ದೊಡ್ಡಬಳ್ಳಾಪುರ: ಅಮೆರಿಕಾದ ಉದ್ಯೋಗ ಬಿಟ್ಟು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಎಂಎಸ್ ಪದವೀಧರ..!
ದೊಡ್ಡಬಳ್ಳಾಪುರ ಕಣದಲ್ಲಿ ಅತಿ ಕಿರಿಯ ವಯಸ್ಸಿನ ಬಿಜೆಪಿ ಅಭ್ಯರ್ಥಿ ಧೀರಜ್, ಅದೃಷ್ಟ ಪರೀಕ್ಷೆಗಿಳಿದಿರುವ ಟೆಕ್ಸಾಸ್ ವಿವಿ ಎಂಎಸ್ ಪದವೀಧರ.
ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ(ಏ.26): ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಸಾಕಷ್ಟುಹೊಸ ಮುಖಗಳು ಗಮನ ಸೆಳೆದಿದ್ದಾರೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ 6 ದಶಕಗಳ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿಯೊಬ್ಬರು ರಾಷ್ಟ್ರೀಯ ಪಕ್ಷವೊಂದರಿಂದ ಚುನಾವಣಾ ಕಣಕ್ಕಿಳಿದಿರುವುದು ವಿಶೇಷವಾಗಿದೆ. ಸಾಕಷ್ಟು ಪೈಪೋಟಿಯ ನಡುವೆಯೂ ಬಿಜೆಪಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 31 ವರ್ಷ ವಯಸ್ಸಿನ ತರುಣ, ಅಮೆರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಸ್ನಾತಕೋತ್ತರ ಪದವಿ ಪಡೆದಿರುವ ಧೀರಜ್ ಮುನಿರಾಜ್ ಅವರಿಗೆ ಸ್ಪರ್ಧೆಯ ಅವಕಾಶ ನೀಡಿದೆ.
ರಾಜಕೀಯ ಹಿನ್ನೆಲೆ ಇಲ್ಲ!
ಕೃಷಿ ಹಿನ್ನಲೆಯಿಂದ ಬಂದರೂ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಯೋಗಗಳ ಮೂಲಕ ಯಶಸ್ಸು ಗಳಿಸಿದ ಪಿ.ಮುನಿರಾಜ್ ಅವರ ಪುತ್ರ ಧೀರಜ್ ಮುನಿರಾಜ್, ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ವಿದೇಶೀ ವ್ಯಾಮೋಹಕ್ಕೊಳಗಾಗದೆ, ಭಾರತದ ಸಾಂಸ್ಕೃತಿಕ ನೆಲೆಗಟ್ಟಿನಲ್ಲೇ ಬದುಕು ಕಟ್ಟಿಕೊಳ್ಳುವ ಹಂಬಲ ಹೊಂದಿರುವ ಅಪ್ಪಟ ದೇಸಿ ವ್ಯಕ್ತಿತ್ವ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಸಮಾಜಮುಖಿ ಚಿಂತನೆಗಳ ತುಡಿತ, ಜನಸ್ನೇಹಿ ಆಲೋಚನೆಗಳ ಹಂಬಲ ಹಾಗೂ ಗುಣಾತ್ಮಕ ಬದಲಾವಣೆಯ ಸಂಕಲ್ಪದೊಂದಿಗೆ ಸಾರ್ವಜನಿಕ ಬದುಕಿನಲ್ಲಿ ಗುರ್ತಿಸಿಕೊಳ್ಳುತ್ತಿದ್ದಾರೆ.
