ಬೆಂಗಳೂರು (ಮೇ. 28): ಈಗಿನ ಪರಿಸ್ಥಿತಿಯಲ್ಲಿ ಬಹಳ ದಿನಗಳವರೆಗೆ ಯಡಿಯೂರಪ್ಪ ಅವರ ನಾಯಕತ್ವ ಮುಂದುವರೆಸಲು ಆಗುವುದಿಲ್ಲ, ಅವರಿಗೆ ವಯಸ್ಸು 80ರ ಅಂಚಿಗೆ ಬರುತ್ತಿದೆ, ಮತ್ತು 2023ರ ಚುನಾವಣೆಗೆ ಹೊಸ ನಾಯಕತ್ವ ಬೇಕು ಎನ್ನುವ ಚಿಂತನೆ ಬಿಜೆಪಿ ಹೈಕಮಾಂಡ್‌ ಮತ್ತು ಆರ್‌ಎಸ್‌ಎಸ್‌ನಲ್ಲಿ ಇದೆ ಎಂಬ ಮಾತುಗಳಿವೆ. ಆದರೆ ನಾಯಕತ್ವ ಬದಲಾವಣೆ ಮಾಡುವುದಾದರೆ ಹೇಗೆ, ಯಾರು ಅವರ ಜಾಗಕ್ಕೆ ಬರುವವರು, ಇದಕ್ಕೆ ಯಡಿಯೂರಪ್ಪ ಪ್ರತಿಕ್ರಿಯೆ ಏನು ಇವೆಲ್ಲ ಮುಂದೆ ನಿರ್ಧಾರ ಆಗಬೇಕಾದ ವಿಷಯಗಳು.

ಸದ್ಯಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ ಮತ್ತು ಸಿ.ಪಿ.ಯೋಗೇಶ್ವರ್‌ ಪದೇ ಪದೇ ದಿಲ್ಲಿಗೆ ಹೋಗಿ ಬರುತ್ತಿದ್ದಾರೆ. ದಿಲ್ಲಿಯಿಂದ ವೀಕ್ಷಕರನ್ನು ಕರೆಸಿ ಶಾಸಕಾಂಗ ಪಕ್ಷದ ಸಭೆ ಕರೆಸಲು ಶಾಸಕರ ಸಹಿ ಸಂಗ್ರಹಕ್ಕೆ ಕೂಡ ಪ್ರಯತ್ನ ನಡೆಸಿದ್ದಾರೆ. ಆದರೆ ಹೈಕಮಾಂಡ್‌ ಮೂಲಗಳು ಹೇಳುವ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅನುಮತಿ ದೊರೆತು ಒಂದು ವೇಳೆ ನಿರ್ಧಾರ ತೆಗೆದುಕೊಳ್ಳುವುದೇ ಆದಲ್ಲಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಮತ್ತು ಸಂಘದ ಸಹ ಸರಕಾರ್ಯವಾಹ ಮುಕುಂದ ಅವರು ನೇರವಾಗಿ ಯಡಿಯೂರಪ್ಪ ಜೊತೆ ಮಾತನಾಡುತ್ತಾರೆ. ಆ ಮಾತುಕತೆಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪಿಸುತ್ತಾರೆಯೇ ಹೊರತು, ಯಾವುದೇ ಹಾದಿ ಬೀದಿ ರಂಪಕ್ಕೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಲಾಗುತ್ತಿದೆ.

ನಾಯಕತ್ವ ಬದಲಾವಣೆ ಅಂತೆ- ಕಂತೆ, ಬಿಎಸ್‌ವೈಗೆ ಪರ್ಯಾಯ ನಾಯಕ ಯಾರು?

ವಯಸ್ಸಿನ ಕಾರಣದಿಂದ ಹೊಸ ತಲೆಮಾರಿಗೆ ಅಧಿ​ಕಾರ ವರ್ಗಾವಣೆ ಆಗಿ ಮುಂದಿನ ಚುನಾವಣೆ ಎದುರಿಸಬೇಕು. ಯಡಿಯೂರಪ್ಪ ಅವರನ್ನು ಗೌರವ ಪೂರ್ವಕವಾಗಿ ನಡೆಸಿಕೊಳ್ಳಬೇಕು ಎಂಬ ಚಿಂತನೆ ದಿಲ್ಲಿ ಅಂಗಳದಲ್ಲಿದೆಯೇ ಹೊರತು, ಬಣಗಳ ತಿಕ್ಕಾಟಕ್ಕೆ, ಶಕ್ತಿ ಪ್ರದರ್ಶನಕ್ಕೆ ಅವಕಾಶ ಇಲ್ಲ ಎಂದು ಹೈಕಮಾಂಡ್‌ ಮೂಲಗಳು ಹೇಳುತ್ತಿವೆ. ಆದರೆ ನಾಯಕತ್ವ ಬದಲಾವಣೆ ಹೇಗೆ ಮತ್ತು ಯಾವಾಗ ಎಂಬ ಪ್ರಶ್ನೆಗೆ ಸಂಘದ ನಾಯಕರು ಮತ್ತು ದಿಲ್ಲಿ ಮೂಲಗಳ ಬಳಿ ಇನ್ನೂ ಖಚಿತ ಉತ್ತರವಿಲ್ಲ. ಕಳೆದ 7 ವರ್ಷಗಳಲ್ಲಿ ಮೋದಿ ಕಾಲದಲ್ಲಿ ಬಿಜೆಪಿ 3 ಮುಖ್ಯಮಂತ್ರಿಗಳನ್ನು ಬದಲಾಯಿಸಿದೆ.

