ಬೆಂಗಳೂರು, [ನ.03]: ಮಾಜಿ ಸಂಸದ, ಕಾಂಗ್ರೆಸ್ ನಾಯಕ ಸಿ.ಎಚ್. ವಿಜಯ್ ಶಂಕರ್ ನವೆಂಬರ್ 5ರಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

2019ರ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದ ಸಿದ್ದರಾಮಯ್ಯ ಆಪ್ತ ಸಿ.ಎಚ್.ವಿಜಯ್ ಶಂಕರ್ ನವೆಂಬರ್ 5 ರಂದು ಮುಖ್ಯಮಂತ್ರಿಗಳ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಬಿಜೆಪಿಯವರು ಸಂಪರ್ಕ ಮಾಡಿದ್ದಾರೆ: ಕಾಂಗ್ರೆಸ್ ನಾಯಕನ ಮಾತೃ ಪಕ್ಷಕ್ಕೆ ಘರ್ ವಾಪಸಿ ಮಾತು

 ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಜಯ್ ಶಂಕರ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕೃತ ಮೂಲಕಗಳಿಂದ ತಿಳಿದುಬಂದಿದೆ.

1998 ಮತ್ತು 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಬಿಜೆಪಿಯಲ್ಲಿದ್ದರು. ಬಳಿಕ ಬದಲಾದ ರಾಜಕೀಯ ವಿದ್ಯಾಮಾನದಿಂದಾಗಿ  2014 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.  ಇದೀಗ ಮತ್ತೆ  ಘರ್ ವಾಪಸಿಯಾಗಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದ ಟಿಕೇಟ್ ಪಡೆದು ಮೈಸೂರಿನಿಂದ ಕಣಕ್ಕಿಳಿದಿದ್ದ ವಿಜಯ್ ಶಂಕರ್, ಪ್ರತಾಪ್ ಸಿಂಹ ವಿರುದ್ಧ 1.38 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು.