ಪಂಚಮಸಾಲಿಗೆ ಮೀಸಲಾತಿ ಕೊಟ್ಟರೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ 1 ಕೆ.ಜಿ ಬಂಗಾರ: ಮುರುಗೇಶ್ ನಿರಾಣಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ 1 ಕೆ.ಜಿ. ಬಂಗಾರ ನೀಡಿ ಸನ್ಮಾನ ಮಾಡುವುದಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ ಘೋಷಿಸಿದ್ದಾರೆ.
ಬೆಂಗಳೂರು (ಸೆ.25): ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ 2ಎ ಮೀಸಲಾತಿಯನ್ನು ಕೊಡಿಸಿದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ 1 ಕೆ.ಜಿ. ಬಂಗಾರವನ್ನು ನೀಡಿ ಸನ್ಮಾನ ಮಾಡಲಾಗುವುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು 2ಎ ಮೀಸಲಾತಿ ಮಾಡಿ ಕೊಟ್ರೆ 1 ಕೆ.ಜಿ. ಕುಂದಾ ತಂದು ಸನ್ಮಾನ ಮಾಡೋದಾಗಿ ಹೇಳಿದ್ದರು. ಈಗ ನೀವು ಅಧಿಕಾರದಲ್ಲಿದ್ದೀರಿ. ನಿಮ್ಮ ಸರ್ಕಾರ ಅಧಿಕಾರಿಕ್ಕೆ ಬಂದು ಒಂದೂವರೆ ವರ್ಷ ಆಯ್ತು, ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲಿ. ನೀವೇನಾದರೂ ಪಂಚಮಸಾಲಿ ಸಮುದಾಯಕ್ಕ 2ಎ ಮೀಸಲಾತಿ ಕೊಟ್ಟರೆ ಲಕ್ಷ್ಮಿ ಅವರಿಗೆ 1 ಕೆಜಿ ಬಂಗಾರ ಕೊಟ್ಟು ಸನ್ಮಾನ ಮಾಡುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸವಾಲು ಹಾಕಿದರು.
ನಿನ್ನ ಅಧಿಕಾರ, ಗೌಡಕಿ ದರ್ಪ ನನ್ಮುಂದೆ ಬೇಡ: ಸಚಿವ ಎಂಬಿಪಾಗೆ ನಿರಾಣಿ ತಿರುಗೇಟು
ಇನ್ನು ನಿಮ್ಮ ಕೈಯಲ್ಲಿ ಆಗದಿದ್ದರೆ ಮುಂದಿನ 3 ತಿಂಗಳ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2ಎ ಮೀಸಲಾತಿ ಮಾಡಿಕೊಡ್ತೇವೆ. ನೀವು ಅಧಿಕಾರದಿಂದ ತೊಲಗಿ. ನಾವು ಅಧಿಕಾರದಲ್ಲಿದ್ದಾಗ ಚುನಾವಣೆಯಲ್ಲಿ ಮತ ಓಲೈಕೆ ದೃಷ್ಟಿಯಲ್ಲಿಟ್ಟುಕೊಂಡು ನಾವು ಅಧಿಕಾರಕ್ಕೆ ಬಂದು ಮೀಸಲಾತಿ ಕೊಟ್ಟ ಮೇಲೆ ಒಂದು ಸಮುದಾಯದವರೆಲ್ಲರೂ ಸೇರಿ ಒಂದು ಜೊತೆ ಬಂಗಾರದ ಬಳೆ ಮಾಡಿಸಿಕೊಡಿ ಎಂದಿದ್ರಿ. ಈಗ ನಿಮ್ಮದೇ ಸರ್ಕಾರ ಬಂದಿದೆ, ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲಿ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಒಂದು ಜೊತೆ ಬಳೆಯಲ್ಲ, ಬರೋಬ್ಬರಿ 1 ಕೆಜಿ ಬಂಗಾರ ನೀಡಿ ಸನ್ಮಾನ ಮಾಡಲಾಗುವದು ಎಂದು ಮುರುಗೇಶ್ ನಿರಾಣಿ ಆಫರ್ ಕೊಟ್ಟಿದ್ದಾರೆ.