ಮೊದಲನೆಯವರು ಗುಜರಾತಿನ ಆನಂದಿ ಬೆನ್‌ ಪಟೇಲ್‌, ಉತ್ತರಾಖಂಡದ ತ್ರಿವೇಂದ್ರ ಸಿಂಗ್‌ ರಾವತ್‌ ಮತ್ತು ಅಸ್ಸಾಂನ ಸರಬಾನಂದ ಸೋನಾವಾಲ್‌. ಈ ಮೂರು ಬದಲಾವಣೆಗಳು ಒಂದು ಚಿಟಿಕೆಯಲ್ಲಿ ಮುಗಿದುಹೋಗಿವೆ. ಆದರೆ ಈ ಮೂವರು ಅದಕ್ಕೂ ಮೊದಲು ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದೇ ಹೈಕಮಾಂಡ್‌ನಿಂದ. ಅಂದರೆ ಇವರು ಹೈಕಮಾಂಡ್‌ನದೇ ಆಯ್ಕೆಯಾಗಿದ್ದರೇ ಹೊರತು ಯಡಿಯೂರಪ್ಪನವರ ತರಹ ಮಾಸ್‌ ಲೀಡರ್‌ ಆಗಿರಲಿಲ್ಲ ಎಂಬುದು ಪ್ರಮುಖ ವ್ಯತ್ಯಾಸ. ಹೀಗಾಗಿ ಕರ್ನಾಟಕದ ಕ್ಲೈಮ್ಯಾಕ್ಸ್‌ನಲ್ಲಿ ಕುತೂಹಲ ಹೆಚ್ಚು.

‘ಮಾಸ್‌’ ಲೀಡರನ್ನು ತೆಗೆದಿದ್ದಾಗ

ಇಲ್ಲಿಯವರೆಗೆ ಬಿಜೆಪಿಯ ಇತಿಹಾಸದಲ್ಲಿ ಯಡಿಯೂರಪ್ಪನವರೂ ಸೇರಿದಂತೆ ಐವರು ಜನನಾಯಕರನ್ನು ಬಿಜೆಪಿ ಹೈಕಮಾಂಡ್‌ ಬದಲಾಯಿಸಿದೆ. ಅದರಲ್ಲಿ ಉತ್ತರ ಪ್ರದೇಶದಲ್ಲಿ ಕಲ್ಯಾಣ ಸಿಂಗ್‌, ಮಧ್ಯ ಪ್ರದೇಶದಲ್ಲಿ ಉಮಾಭಾರತಿ, ದಿಲ್ಲಿಯಲ್ಲಿ ಮದನ್‌ಲಾಲ್‌ ಖುರಾನಾ, ಗುಜರಾತ್‌ನಲ್ಲಿ ಕೇಶುಭಾಯಿ ಪಟೇಲ್‌ ಮತ್ತು 2011ರಲ್ಲಿ ಯಡಿಯೂರಪ್ಪ. ಅದರಲ್ಲಿ ಗುಜರಾತ್‌ನಲ್ಲಿ ಕೇಶುಭಾಯಿ ಬದಲಿಗೆ ನರೇಂದ್ರ ಮೋದಿ ಮತ್ತು ಉಮಾ ಭಾರತಿ ಬದಲಿಗೆ ಶಿವರಾಜ್‌ ಸಿಂಗ್‌ ಚೌಹಾಣ್‌ರಿಗೆ ಮಾತ್ರ ಜನನಾಯಕರನ್ನು ಬದಲಿಸಿ ಕೂಡ ಅಧಿ​ಕಾರ ಉಳಿಸಿಕೊಳ್ಳಲು ಸಾಧ್ಯ ಆಯಿತು. ಆದರೆ ದಿಲ್ಲಿಯಲ್ಲಿ 1998ರಲ್ಲಿ ಹೋದ ಅ​ಧಿಕಾರ 23 ವರ್ಷ ಆದರೂ ಇನ್ನೂ ಬಂದಿಲ್ಲ.

ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?

ಯುಪಿಯಲ್ಲಿ ಕಲ್ಯಾಣ ಸಿಂಗ್‌ರನ್ನು ತೆಗೆದು ಮೊದಲಿಗೆ ರಾಮ ಪ್ರಕಾಶ್‌ ಗುಪ್ತಾ, ರಾಜನಾಥ್‌ ಸಿಂಗ್‌ರನ್ನು ತಂದರೂ ಉಪಯೋಗ ಆಗಲಿಲ್ಲ. ಇನ್ನು ಕರ್ನಾಟಕದಲ್ಲಿ ಯಡಿಯೂರಪ್ಪ ಹೊರಗೆ ಹೋದಾಗ ಹೋದ ಅಧಿ​ಕಾರ ಮತ್ತೆ ಅವರ ಜೊತೆಯೇ ವಾಪಸ್‌ ಬಂತು. ಅರ್ಥ ಸ್ಪಷ್ಟ, ಜನನಾಯಕರನ್ನು ನಾನಾ ಕಾರಣ ನೀಡಿ ಕೆಳಗಿಳಿಸುವುದೇನೋ ಸರಿ, ಆದರೆ ಸಮರ್ಥರನ್ನು ತರುವುದೂ ಅಷ್ಟೇ ಮುಖ್ಯ. ಯಾವುದೇ ರಾಷ್ಟ್ರೀಯ ಪಕ್ಷದಲ್ಲಿ ಎರಡು ತರಹದ ನಾಯಕರು ಇರುತ್ತಾರೆ. ಒಬ್ಬರು ಉದ್ಭವ ಮೂರ್ತಿ, ಇನ್ನೊಬ್ಬರು ಕೆತ್ತಿದ ಮೂರ್ತಿ. ಸ್ವಯಂಭೂ ಮೂರ್ತಿಯನ್ನು ನಾನಾ ಕಾರಣದಿಂದ ತೆಗೆಯಬೇಕಾದರೆ ಕನಿಷ್ಠ ಪಕ್ಷ ಒಂದು ಒಳ್ಳೆಯ ಕೆತ್ತಿದ ಮೂರ್ತಿ ಆದರೂ ಇಡಬೇಕು. ಇಲ್ಲವಾದಲ್ಲಿ ದೇವಸ್ಥಾನ ಪಾಳು ಬೀಳಬಹುದು.

ಅರಸು ಕಾಲದಲ್ಲಿ ಏನಾಗಿತ್ತು?

ಕರ್ನಾಟಕದ ರಾಜಕಾರಣದಲ್ಲಿ ಪ್ರಬಲ ಹೈಕಮಾಂಡ್‌ ವಿರುದ್ಧ ಗುಟುರು ಹಾಕಿದ್ದು ಮೊದಲಿಗೆ ನಿಜಲಿಂಗಪ್ಪನವರು ಹೌದಾದರೂ, ಇಂದಿರಾ ಗಾಂಧಿ​ ಜೊತೆಗಿನ ಗುದ್ದಾಟದಲ್ಲಿ ಅಧಿ​ಕಾರ ಕಳೆದುಕೊಂಡಿದ್ದು, ಸ್ವಂತ ಶಕ್ತಿ ಮೇಲೆ ಎರಡು ಚುನಾವಣೆ ಗೆದ್ದಿದ್ದು ದೇವರಾಜ್‌ ಅರಸ್‌ ಮಾತ್ರ. 1977ರಲ್ಲಿ ರಾಯ್‌ಬರೇಲಿಯಲ್ಲಿ ಸೋತಿದ್ದ ಇಂದಿರಾ ಗಾಂಧಿ​ಗೆ 1978ರಲ್ಲಿ ಚಿಕ್ಕಮಗಳೂರಲ್ಲಿ ಗೆಲ್ಲಿಸಿ ಪುನರ್ಜನ್ಮ ಕೊಟ್ಟಿದ್ದೂ ಅರಸು ಅವರೇ. ಆದರೆ ಯಾವಾಗ ಸಂಜಯ್‌ ಗಾಂ​ಧಿ ಸಕ್ರಿಯರಾಗತೊಡಗಿದರೋ ಆಗ ಅರಸು ಮತ್ತು ಇಂದಿರಾ ಸಂಬಂಧ ಹಾಳಾಗತೊಡಗಿತು.

2ನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ದೇವರಾಜ್‌ ಅರಸರಿಗೆ ನಾನೇ ರಾಷ್ಟ್ರೀಯ ನಾಯಕ ಆಗಬಹುದು ಎಂಬ ಯೋಚನೆ ಬರುವುದಕ್ಕೂ, ಸಂಜಯ್‌ ಗಾಂಧಿ​ ಹೇಳಿದ ಕೆಲಸಗಳನ್ನು ಮಾಡಲು ನಿರಾಕರಿಸಿದ್ದಕ್ಕೂ ತಾಳೆಯಾಗಿತ್ತು. ನೋಡನೋಡುತ್ತಲೇ ಸಂಜಯ್‌ ಗಾಂಧಿ​ಗೆ ಆಪ್ತರಾದ ಗುಂಡೂರಾಯರು, ಎಫ್‌.ಎಂ.ಖಾನ್‌ ಬಂಡೆದ್ದರು. ಪಕ್ಷ ಇಬ್ಭಾಗವಾಗಿ 1980ರ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ರಾತ್ರೋರಾತ್ರಿ ಎಚ್‌.ಸಿ.ಶ್ರೀಕಂಠಯ್ಯ ನೇತೃತ್ವದಲ್ಲಿ 90 ಶಾಸಕರು ಗುಂಡೂರಾಯರ ಕಡೆ ಹೋಗುವುದರೊಂದಿಗೆ ರಾಜ್ಯ ಕಂಡ ಅತ್ಯಂತ ಸಣ್ಣ ಸಮುದಾಯದಿಂದ ಬಂದ ಜನನಾಯಕನ ರಾಜಕೀಯ ದುರಂತ ಅಂತ್ಯವಾಗಿತ್ತು. ಜೊತೆಗೆ 3 ವರ್ಷದ ನಂತರ 1983ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಅಧಿ​ಕಾರ ಕಳೆದುಕೊಂಡಿತು.

ಪಾಟೀಲರನ್ನು ತೆಗೆದಾಗ ಏನಾಗಿತ್ತು?

1989ರಲ್ಲಿ 170ಕ್ಕೂ ಹೆಚ್ಚು ಶಾಸಕರು ಗೆಲ್ಲುವುದರೊಂದಿಗೆ ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲರು ಸಾರಾಯಿ ಮಾಫಿಯಾ ಮತ್ತು ರಿಯಲ್‌ ಎಸ್ಟೇಟ್‌ ಮಾಫಿಯಾ ವಿರುದ್ಧ ಹೋರಾಟ ಆರಂಭಿಸಿದ್ದರು. ಆಗ ಅಧಿ​ಕಾರ ಕಳೆದುಕೊಂಡಿದ್ದ ರಾಜೀವ್‌ ಗಾಂ​ಧಿ, ಪಾಟೀಲರನ್ನು ಚೆನ್ನೈಗೆ ಕರೆಸಿಕೊಂಡು ಪಕ್ಷ ನಡೆಸಲು ದುಡ್ಡು ಕೊಡಿ ಎಂದಿದ್ದರಂತೆ. ಅದಕ್ಕೆ ಪಾಟೀಲರು, ‘ನೀವು ಕೇಳಿದ್ದು ಕೊಡಲು ಆಗೋದಿಲ್ಲ’ ಎಂದು ಬೆಂಗಳೂರಿಗೆ ಬಂದ ಮರುದಿನವೇ ಪಾಶ್ರ್ವವಾಯು ಪೀಡಿತರಾದರು. ಅವರನ್ನು ನೋಡಲೆಂದು ಬೆಂಗಳೂರಿಗೆ ಬಂದ ರಾಜೀವ್‌ ಗಾಂಧಿ,​ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂದು ಘೋಷಿಸಿ ಹೋದರು. ಆಗ ವೀರೇಂದ್ರ ಪಾಟೀಲ್‌, ‘ನಾನು ರಾಜೀನಾಮೆ ಕೊಡೋದಿಲ್ಲ’ ಎಂದು ಹೇಳಿದರೂ 45 ಲಿಂಗಾಯತರು ಸೇರಿದಂತೆ ಅಷ್ಟೂಶಾಸಕರು ಹೈಕಮಾಂಡ್‌ ಆಶೀರ್ವಾದ ಇದ್ದ ಬಂಗಾರಪ್ಪ ಕಡೆ ಹೋಗಿ ಆಗಿತ್ತು. ಪಾಟೀಲರ ಬಳಿ ಉಳಿದಿದ್ದು ರಾಜಶೇಖರ ಮೂರ್ತಿ ಮತ್ತು ಕೆ.ಎಚ್‌.ರಂಗನಾಥ್‌ ಮಾತ್ರ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