ರಾಜಕೀಯ ನಿವೃತ್ತಿ ಬಯಸಿದವರಿಗೆ ಬಿಜೆಪಿಯಿಂದ ಬಲವಂತದ ಟಿಕೆಟ್: ಶಾಸಕ ಶರತ್ ಬಚ್ಚೇಗೌಡ
ಅಮೆರಿಕಾ ಬಿಟ್ಟು ಬಂದ ತರುಣ:
ಬೆಂಗಳೂರು ಮೂಲದ ಅವರು, ಆರ್.ವಿ.ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದರು. ಟೆಕ್ಸಾಸ್‌ನಲ್ಲಿ ಎಂ.ಎಸ್ ಪದವಿ ಪಡೆದ ಬಳಿಕ ಅಮೆರಿಕಾದಲ್ಲಿ ಉದ್ಯೋಗಾವಕಾಶ ದೊರೆತರೂ ಅದನ್ನು ಬಿಟ್ಟು, ಬೆಂಗಳೂರಿಗೆ ವಾಪಸ್ಸಾದ ಅವರು, ಕೆಲ ದಿನ ಸಿಬಿಆರ್‌ಇ ಸೇರಿದಂತೆ ಕೆಲ ಕಂಪನಿಗಳಲ್ಲಿ ಕೆಲಸ ಮಾಡಿ ದ್ದರು. ಸಣ್ಣ ವಯಸ್ಸಿನಲ್ಲೇ ತುಮಕೂರು ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಅಂಜನಾದ್ರಿ ಟ್ರಸ್ಟ್ ಮೂಲಕ ಸೇವಾಕಾರ‍್ಯಗಳ ಮೂಲಕ ಗುರ್ತಿಸಿಕೊಂಡದ್ದು ವಿಶೇಷ.
ನರೇಂದ್ರ ಮೋದಿ ಪ್ರಭಾವ:
ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರ ನಿರ್ಮಾಣ ಚಿಂತನೆಗಳಿಂದ ಪ್ರಭಾವಿತರಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ದೇಶ ಮೊದಲು’ ಪರಿಕಲ್ಪನೆಯ ಆರಾಧಕರಾಗಿ ತಮ್ಮ ತಾತ್ವಿಕ ನಿಲುವುಗಳನ್ನು ಗಟ್ಟಿಯಾಗಿ ಕಟ್ಟಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಯ ನವೋತ್ಸಾಹದಲ್ಲಿ ಉನ್ನತ ನೆಲೆ ಕಂಡುಕೊಳ್ಳುವ ಹಂಬಲ ಹೊಂದಿದ್ದೇನೆ. ಬಿಜೆಪಿ ಇದಕ್ಕೆ ಉತ್ತಮ ವೇದಿಕೆ ಎನ್ನುತ್ತಾರೆ ಧೀರಜ್.
ದೊಡ್ಡಬಳ್ಳಾಪುರದಲ್ಲಿ ಸಿಎಂ ರೋಡ್ ಶೋ: ಜನ ವಾಹಿನಿ ವಾಹನ ಪರಿಶೀಲಿಸಿದ ಪೊಲೀಸರು
ಕ್ಷೇತ್ರದ ನಾಡಿಮಿಡಿತದ ಅರಿವು:
ಕಳೆದ 3 ವರ್ಷಗಳಿಂದ ನಿರಂತರ ಜನಸಂಪರ್ಕದಲ್ಲಿರುವ ಧೀರಜ್ ಮುನಿರಾಜ್, ದೊಡ್ಡಬಳ್ಳಾಪುರ ಕ್ಷೇತ್ರದ ನಾಡಿಮಿಡಿತದ ಬಗ್ಗೆ ನಿರ್ದಿಷ್ಟಅರಿವು ಹೊಂದಿರುವುದಾಗಿ ಹೇಳು ತ್ತಾರೆ. ಇಲ್ಲಿನ ಕೃಷಿ, ನೇಕಾರಿಕೆ, ಕಾರ್ಮಿಕ ವರ್ಗದ ಸಂಕಷ್ಟಗಳು ಮತ್ತು ಅವುಗಳ ಪರಿಹಾರೋಪಾಯಗಳ ಬಗ್ಗೆ ತಮ್ಮದೇ ಆದ ದೂರದೃಷ್ಟಿಯ ಆಲೋಚನೆಗಳು ತಮ್ಮಲ್ಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸುತ್ತಾರೆ.
ನನ್ನ ಜನಪರ ಕಾರ‍್ಯಗಳನ್ನು ಗಮನಿಸಿಯೇ ಪಕ್ಷ ತಮಗೆ ಟಿಕೆಟ್ ನೀಡಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಂತೃಪ್ತ ಬದುಕಿನ ಸೂತ್ರಗಳು ರಾಜಕೀಯ ವ್ಯಕ್ತಿಗಳ ಪ್ರಥಮ ಆದ್ಯತೆಯಾಗಬೇಕು. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬದಲಾವಣೆಯ ಮಹತ್ವಾಕಾಂಕ್ಷೆಯೊಂದಿಗೆ ಕಣಕ್ಕಿಳಿದಿದ್ದೇನೆ ಅಂತ ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ತಿಳಿಸಿದ್ದಾರೆ.