವೇಳೆಯೂ ನಾನು ಸೇರಿದಂತೆ ಎಲ್ಲ ಸಚಿವರು ಸಹ ಕೆಲಸ ಮಾಡಿದ್ದೇವೆ. ಹಾಗೆಂದು ಸಂಪೂರ್ಣ ಅಭಿವೃದ್ಧಿ ಕೆಲಸ ಮಾಡಲು ಆಗಲಿಲ್ಲ. ಇಡೀ ದೇಶದ ಸ್ಥಿತಿಯೂ ಇದೇ ರೀತಿ ಆಗಿತ್ತು. ಕೊರೋನಾದಿಂದ ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಆದ್ಯತೆಯಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಲಸಿಗರ ಸಭೆಗೆ ಯತ್ನ:  ಸುದ್ದಿಗಾರರಿಂದ ಪದೇ ಪದೇ ಕೇಳಿಬಂದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಂದ 17 ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ಶೀಘ್ರದಲ್ಲಿ ನಾವೆಲ್ಲ ಸೇರುತ್ತೇವೆ. ಜೊತೆಗೆ ನಿಮ್ಮನ್ನೂ (ಮಾಧ್ಯಮ ಪ್ರತಿನಿಧಿಗಳು) ಕರೆಯುತ್ತೇವೆ ಎಂದು ಹಾರಿಕೆ ಉತ್ತರ ನೀಡಿದರು.