ಬೆಂಗಳೂರು (ಜುಲೈ 24): ವಿರೋಧ ಪಕ್ಷದವರು ರಾಜ್ಯಪಾಲರಿಗೆ ಮಾತ್ರವಲ್ಲ ಯಾರಿಗೆ ಬೇಕಿದ್ದರೂ ಪತ್ರ ಬರೆಯಲಿ. ಅದಕ್ಕೂ ನನಗೂ ಸಂಬಂಧ ಇಲ್ಲ. ಆದರೆ, ವಿಧಾನ ಪರಿಷತ್‌ಗೆ ನನ್ನ ನಾಮ ನಿರ್ದೇಶನ ಕಾನೂನುಬದ್ಧವಾಗಿದೆ ಎಂದು ನೂತನ ವಿಧಾನಪರಿಷತ್ ಸದಸ್ಯ ಎಚ್‌‌. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಸಾಹಿತಿ ಕೋಟಾದ ಅಡಿಯಲ್ಲಿ ಎಚ್. ವಿಶ್ವನಾಥ್ ‌ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಆದರೆ, ಈ ನಾಮ ನಿರ್ದೇಶನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ವಿಶ್ವನಾಥ್‌ ಸಾಹಿತಿ  ಹೇಗಾದರು? ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ.

ವಿಧಾನ ಪರಿಷತ್​​ ನಾಮನಿರ್ದೇಶನ: ಹಳ್ಳಿ ಹಕ್ಕಿಗೆ ಮರು ಜೀವ, ಹಠ ಸಾಧಿಸಿದ ಬಿಎಸ್‌ವೈ 

ಈ ಕುರಿತು ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿರುವ ವಿಶ್ವನಾಥ್‌, ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ. ಆದರೆ, ನನ್ನ ನಾಮ ನಿರ್ದೇಶನದ ಕುರಿತು ತೀರ್ಪು ಓದದೆ ಕೆಲವು ಕಾನೂನು ತಜ್ಞರು ಮಾತನಾಡಿದ್ದಾರೆ. ನನ್ನ ನಾಮ ನಿರ್ದೇಶನ ಕಾನೂನು ಬದ್ದವಾಗಿದೆ. ಅವರು ರಾಜ್ಯಪಾಲರಿಗೆ ಮಾತ್ರವಲ್ಲ ಯಾರಿಗೆ ಬೇಕಿದ್ದರೂ ಪತ್ರ ಬರೆಯಲಿ. ಇದಕ್ಕೂ ನನಗೂ ಸಂಬಂಧ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದರು.

ಎಸ್.ಎಲ್.ಬೈರಪ್ಪ ದೊಡ್ಡ ಸಾಹಿತಿಯೇ. ಅವರಿಗೆ ಸರಸ್ವತಿ ಸಮ್ಮಾನ್ ಸಿಕ್ಕಿದೆ. ಸಾರಸ್ವತ ಲೋಕ ತುಂಬಿದ್ದಾರೆ. ಅಂದಹಾಗೆ, ನಾನೂ ಸಹ ಸಾಹಿತಿಯೇ. ರಾಜಕಾರಣಕ್ಕೆ ಸಂಬಂಧಿಸಿದಂತೆ 8 ಪುಸ್ತಕಗಳನ್ನು ಬರೆದಿದ್ದೇನೆ. ರಾಜತಾಂತ್ರಿಕ ವಿಷಯಗಳನ್ನು ಒಳಗೊಂಡಂತೆ ರಾಜಕಾರಣದ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಹೀಗಾಗಿ ಸಾಹಿತ್ಯ ಕೋಟ ಅಡಿ ನನಗೆ ಈ ಸ್ಥಾನ ಸಿಕ್ಕಿದೆ. ಏನೂ ತಿಳಿಯದೆ ನನ್ನನ್ನು ಆಯ್ಕೆ ಮಾಡುವುದಕ್ಕೆ ಎಜಿ ದಡ್ಡರೇ? ಸರ್ಕಾರಕ್ಕೆ ತಿಳಿಯುವುದಿಲ್ಲವೇ? ಎಂದು ತಮ್ಮ ಆಯ್ಕೆಯನ್ನು ವಿಶ್ವನಾಥ್ ಸಮರ್ಥಿಸಿಕೊಂಡರು.

ಕಲುಷಿತ ರಾಜಕೀಯ ಕ್ಷೇತ್ರ ಇನ್ನಾದರೂ ಶುದ್ಧಿಯಾಗಲು ಅವಕಾಶ ಸಿಕ್ಕಿದೆ. ಇನ್ನು ಆ ಸಾಹಿತ್ಯ ಕ್ಷೇತ್ರ ಏನಾಗುತ್ತೋ ಎಂದು ಸಾಹಿತ್ಯ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆಯಾದ ಎಚ್.ವಿಶ್ವನಾಥ್ ಹೆಸರು ಹೇಳದೆ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.