ನಾರಾಯಣಗೌಡ ಗೆದ್ದು ಮಂತ್ರಿಯಾಗುವುದು ಖಚಿತ: ಯಡಿಯೂರಪ್ಪ ಭವಿಷ್ಯ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು.
ಕೆ.ಆರ್.ಪೇಟೆ (ಮೇ.05): ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದರು. ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಬಿಜೆಪಿ ಅಭ್ಯರ್ಥಿ ಸಚಿವ ಕೆ.ಸಿ.ನಾರಾಯಣಗೌಡರ ಪರ ಮತಯಾಚಿಸಿ ಮಾತನಾಡಿದರು. ಕೆಲವರು ಹೇಳುತ್ತಿರುವಂತೆ ರಾಜ್ಯ ಬಿಜೆಪಿ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿಲ್ಲ. ರಾಜ್ಯ ಸುತ್ತಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಗುರುತರ ಜವಾಬ್ದಾರಿ ನನಗೆ ನೀಡಲಾಗಿದೆ.
ನನ್ನ ಕೊನೆಯ ಉಸಿರಿರುವವರೆಗೂ ಪಕ್ಷ ನನಗೆ ನೀಡಿದ ಸ್ಥಾನಮಾನ ಮತ್ತು ಗೌರವಗಳನ್ನು ನಾನು ಮರೆಯುವುದಿಲ್ಲ ಎಂದು ನುಡಿದರು. ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಸುಮಾರು 35 ಸಾವಿರ ಮತಗಳ ಅಂತರದಿಂದ ಮರು ಆಯ್ಕೆಯಾಗಿ ರಾಜ್ಯದಲ್ಲಿ ಮತ್ತೆ ಮಂತ್ರಿಯಾಗಲಿದ್ದಾರೆಂದು ಭವಿಷ್ಯ ನುಡಿದರು. ಒಂದು ಗ್ರಾಪಂ ಸದಸ್ಯನಾದವನು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದು ಮುಂದು ನೋಡುತ್ತಾನೆ. ಆದರೆ, ಪಕ್ಷದ ಹಿತಕ್ಕಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವನು ನಿಮ್ಮ ಯಡಿಯೂರಪ್ಪ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ರಾಜ್ಯ ಸುತ್ತುತ್ತಿದ್ದೇನೆ ಎಂದರು.
ಸಿಎಂ ಗಾದಿ ಅವಕಾಶವಿದೆ, ಬೆಂಬಲಿಸಿ: ಮತ್ತೊಮ್ಮೆ ಮನದಿಂಗಿತ ಬಿಚ್ಚಿಟ್ಟ ಸಿದ್ದರಾಮಯ್ಯ
25 ಸಂಸದರು ಗೆಲ್ಲಬೇಕು: ನನ್ನ ಹುಟ್ಟು ಹಬ್ಬಕ್ಕೆ ಮೋದಿ ಬಂದಾಗ ಶಿವಮೊಗ್ಗೆಯಲ್ಲಿ 4-5 ಲಕ್ಷ ಜನ ಸೇರಿದ್ದರು. ಮೋದಿ ಜಗತ್ತು ಅಚ್ಚರಿ ಪಡುತ್ತಿರುವ ನಾಯಕ. ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಮತ್ತೆ 25 ಸಂಸದ ಕ್ಷೇತ್ರಗಳನ್ನು ಗೆಲ್ಲಬೇಕು. ಹಣ ಬಲ, ಅಧಿಕಾರ ಬಲ ಮತ್ತು ಜಾತಿ ವಿಷಬೀಜ ಬಿತ್ತಿ ಅಧಿಕಾರ ಪಡೆಯುವ ಕಾಲ ಮುಗಿದಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ನಾರಾಯಣಗೌಡರನ್ನು ಗೆಲ್ಲಿಸಿ: ಬಿಜೆಪಿ ತನ್ನ ಅಭಿವೃದ್ಧಿಯ ಮೇಲೆ ಮತ ಕೇಳಲಿದೆ. ಪರಿಶಿಷ್ಟಜಾತಿ ವರ್ಗಕ್ಕೆ ನಾವು ನೀಡಿರುವ ಸವಲತ್ತುಗಳನ್ನು ಇದುವರೆಗೆ ಯಾರೂ ನೀಡಿಲ್ಲ. ಬಿಜೆಪಿ ಎಲ್ಲಾ ಸಮುದಾಯಗಳಿಗೂ ಸಮಾನ ಸವಲತ್ತು ನೀಡಿದೆ. ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ ಸಿಲಿಂಡರ್ ನೀಡಲಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಕ್ಕೂ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಈಗ ನೀಡುತ್ತಿರುವ 5 ಕೆ.ಜಿ ಅಕ್ಕಿಗೆ ಮತ್ತೆ 5 ಕೆ.ಜಿ.ಸೇರಿಸಿ 10 ಕೆ.ಜಿ.ಉಚಿತ ಅಕ್ಕಿ ನೀಡಲಿದ್ದೇವೆ. ಪ್ರತಿ ವರ್ಷ ವಸತಿ ರಹಿತರಿಗೆ 10 ಲಕ್ಷ ಮನೆ ನಿರ್ಮಿಸಿಕೊಡಲಿದ್ದೇವೆ.
ಬಜರಂಗದಳ ಬ್ಯಾನ್ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ: ಜಗದೀಶ್ ಶೆಟ್ಟರ್
ಗರ್ಭಿಣಿ ಸ್ತ್ರೀಯರಿಗೆ ಆರು ಪೌಷ್ಟಿಕ ಅಂಶಗಳನ್ನು ಒಳಗೊಂಡ ಸುಮಾರು 21 ಸಾವಿರ ಮೌಲ್ಯದ ಕಿಟ್ ನೀಡಲಿದ್ದೇವೆ. ಹೀಗೆ ನಾವು ಮತ್ತೆ ಅಧಿಕಾರಕ್ಕೆ ಬಂದ ಅನಂತರ ರಾಜ್ಯದ ಜನರಿಗೆ ಹತ್ತು ಹಲವು ಸೌಲಭ್ಯ ನೀಡಲಿದ್ದೇವೆಂದ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದ ಜನ 35 ಸಾವಿರ ಮತಗಳ ಅಂರದಿಂದ ಸಚಿವ ಕೆ.ಸಿ.ನಾರಾಯಣಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಅಭ್ಯರ್ಥಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ಮತಯಾಚಿಸಿದರು. ಕ್ಷೇತ್ರದ ಉಸ್ತುವಾರಿ ರಾಜೇಶ್ ಭಾಟಿಯಾ, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಮಾಜಿ ಅಧ್ಯಕ್ಷ ಬೂಕಹಳ್ಳಿ ಮಂಜು, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಮುಖಂಡರಾದ ಕೆ.ಶ್ರೀನಿವಾಸ್, ಶೀಳನೆರೆ ಅಂಬರೀಶ್, ಕಿಕ್ಕೇರಿ ಪ್ರಭಾಕರ್, ಬಿ.ಜವರಾಯಿಗೌಡ, ಕೆ.ಎಸ್.ಸಂತೋಷ್ ಕುಮಾರ್, ವಿ.ಡಿ.ಹರೀಶ್, ಬಿ.ಎನ್.ದಿನೇಶ್, ಮೀನಾಕ್ಷಿ, ಪುಟ್ಟರಾಜು, ಬ್ಯಾಲದಕೆರೆ ಪಾಪೇಗೌಡ ಇತರರಿದ್ದರು.