Asianet Suvarna News Asianet Suvarna News

ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯ ಪಿನ್ ಟು ಪಿನ್ ಮಾಹಿತಿ

* ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಚಿವ ಸಭೆ ಅಂತ್ಯ
*  ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ಚರ್ಚೆ
* ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ ಕಟೀಲ್

Nalin Kumar kateel Reacts after Minister Meeting With Arun Singh rbj
Author
Bengaluru, First Published Jun 16, 2021, 9:38 PM IST

ಬೆಂಗಳೂರು, (ಜೂನ್.16): ನಾಯಕತ್ವ ಬದಲಾವಣೆ ಕೂಗು ಬಲವಾಗಿ ಕೇಳಿಬರುತ್ತಿರುವುದರಿಂದ ರಾಜ್ಯಕ್ಕೆ ಆಗಮಿಸಿರುವ ಉಸ್ತುವಾರಿ ಅರುಣ್ ಸಿಂಗ್ ಇಂದು (ಬುಧವಾರ) ಸಚಿವರ ಸಭೆ ನಡೆಸಿದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಅಂತ್ಯವಾಗಿದ್ದು, ಸಚಿವರ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಇನ್ನು ಈ ಸಭೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು,  ಜನರಿಗೆ ಉತ್ತಮ ಆಡಳಿತ ನೀಡುವುದು ಹೇಗೆ, ಸರ್ಕಾರದ ಆಡಳಿತವನ್ನು ತಳಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ ಎಂಬುದರ ಕುರಿತು ಇಂದಿನ ನನ್ನ ಭೇಟಿಯ ಮೊದಲ ದಿನದ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸ್ಪಷ್ಟಪಡಿಸಿದರು.

ಬೆಂಗ್ಳೂರು ವಿಮಾನ ನಿಲ್ದಾಣದಲ್ಲಿ ಯೋಗೇಶ್ವರ್ ಲ್ಯಾಂಡಿಂಗ್, ಸಂಚಲನ ಮೂಡಿಸಿದ ಸೈನಿಕನ ನಡೆ

ಕೇಂದ್ರ ಸರ್ಕಾರದ ಯೋಜನೆಗಳನ್ನು ಜಿಲ್ಲೆ, ತಾಲ್ಲೂಕು, ಗ್ರಾಮ ಮಟ್ಟಗಳವರೆಗೆ ಹೇಗೆ ಜನರಿಗೆ ತಲುಪಿಸಬೇಕು, ಪ್ರಚಾರ ಮಾಡಬೇಕು, ಸಚಿವರು, ಶಾಸಕರು ಹೇಗೆ ಒಗ್ಗೂಡಿ ಕೆಲಸ ಮಾಡಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು. ಜನರಿಗೆ ಜನಪ್ರತಿನಿಧಿಗಳು ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಚರ್ಚೆಯ ಅಜೆಂಡಾವಾಗಿತ್ತು ಎಂದು ಹೇಳಿದರು.

ಪಕ್ಷದೊಳಗೆ ಯಾರಿಗೆ ಭಿನ್ನಾಭಿಪ್ರಾಯ, ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳು, ಶಾಸಕರ ಬಳಿ ಹೇಳಿಕೊಳ್ಳಬೇಕೆ ಹೊರತು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ ಎಂದು ಸೂಚನೆ ನೀಡಿದ್ದೇನೆ, ತಮ್ಮ ಹೇಳಿಕೆಯಿಂದ ಪಕ್ಷಕ್ಕೆ, ಪಕ್ಷದ ನಾಯಕರಿಗೆ ಮುಜುಗರವಾಗಬಹುದೇ ಎಂದು ಯೋಚಿಸಬೇಕು ಎಂದು ಪುನರುಚ್ಛರಿಸಿದರು.

ಇಂದು ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ನಮ್ಮ ರಾಜ್ಯದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ವರದಿಗಳನ್ನು ನೀಡಿ ಸಂಘಟನೆ ಬಗ್ಗೆ ಕೂಡ ಮಾಹಿತಿ ನೀಡಿದ್ದೇವೆ. ಸರ್ಕಾರ ಮತ್ತು ಸಂಘಟನೆ ಎರಡೂ ಕೂಡ ಚೆನ್ನಾಗಿ ಕೆಲಸ ಮಾಡಿದೆ ಎಂದು ಅರುಣ್ ಸಿಂಗ್ ಅವರು ಮೆಚ್ಚುಗೆ ಸೂಚಿಸಿದ್ದಾರೆ ಎಂದರು.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು: ಮುಂದಿನ ದಿನಗಳಲ್ಲಿ ಮಂತ್ರಿಗಳು ಪ್ರತಿ ವಾರ ತಮ್ಮ ಕಾರ್ಯಾಲಯದಲ್ಲಿ ಇರಬೇಕು, ಶಾಸಕರು, ಸಾರ್ವಜನಿಕರು ಮತ್ತು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಬೇಕು. ಪ್ರವಾಸಗಳನ್ನು ಮಾಡಿದಾಗ ಜಿಲ್ಲೆಯಲ್ಲಿ ಶಾಸಕರನ್ನಿಟ್ಟುಕೊಂಡು ಅಧಿಕಾರಿಗಳ ಸಭೆಗಳನ್ನು ಮಾಡಬೇಕು. ಪಕ್ಷದ ಕಾರ್ಯಕರ್ತರ ಜೊತೆ ಅಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರಕ್ಕೆ ಯತ್ನಿಸಬೇಕು ಎಂದು ವಿವರಿಸಿದರು.

ಎರಡು ತಿಂಗಳಿಗೊಮ್ಮೆ ಮಂತ್ರಿಗಳ ಕಾರ್ಯಾಲಯದಲ್ಲಿ ಕಾರ್ಯವೈಖರಿ, ಅವರವರ ಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕು. ಇವತ್ತು ರಾಜ್ಯದಲ್ಲಿ ಹತ್ತಾರು ಒಳ್ಳೆಯ ಯೋಜನೆಗಳನ್ನು ಸರ್ಕಾರ ತಂದಿದ್ದರೂ ಅವುಗಳಿಗೆ ಸೂಕ್ತ ಪ್ರಚಾರ ಸಿಕ್ಕಿಲ್ಲ, ಅವುಗಳಿಗೆ ಪ್ರಚಾರ ನೀಡಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕೆಂದು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಂದಿನ ಸಭೆಯಲ್ಲಿ ಬಂದಿಲ್ಲ ಎಂದು ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದರು.

Follow Us:
Download App:
  • android
  • ios