Karnataka Politics: ಅರಾಜಕತೆ ಸೃಷ್ಟಿಸುವುದು ಕೈ ಜಾಯಮಾನ: ಕಟೀಲ್
* ಕಾರ್ಯಕರ್ತರ ಸಮಾವೇಶದಲ್ಲಿ ನಳಿನಕುಮಾರ ಕಟೀಲ್ ಆರೋಪ
* ಹುಬ್ಬಳ್ಳಿ ಗಲಭೆ ಡಿ.ಜೆ. ಹಳ್ಳಿ-ಕೆ.ಜಿ. ಹಳ್ಳಿಯ ಮುಂದುವರಿದ ಭಾಗ
* ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ
ಹುಬ್ಬಳ್ಳಿ(ಏ.27): ಬಿಜೆಪಿಯ ವಿಜಯಯಾತ್ರೆಗಳಿಗೆ ಹೆದರಿ, ಸೋಲಿನ ಭಯ, ಅಧಿಕಾರ ಇಲ್ಲದಿದ್ದಾಗ ಕಾಂಗ್ರೆಸ್ ಅರಾಜಕತೆ ಸೃಷ್ಟಿಸುತ್ತಿದೆ. ಹುಬ್ಬಳ್ಳಿಯಲ್ಲಿ ನಡೆದಿರುವ ಗಲಭೆಯೂ ಅದರದೇ ಒಂದು ಭಾಗ. ಇದು ಕಾಂಗ್ರೆಸ್ ಜಾಯಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಆರೋಪಿಸಿದರು. ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ನಡೆದ ಬಿಜೆಪಿ(BJP) ಪ್ರಮುಖರ ಸಭೆ ಬಳಿಕ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಪಂಚರಾಜ್ಯ ಚುನಾವಣೆ, ಗ್ರಾಪಂ ಚುನಾವಣೆ ಹೀಗೆ ಸಾಲು ಸಾಲು ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತಿರುವುದು ಕಾಂಗ್ರೆಸ್‌ಗೆ(Congress) ಸಹಿಸಲು ಸಾಧ್ಯವಾಗುತ್ತಿಲ್ಲ. 2023ರಲ್ಲಿ ಕಾಂಗ್ರೆಸ್ ಸೋಲುವುದು ಗ್ಯಾರಂಟಿ. ಈ ರೀತಿ ಅಧಿಕಾರ ಇಲ್ಲದಾಗ ದೇಶ ಹಾಗೂ ರಾಜ್ಯದಲ್ಲಿ ಗೊಂದಲ, ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್ ಜಾಯಮಾನ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ(Hubballi Riots) ಹಿಂದೆ ಕಾಂಗ್ರೆಸ್ ಹಾಗೂ ಎಐಎಂಐಎಂ(AIMIM) ಕಾರ್ಯಕರ್ತರಿದ್ದಾರೆ ಎಂದರು.
Hubballi: ನಿಷ್ಕ್ರೀಯ ಪದಾಧಿಕಾರಿಗಳ ಬದಲಾವಣೆಗೆ ಬಿಜೆಪಿ ಚಿಂತನೆ
ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲೂ ಇದೇ ರೀತಿ ಮಾಡಿದ್ದರು. ಅವರದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚಿದಾಗ ಅವರ ಬೆನ್ನಿಗೆ ನಿಲ್ಲುವ ಗೋಜಿಗೆ ಕಾಂಗ್ರೆಸ್ಸಿಗರು ಹೋಗಲಿಲ್ಲ. ಆದರೆ ಬಿಜೆಪಿ ಮುಖಂಡರು ಮಾತ್ರ ಅಖಂಡ ಶ್ರೀನಿವಾಸ ಅವರ ಮನೆಗೆ ತೆರಳಿ ಧೈರ್ಯ ಹೇಳಿ ಬಂದಿದ್ದಾರೆ ಎಂದು ಹೇಳಿದರು.
ಒಡೆದಾಳುವ ನೀತಿ:
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬರೋಬ್ಬರಿ 27 ಜನ ಹಿಂದೂ ಕಾರ್ಯಕರ್ತರ ಕೊಲೆಯಾದರೂ ಕ್ಯಾರೆ ಎನ್ನಲಿಲ್ಲ. ಒಬ್ಬೇ ಒಬ್ಬ ಹಂತಕನನ್ನು ಬಂಧಿಸುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ಆಗ ಗಲಭೆ ಮಾಡಿದ ಎಸ್‌ಡಿಪಿಐ, ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಕೇಸ್‌ಗಳನ್ನು ಹಿಂಪಡೆದರು. ಮುಸ್ಲಿಮರಿಗೆ ಬೇಡವಾಗಿದ್ದ ಟಿಪ್ಪು ಸುಲ್ತಾನ ಜಯಂತಿ ಆಚರಣೆ ಮಾಡುವ ಮೂಲಕ ಮತಿಯ ಗಲಭೆಗೆ ಕುಮ್ಮಕ್ಕು ನೀಡಿದರು. ಈ ರೀತಿ ಧರ್ಮಗಳ ನಡುವೆ ಒಡೆದಾಳುವ ನೀತಿ ಕಾಂಗ್ರೆಸ್ಸಿನದು. ಅತಿ ಹೆಚ್ಚು ಕೋಮುಗಲಭೆಗಳಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ ಎಂದರು.
