ಗುಲಾಮಗಿರಿ ಹೆಸರು ಇಟ್ಟುಕೊಳ್ಳುವುದು ಅವಮಾನ, ‘ರಿಪಬ್ಲಿಕ್ ಆಫ್ ಭಾರತ’ ಹೆಸರು ಸ್ವಾಗತಾರ್ಹ: ಮುತಾಲಿಕ್
ಸ್ವಾತಂತ್ರ್ಯ ಸಿಕ್ಕಾಗಲೇ ಬದಲಾವಣೆ ಆಗಬೇಕು ಅಂತಾ ಎಲ್ಲರ ಮನಸ್ಸಿನಲ್ಲಿತ್ತು. ಆದರೆ ಮಾಡಲಿಲ್ಲ, ರಿಪಬ್ಲಿಕ್ ಆಫ್ ಇಂಡಿಯಾ ಅನ್ನೋದು ಗುಲಾಮಗಿರಿಯ ಹೆಸರು. ಸ್ವಾತಂತ್ರ್ಯ ಸ್ವಾಭಿಮಾನದ ಹೆಸರು ರಿಪಬ್ಲಿಕ್ ಆಫ್ ಭಾರತ. ರಾಷ್ಟ್ರಪತಿಗಳ ಪತ್ರದಲ್ಲಿ ಬದಲಾವಣೆಯಾಗಿದ್ದು ಸ್ವಾಗತಾರ್ಹವಾಗಿದೆ: ಪ್ರಮೋದ ಮುತಾಲಿಕ್
ಗದಗ(ಸೆ.06): ಸ್ವಾತಂತ್ರ್ಯ ಸಿಕ್ಕು 76 ವರ್ಷವಾಗಿದ್ದು, ಈಗಲೂ ಗುಲಾಮಗಿರಿ ಹೆಸರು ಇಟ್ಟುಕೊಳ್ಳುವುದು ಅವಮಾನ. ಬ್ರಿಟಿಷ್, ಮುಸ್ಲಿಂ, ಕ್ರಿಶ್ಚಿಯನ್ ರಾಜರ ಹೆಸರುಗಳಿರುವುದು ಸರಿಯಲ್ಲ, ‘ರಿಪಬ್ಲಿಕ್ ಆಫ್ ಭಾರತ’ ಎನ್ನುವ ಹೆಸರು ಸ್ವಾಗತಾರ್ಹ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಸಿಕ್ಕಾಗಲೇ ಬದಲಾವಣೆ ಆಗಬೇಕು ಅಂತಾ ಎಲ್ಲರ ಮನಸ್ಸಿನಲ್ಲಿತ್ತು. ಆದರೆ ಮಾಡಲಿಲ್ಲ, ರಿಪಬ್ಲಿಕ್ ಆಫ್ ಇಂಡಿಯಾ ಅನ್ನೋದು ಗುಲಾಮಗಿರಿಯ ಹೆಸರು. ಸ್ವಾತಂತ್ರ್ಯ ಸ್ವಾಭಿಮಾನದ ಹೆಸರು ರಿಪಬ್ಲಿಕ್ ಆಫ್ ಭಾರತ. ರಾಷ್ಟ್ರಪತಿಗಳ ಪತ್ರದಲ್ಲಿ ಬದಲಾವಣೆಯಾಗಿದ್ದು ಸ್ವಾಗತಾರ್ಹವಾಗಿದೆ. ಇದರಿಂದಾಗಿ ಭಾರತೀಯರಿಗೆ ಆನಂದವಾಗಿದೆ. ಮೋದಿಯವರು ಪ್ರಧಾನಿಯಾದಾಗಿನಿಂದ ಸಾಕಷ್ಟು ಹೆಸರು ಬದಲಾಗಿವೆ. ಗುಲಾಮಗಿರಿಯ ಹೆಸರು ತೆಗೆದು ಭಾರತದ ಸ್ವಾಭಿಮಾನದ ಹೆಸರು ಇಟ್ಟಿದ್ದಾರೆ. ಇದನ್ನು ವಿರೋಧ ಮಾಡೋದು ನೀಚತನ, ದ್ರೋಹತನ ಎಂದರೆ ತಪ್ಪಾಗಲಾರದು. ಕೆಲವೊಂದಿಷ್ಟಾದರೂ ಸ್ವಾಗತ ಮಾಡಬೇಕು. ರಾಜಕೀಯ ಪಕ್ಕಕ್ಕಿಟ್ಟು ಯೋಚಿಸಿ ಎಂದು ವಿರೋಧಿಸುವವರನ್ನು ಕಟುವಾಗಿ ಟೀಕಿಸಿದರು.
ಉದಯನಿಧಿ ಇನ್ನೂ ಬಚ್ಚಾ, ಕಣ್ಣು ತೆರೆದು ಜಗತ್ತು ನೋಡಿಲ್ಲ: ಮುತಾಲಿಕ್
"ಇಂಡಿಯಾ’’ ಹೆಸರಲ್ಲಿ ವಿಪಕ್ಷಗಳು ಒಟ್ಟಾಗಿವೆ. ಆದರೆ ಭಾರತ ಹೆಸರು ಇಡೋದಕ್ಕೆ, ಅದಕ್ಕೆ ಸಂಬಂಧ ಇಲ್ಲ, ಗಾಂಧಿ ವಂಶದ ಹೆಸರಲ್ಲೇ 300 ಪ್ರೊಜೆಕ್ಟ್‌ಗಳಿವೆ. ಇದನ್ಯಾರು ಪ್ರಶ್ನಿಸುವಂತಿಲ್ಲ. ಇದು ಇಂಡಿಯಾಗೆ ವಿರುದ್ಧವಾಗಿ ಭಾರತ ಅಲ್ಲ. ಭಾರತ ಹೆಸರು ಸ್ವಾಭಿಮಾನದ, ಆನಂದದ ಸಂಗತಿ. ಇದನ್ನು ಶ್ರೀರಾಮ ಸೇನೆ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತದೆ ಎಂದರು.
ಹಿಂದೂ ವಿರೋಧಿ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಕುರಿತ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ಎಲ್ಲ ಧರ್ಮಗಳು ಒಂದೇ, ಧರ್ಮಗಳ ಅವಮಾನ ಮಾಡಬಾರದು ಎಂದು ಸಂವಿಧಾನದಲ್ಲಿದೆ. ಸಾಂವಿಧಾನಿಕವಾಗಿ ಗೆದ್ದು ಬಂದಿರುವ ಉದಯನಿಧಿ ಸಂಪ್ರದಾಯ, ಹಿಂದೂ ಧರ್ಮ ವಿರೋಧಿಸುತ್ತಾ ಬಂದಿದ್ದಾರೆ. ಉದಯನಿಧಿ ವಿರುದ್ಧ ಶ್ರೀರಾಮಸೇನೆ ಮೂರು ಕಡೆಗೆ ಕೇಸ್ ದಾಖಲಿಸುತ್ತದೆ. ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್‌ನಲ್ಲಿ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದೆ, ಸಧ್ಯದಲ್ಲಿಯೇ ಅದು ಪೂರ್ಣಗೊಳ್ಳಲಿದೆ ಎಂದರು.