ಭಾನುವಾರ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಹತ್ವದ ನಿರ್ಣಯ: ಬೆಳಗಾವಿಯಲ್ಲಿ ಭಾನುವಾರ ನಡೆದ ಪಂಚಮಸಾಲಿ ವಕೀಲರ ರಾಜ್ಯಮಟ್ಟದ ಸಮಾವೇಶದಲ್ಲಿ ಮೀಸಲಾತಿ ಹೋರಾಟದ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ 7ನೇ ಹಂತದ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ಅದರೊಳಗೆ, ಹಿಂದುಳಿದ ಆಯೋಗದಿಂದ ಪೂರ್ಣಪ್ರಮಾಣದ ವರದಿ ಪಡೆದು 2 ಮೀಸಲಾತಿ ನೀಡಬೇಕು. ಪಂಚಮಸಾಲಿ ಸೇರಿ ಎಲ್ಲ ಲಿಂಗಾಯತರನ್ನು ಕೇಂದ್ರದ ಒಬಿಸಿಗೆ ಸೇರ್ಪಡೆ ಕ್ರಮ ವಹಿಸಬೇಕು ಎಂದು ತೀರ್ಮಾನಿಸಲಾಗಿತ್ತು. ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಿ ಕೇಂದ್ರ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಕ್ರಮವಹಿಸಲು ಶಿಫಾರಸು ಕಳಿಸಬೇಕು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಚಳಿಗಾಲ ಅಧಿವೇಶನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕೂಡಲಸಂಗಮ ಸ್ವಾಮೀಜಿ ಸಮಾವೇಶದಲ್ಲಿ ನಿರ್ಣಯದ ಮಾಹಿತಿ ಹಂಚಿಕೊಂಡಿದ್ದರು.
ಪಂಚಮಲಸಾಲಿ 2ಎ ಮೀಸಲಾತಿ: ಬಿಜೆಪಿ ಸರ್ಕಾರ ಮಾಡಿದ ಸ್ಪಂದನೆ ಸಿದ್ದರಾಮಯ್ಯ ಸರ್ಕಾರ ಮಾಡ್ತಿಲ್ಲ, ಕೂಡಲ ಶ್ರೀ
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರದ ಬಗ್ಗೆ ಶ್ರೀಗಳು ಯಾವುದೇ ಸ್ವಾರ್ಥ ಇಲ್ಲದೇ ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ನಮಗೆ ಸಿಎಂ ಎರಡು ದಿನಗಳಲ್ಲಿ ಭೇಟಿಯಾಗುವ ಭರವಸೆ ಕೊಟ್ಟಿದ್ದರು. ಬೆಂಗಳೂರಿಗೆ ಹೋದ ಬಳಿಕ ಸಿಎಂ ಮರೆತು ಬಿಟ್ಟರು. ನಮ್ಮವರೇ ಸಿಎಂ ಬೈಯುತ್ತಾರೆ, ಅವರು ಹುಲಿ ಎಂದು ಬಿಂಬಿಸಿದರು. ಬೊಮ್ಮಾಯಿ ಕಾಲದಲ್ಲಿ ನಾವು ಹಠ ಮಾಡಿ ಕೆಲಸ ಮಾಡಿಸಿದ್ದೇನೆ. ಬೊಮ್ಮಾಯಿ ನನ್ನನ್ನು ಕರೆದು ಸಚಿವನಾಗಿ ಮಾಡೋ ಭರವಸೆ ಕೊಟ್ಟಿದ್ದರು. ಇದೆಲ್ಲ ನಾಟಕ ಬೇಡ, ನಮಗೆ ಮೀಸಲಾತಿ ಕೊಡಿ ಎಂದು ಹೇಳಿದ್ದೆ. ನಮ್ಮ ಪಕ್ಷದಲ್ಲಿ ಒಂದು ಕುತಂತ್ರ ನಡೆಯಿತು. ಚುನಾವಣೆ ಘೋಷಣೆ ಆಗೋ ದಿನ ದೊಡ್ಡ ಕುತಂತ್ರ ನಡೆಯಿತು. ಯಡಿಯೂರಪ್ಪ ಬೇಡ ಎಂದಾಗ, ಅಮಿತ್ ಶಾ ಕೊಡಿ ಎಂದರು. ಹೀಗಾಗಿ, ಒಂದು ರಾತ್ರಿಯಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬೆಳಗಾವಿ ಪಂಚಮಸಾಲಿ ಸಮಾವೇಶದಲ್ಲಿ ತಿಳಿಸಿದ್ದರು.