ಕಾಂಗ್ರೆಸ್ ಆಡಳಿತ ನಡೆಸಿದ 60 ವರ್ಷದಲ್ಲಿ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ(Corruption) ಮಾಡಿದ್ದೇ ಸಾಧನೆ. ದೆಹಲಿ, ಮುಂಬೈಗಳಲ್ಲಿ ಸರಣಿ ಬಾಂಬ್ ಸ್ಫೋಟ ಆದಾಗ ಕಾಂಗ್ರೆಸ್ ಆಡಳಿತದಲ್ಲಿತ್ತು. ದಾವುದ್ ದೇಶ ಬಿಟ್ಟು ಹೋಗುವಾಗ ಕಾಂಗ್ರೆಸ್ ಆಡಳಿತದಲ್ಲಿತ್ತು. ಭಯೋತ್ಪಾದನೆ ಹಾಗೂ ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್ ಎಂದು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಪರ್ಸಂಟೇಸ್ ಜಾಸ್ತಿಯಿತ್ತು. ಇದನ್ನು ನಾನು ಹೇಳುತ್ತಿರುವುದಲ್ಲ. ಇಷ್ಟುದಿನ ಅವರೊಂದಿಗೆ ಇದ್ದ ಸಿ.ಎಂ. ಇಬ್ರಾಹಿಂ ಹೇಳಿರುವ ಮಾತಿದು. ಇದೀಗ ಕಾಂಗ್ರೆಸ್ ಅಧಿಕಾರವಿಲ್ಲದೇ ಚಡಪಡಿಸುತ್ತಿದೆ ಎಂದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದ ಪೈಕಿ ಲಾಲ್ ಬಹದ್ದೂರು ಶಾಸ್ತ್ರಿ ಹೊರತುಪಡಿಸಿ ಪ್ರತಿಯೊಬ್ಬರು ಭ್ರಷ್ಟಾಚಾರ ಮಾಡಿದವರೇ. ಬಳಿಕ ಬಿಜೆಪಿಯ ಅಟಲ್‌ಜಿ, ಈಗಿನ ಮೋದಿ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡಿದೆ ಎಂದರು.
ಕಾಂಗ್ರೆಸ್ ಮುಕ್ತ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಏಕೆಂದರೆ ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಎಂದರೆ ಕಾಂಗ್ರೆಸ್. ಇದರ ಒಳಾರ್ಥ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದು ಎಂಬುದು ಎಂದು ವ್ಯಾಖ್ಯಾನಿಸಿದರು. 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಅದು ಕೂಡ 150+ ಸ್ಥಾನಗಳನ್ನು ಗೆದ್ದು ಸ್ಥಿರವಾದ ಸರ್ಕಾರ ನೀಡುತ್ತೇವೆ ಎಂದರು.
ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, 2023ರ ವಿಧಾನಸಭೆ ಚುನಾವಣೆ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ದಿಕ್ಸೂಚಿ. ಅದಕ್ಕಾಗಿ ಎಲ್ಲರೂ ಪಕ್ಷವನ್ನು ಗೆಲ್ಲಿಸಲು ಪಣತೊಡಬೇಕು ಎಂದು ಕರೆ ನೀಡಿದರು.
ಕೋವಿಡ್ 4ನೇ ಅಲೆ ಭೀತಿ: ಕರ್ನಾಟಕದಲ್ಲಿ ಮತ್ತೆ ಟಫ್ ರೂಲ್ಸ್?, ಸಿಎಂ ಹೇಳಿದ್ದಿಷ್ಟು
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ(Jagadish Shettar) ಮಾತನಾಡಿ, ಕಾಂಗ್ರೆಸ್‌ಗೆ ಪ್ರಶಾಂತ ಕಿಶೋರ್ ತಂತ್ರಗಾರಿಕೆಗಾಗಿ ಬರುತ್ತಾರೆ ಎಂದು ಹೇಳುತ್ತಾರೆ. ಆದರೆ ಇಂತಹ ಪ್ರಶಾಂತ ಕಿಶೋರಗಳು ಬಂದರೂ ನಮ್ಮ ಕಾರ್ಯಕರ್ತರ ಮುಂದೆ ನಿಲ್ಲುವುದಿಲ್ಲ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ. ಡಿಕೆ ಮಾಡಿದರೆ ಸಿದ್ದು ಔಟ್, ಸಿದ್ದು ಹೆಸರು ಘೋಷಿಸಿದರೆ ಡಿಕೆ ಔಟ್ ಎಂಬಂತಹ ಸ್ಥಿತಿ ಕಾಂಗ್ರೆಸ್ಸಿನದ್ದು ಎಂದರು. 2023ರಲ್ಲಿ ಕಾಂಗ್ರೆಸ್‌ನ ಅಂತಿಮ ಯಾತ್ರೆ ನಡೆಯಲಿದೆ. ಅದರ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ರಾಜ್ಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ತುಳಸಿ ಮುನಿರಾಜಗೌಡ, ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ, ಶಾಸಕ ಅರವಿಂದ ಬೆಲ್ಲದ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ವಿಪ ಸದಸ್ಯ ಪ್ರದೀಪ ಶೆಟ್ಟರ, ಮುಖಂಡರಾದ ಲಿಂಗರಾಜ ಪಾಟೀಲ, ನಾರಾಯಣ ಜರತಾರಘರ, ಎಂ. ರಾಜೇಂದ್ರ, ಭಾರತಿ ಮಗದುಂ, ಸಂಜಯ ಕಪಟಕರ, ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟಿ, ಪ್ರಭು ನವಲಗುಂದ ಮಠ, ಸಂತೋಷ ಚವ್ಹಾಣ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಗರಗ ಮತ್ತಿತರರು ಇದ್ದರು.