ಮೈಸೂರು ಲೋಕಸಭೆ ಸೋಲಿಗೆ ಕ್ಯಾಂಡಿಡೇಟ್ ಸರಿ ಇಲ್ಲದ್ದೇ ಕಾರಣ: ಶಾಸಕ ಹರೀಶ್ ಗೌಡ
ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಅಭ್ಯರ್ಥಿ ಆಯ್ಕೆಯೇ ಕಾರಣ ಎಂದು ಶಾಸಕ ಹರೀಶ್ ಗೌಡ ಹೇಳಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಭೇಟಿ ವೇಳೆ ಈ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಮೈಸೂರು (ಅ.08): ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಲು ಲೋಕಸಭಾ ಕ್ಷೇತ್ರದಲ್ಲಿ ಸುಲಭವಾಗಿ ಕಾಂಗ್ರೆಸ್ ಗೆಲ್ಲಬಹುದಿತ್ತು. ಆದರೆ, ಕಾಂಗ್ರೆಸ್ ಕ್ಯಾಂಡಿಡೇಟ್ (ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಂ.ಲಕ್ಷ್ಮಣ್) ಸರಿ ಇಲ್ಲದ ಕಾರಣ ಕಾಂಗ್ರೆಸ್‌ಗೆ ಸೋಲಾಗಿದೆ ಎಂದು ಶಾಸಕ ಹರೀಶ್ ಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಶಾಸಕ ಹರೀಶ್ ಗೌಡ ಅವರ ಮನೆಗೆ ಭೇಟಿ ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಮಾತನಾಡುವಾಗ, ಸತೀಶ್ ಜಾರಕಿಹೊಳಿ ಅವರು ಮೈಸೂರು ಲೋಕಸಭೆ ಚುನಾವಣೆಯನ್ನು ಗೆಲ್ಲಬಹುದಿತ್ತು ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಉತ್ತರಿಸಿದ ಶಾಸಕರಾದ ಹರೀಶ್ ಗೌಡ ಮತ್ತು ರವಿಶಂಕರ್ ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಸರಿ ಇರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡದ್ದ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಕಾಂಗ್ರೆಸ್ ವಕ್ತಾರ ಎಂ. ಲಕ್ಷಣ್ ಸೂಕ್ತವಾದ ಅಭ್ಯರ್ಥಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ಮ ತಂದೆ ಸಿಎಂ ಆಗ್ಬೇಕನ್ನೋದು ಎಲ್ಲರ ಆಸೆ: ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ
ಇನ್ನು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಮನೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ತೂಗುಗತ್ತು ನೇತಾಡುತ್ತಿದ್ದು, ಯಾವಾಗ ಕುರ್ಚಿಯಿಂದ ಬೀಳುತ್ತಾರೋ ಎಂದು ಸ್ವತಃ ಕೆಲವು ಕಾಂಗ್ರೆಸ್ ನಾಯಕರು ಮತ್ತು ವಿಪಕ್ಷಗಳ ನಾಯಕರು ಕಾಯುತ್ತಿದ್ದಾರೆ. ಇಂಥದ್ದರಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಕಾರ್ಯಕರ್ತರು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲಿಯೇ ಸತೀಶ್ ಜಾರಕಿಹೊಳಿ ಅವರ ನಿವಾಸ ಕಾಂಗ್ರೆಸ್ ಪಕ್ಷದ ಪವರ್ ಹೌಸ ಆದಂತಿದೆ. ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಗೆ ತೆರಳಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗುತ್ತಿರುವ ಸತೀಶ್ ಜಾರಕಿಹೊಳಿ ಅವರು, ಶಾಸಕ ಹರೀಶ್ ಗೌಡ ಮನೆಗೆ ಕೆ.ಆರ್. ನಗರ ಶಾಸಕ ಡಿ. ರವಿಶಂಕರ್ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಮರಿಗೌಡ ಅವರೊಂದಿಗೂ ಚರ್ಚೆ ಮಾಡಿದ್ದಾರೆ. ಇದೀಗ ಸತೀಶ್ ಜಾರಕಿಹೊಳಿ ಅವರು ಮೈಸೂರು ಸ್ಥಳೀಯ ನಾಯಕರೊಂದಿಗೆ ಚರ್ಚೆ ಮಾಡಿರುವುದರ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಏನಾದರೂ ಇದೆಯೇ? ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾಗಲಿದೆಯೇ? ಎಂಬ ಅನುಮಾನಗಳು ಕೂಡ ಎದುರಾಗಿವೆ.